UN NETWORKS
ಕೊಣಾಜೆ: ಕೃಷಿ ವೃತ್ತಿ ಅವಗಣನೆಗೆ ಒಳಪಟ್ಟು ಗ್ರಾಮದ ರೈತರ ಕೃಷಿಭೂಮಿಗಳು ಹಡೀಲು ಬಿದ್ದು ನಿಷ್ಪ್ರಯೋಜಕವಾಗುತ್ತಿರುವುದು, ನಮ್ಮ ದೇಶದ ದುರಂತ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ನಡೆ ರೈತರ ಹಡಿಲುಭೂಮಿಯ ಕಡೆ ಎಂಬ ಧ್ಯೇಯವಾಕ್ಯದೊಂದಿಗೆ ಕಳೆದೆರಡು ವರ್ಷಗಳಿಂದ ಮಂಗಳೂರು ರಥಬೀದಿಯ ರಾಷ್ಟ್ರೀಯ ಸೇವಾ ಯೋಜನಾ ವಿದ್ಯಾರ್ಥಿಗಳು ಸ್ವ-ಇಚ್ಛೆಯಿಂದ ಕೃಷಿ ಕಾರ್ಯದಲ್ಲಿ ಅರಿವು ಪಡೆದುಕೊಳ್ಳುತ್ತಿರುವುದರೊಂದಿಗೆ ರೈತರ ಹಡಿಲು ಭೂಮಿಯಲ್ಲಿ ಕೃಷಿಯೋಗ್ಯವಾಗಿಸುವ ಮೂಲಕ ಮೂರು ವರ್ಷಗಳ ವರೆಗೆ ದತ್ತು ತೆಗೆದುಕೊಂಡು ಸಾವಯಾವ ಕೃಷಿ ಮಾಡಿ ಬಂಗಾರದ ಬೆಳೆ ತೆಗೆದಿರುವುದು ಶ್ಲಾಘನೀಯ ಎಂದು ಶ್ಯಾನುಭೋಗರ ಮನೆ ಕೊಣಾಜೆ ಇಲ್ಲಿನ ಪ್ರಗತಿಪರ ಕೃಷಿಕ ಸುದರ್ಶನ ಭಟ್ ಅಭಿಪ್ರಾಯಪಟ್ಟರು.
ಅವರು ತುಳು ಸಾಹಿತ್ಯ ಅಕಾಡೆಮಿ ಮತ್ತು ಡಾ.ಪಿ.ದಯಾನಂದ ಪೈ, ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ನಡೆದ `ತುಳುವ ಬಂಗಾರ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾಟ್ಯನಿಕೇತನ ಉಳ್ಳಾಲ ಇದರ ನಿರ್ದೇಶಕಿ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ರಾಜಶ್ರೀ ಉಳ್ಳಾಲ್ ಮಾತನಾಡಿ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಯಗಳ ಮೂಲಕ ಕಾರ್ಯ ನಿರ್ವಹಿಸುವ ಮೂಲಕ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಡಾ| ನವೀನ್ ಎನ್. ಕೊಣಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ದೇವಸ್ಥಾನ, ಚರ್ಚು, ಮಸೀದಿಗಳ ಜೀರ್ಣೋದ್ಧಾರಕ್ಕಿಂತ ನಾವು ತಿನ್ನುವ ಆಹಾರ ಬೆಳೆಯುವ ಗದ್ದೆಗಳನ್ನು ಗ್ರಾಮಸ್ಥರು ಜೀರ್ಣೋದ್ಧಾರ ಗೊಳಿಸಬೇಕಾಗಿರುವುದು ಇಂದಿನ ತುರ್ತು ಕಾರ್ಯವಾಗಬೇಕಾಗಿದೆ. ಈ ಕರ್ತವ್ಯದಲ್ಲಿ ಯುವ ಜನತೆ ತೊಡಗಿಸಿಕೊಂಡಾಗ ದೇವತಾ ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಲ್ಲಿ ದೇವರು ಹೆಚ್ಚು ನಮಗೊಲಿಯುತ್ತಾನೆ. ಮಾತ್ರವಲ್ಲ ಭೂಮಿ ಹಚ್ಚ ಹಸುರಾಗಿದ್ದರೆ ನಮ್ಮ ಜೀವನವೂ ಕೂಡಾ ಸದಾ ಹಸಿರಾಗಿರುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ್ತಿ ಶ್ರೀ ಅರಸು ಮುಂಡತ್ತಾಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರು, ಉದ್ಯಮಿ ದೇವಣ್ಣ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸುಂದರ ಶೆಟ್ಟಿಗಾರ್ ಮುಚ್ಚಿಲಕೋಡಿ, ಯು.ಬಿ.ಎಂ.ಸಿ ಬೆಳ್ಮ ಹಿ.ಪ್ರಾ. ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ಕೆ., ಗಟ್ಟಿ ಸಮಾಜದ ಹಿರಿಯ ಹಾಗೂ ಪ್ರಗತಿಪರ ಕೃಷಿಕ ಬೂಬ ಗಟ್ಟಿ ಕಲ್ಕಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಲಕ್ಷ್ಮಣ ಚಬ್ಬಿ ಸ್ವಾಗತಿಸಿದರು. ರಾಜೇಶ್ವರೀ ಮತ್ತು ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಬೆಳಕಿನ ಹಬ್ಬದಲ್ಲಿ ಭಾಗವಹಿಸಿದ ಗ್ರಾಮಸ್ಥರು ಶಿಬಿರದ ವಿದ್ಯಾರ್ಥಿಗಳಿಗೆ ಕೈ ತುತ್ತನ್ನು ಕೊಡುವ ಮೂಲಕ ಗ್ರಾಮ ಸಾಮರಸ್ಯಕ್ಕೆ ನಾಂದಿ ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ನಾಟ್ಯನಿಕೇತನ ಕೊಲ್ಯ ಇವರ ನೇತೃತ್ವದಲ್ಲಿ “ಎಳ್ವೆರ್ ದಯ್ಯಾರ್” ಎಂಬ ತುಳು ಪೌರಾಣಿಕ ನೃತ್ಯರೂಪಕ ನಡೆಯಿತು.


