UN NETWORKS
ಅಸೈಗೋಳಿ: ಶಬರಿಮಲೆಯಲ್ಲಿ ಹಿಂದಿನಿಂದಲೂ ವಿಶೇಷ ಸಂಸ್ಕಾರ, ಸಂಸ್ಕೃತಿ ಇದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ಮಹಿಳೆಯರೇ ವಿರೋಧಿಸುವ ಮೂಲಕ ಕ್ಷೇತ್ರದ ಪಾವಿತ್ರ್ಯತೆ ಕಾಪಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗುರುಸ್ವಾಮಿ ವಿಶ್ವನಾಥ ಕಾಯರ್ ಪಳಿಕೆ ಅಭಿಪ್ರಾಯಪಟ್ಟರು.
ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಭಾನುವಾರ ನಡೆದ ಶ್ರೀ ಧರ್ಮಶಾಸ್ತ ಅಯ್ಯಪ್ಪನ ನೂತನ ವಿಗ್ರಹದ ಎರಕ ಹೊಯ್ಯುವ ಕಾರ್ಯಕ್ರಮ, ನೂತನ ನಾಗನಕಟ್ಟೆಯ ಭೂಮಿಪೂಜೆ ಹಾಗೂ 32ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಅಸೈಗೋಳಿ ಅಯ್ಯಪ್ಪ ಸ್ವಾಮಿ ಮಂದಿರಕ್ಕೆ ಈಗಾಗಲೇ 15 ಲಕ್ಷ ಅನುದಾನ ನೀಡಲಾಗಿದೆ, ಇನ್ನಷ್ಟು ಅನುದಾನ ನೀಡುವ ಇಚ್ಛೆ ಇತ್ತಾದರೂ ಕ್ಷೇತ್ರದ ವಿವಿದ ಕಡೆ ದೇವಸ್ಥಾನ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಹೆಚ್ಚಿನ ಅನುದಾನ ನೀಡುವುದು ಅಸಾಧ್ಯ ಎನಿಸಿದೆ ಎಂದು ಹೇಳಿದರು.
ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕೋಟೆಕಾರ್ ಬಂಟರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರ್ ಗುತ್ತು, ಕೊಣಾಜೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶಂಕರ ನಾರಾಯಣ ಭಟ್, ಉಪ್ಪಳ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಸತೀಶ್ಚಂದ್ರ ಶೆಟ್ಟಿ ಕುಡಾಲಗುತ್ತು, ಉದ್ಯಮಿಗಳಾದ ಸುರೇಶ್ ಭಟ್ನಗರ, ಅಶೋಕ್ ಭಂಡಾರಿ ಚೇಳೂರು, ಮಂಜುನಾಥ ಆಳ್ವ ತೇವುನಾಡುಗುತ್ತು, ಡಿ ವರ್ಗ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಮಾಜಿ ಪಟೇಲ ರಘುರಾಮ ಕಾಜವ, ಅಸೈಗೋಳಿ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕೊಣಾಜೆ ಗ್ರಾ.ಪಂ. ಅಧ್ಯಕ್ಷ ನಝರ್ ಷಾ ಪಟ್ಟೋರಿ, ನಿಕಟಪೂರ್ವ ಅಧ್ಯಕ್ಷ ಶೌಕತ್ ಅಲಿ ಮುಖ್ಯ ಅತಿಥಿಗಳಾಗಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಗೌರವಾಧ್ಯಕ್ಷರಾದ ಸುರೇಶ್ ಚೌಟ ಕಕ್ಕೆಮಜಲು, ಪ್ರಶಾಂತ ಕಾಜವ ಮಿತ್ತಕೋಡಿ, ಕಾರ್ಯಾಧ್ಯಕ್ಷ ವಿಶ್ವನಾಥ ನಾಯ್ಕ್ ಪುತ್ತಿಗೆ ಉಪಸ್ಥಿತರಿದ್ದರು.
ಮಂದಿರದ ಗೌರವ ಸಲಹೆಗಾರ ತ್ಯಾಗಂ ಹರೇಕಳ ಸ್ವಾಗತಿಸಿದರು. ಸಂಚಾಲಕ ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರ.ಕಾ. ರಾಮಕೃಷ್ಣ ಪಟ್ಟೋರಿ ವಂದಿಸಿದರು. ಗೌರವ ಸಲಹೆಗಾರ ಆನಂದ ಕೆ.ಅಸೈಗೋಳಿ ಕಾರ್ಯಕ್ರಮ ನಿರೂಪಿಸಿದರು.


