UN NETWORKS
ಪಾವೂರು: ಸಮಾಜದಲ್ಲಿ ಜನರಿಗೆ ಜೀವನ ನಡೆಸಲು ಇರುವ ಹಕ್ಕು ಪಶುಗಳಿಗೂ ಇದ್ದು ನಮ್ಮಂತೆ ಅವುಗಳಿಗೂ ಆಹಾರ ನೀಡಿ ಸಲಹಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಪಾವೂರು ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಪಾವೂರು ಪಶು ಚಿಕಿತ್ಸಾಲಯದಲ್ಲಿ ಭಾನುವಾರ ನಡೆದ ಮಿಶ್ರತಳಿ ಹಸು, ಕರುಗಳ ಪ್ರದರ್ಶನ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ನಾಲ್ಕು ಗೋಶಾಲೆಗಳಿ 38 ಲಕ್ಷ ಅನುದಾನ ನೀಡುತ್ತಿದೆ. ಪ್ರತಿ ಗೋವಿಗೂ ಸರ್ಕಾರ ತಿಂಗಳಿಗೆ ಮೂರುವರೆ ಸಾವಿರ ರೂಪಾಯಿ ಖರ್ಚು ಮಾಡುತ್ತಿದೆ. ಮುಂದೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದ್ದು, ಇದಕ್ಕೆ ಬೇಕಾಗುವ ಅನುದಾನ ಸರ್ಕಾರದಿಂದ ದೊರಕಿಸಲಾಗುವುದು. ಅನುಮಾನಕ್ಕೆ ಕಾಯದೆ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡು ದೊಡ್ಡ ಬಹುಮಾನ ನೀಡಲು ಕ್ರಮ ಕೈಗೊಳ್ಳಿ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಮಂಗಳೂರು ಕ್ಷೇತ್ರಕ್ಕೆ ಒಂಬತ್ತು ಪಶು ಚಿಕಿತ್ಸಾಲಯಗಳನ್ನು ಸಚಿವರು ಬಿಡುಗಡೆಗೊಳಿಸಿದ್ದು ಪಾವೂರು ಗ್ರಾಮವೂ ಒಂದಾಗಿದೆ. ಸಚಿವರ ಸೂಚನೆ ಮೇರೆಗೆ ಹಸು, ಕರುಗಳ ಪ್ರದರ್ಶನ ಏರ್ಪಡಿಸಿ ರೈತರಿಗೆ ಉತ್ತೇಜನ ನೀಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ನಾಲ್ಕು ಅಂಗನವಾಡಿ ಕಟ್ಟಡಗಳಿಗೆ ಶಿಲಾನ್ಯಾಸಗೈಯಲಾಯಿತು. ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಬೋಳಿಯಾರ್ ಗ್ರಾಮದ ಫಲಾನುಭವಿಗೆ ಅಲ್ಪಸಂಖ್ಯಾತ ಇಲಾಖೆಯಿಂದ ಟ್ಯಾಕ್ಸಿ ಹಾಗೂ ಪಜೀರು ಗೋವನಿತಾಶ್ರಮಕ್ಕೆ 13.56 ಲಕ್ಷದ ಚೆಕ್ ವಿತರಿಸಲಾಯಿತು. ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಫಿರೋಜ್ ಮಲಾರ್ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ಅಬ್ದುಲ್ ಜಬ್ಬಾರ್ ಬೋಳಿಯಾರ್, ಪದ್ಮಾವತಿ ಪೂಜಾರಿ, ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ.ಇಬ್ರಾಹಿಂ, ಗ್ರಾ.ಪಂ. ಸದಸ್ಯರಾದ ಐ.ಬಿ.ಹಸೈನಾ, ಸುನೀತಾ ಲೋಬೋ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಮೋಹನ್ ಎಸ್., ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಶ್ಯಾಮಲಾ ಸಿ.ಕೆ., ಜಿ.ಪಂ. ಮಾಜಿ ಸದಸ್ಯ ಮೆಲ್ವಿನ್ ಡಿಸೋಜ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ, ಉಗ್ಗಪ್ಪ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ಡಾ.ಮಲ್ಲಿಕಾರ್ಜುನ, ಡಾ.ಅಶೋಕ್ ಕೆ.ಆರ್ ಹಾಗೂ ಅಶೋಕ್ ಕುಮಾರ್ ಜಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಡಾ.ಎಂ.ಎನ್.ರಾಜಣ್ಣ ಸ್ವಾಗತಿಸಿದರು. ಪಶುಪಾಲನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮೋಹನ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.
‘ಹಿಂದೆ ಪ್ರತಿ ಭಾನುವಾರ ವಿಟ್ಲ ತೋಟಕ್ಕೆ ಹೋಗುತ್ತಿದ್ದೆ, ಯಮುನಕ್ಕ ಪಶುಗಳಿಗೆ ನೀಡುತ್ತಿದ್ದ ಕುಡು ನೀರು ನಮಗೆ ನೀಡದಿದ್ದರೆ ಸಮಧಾನವೇ ಇರುತ್ತಿರಲಿಲ್ಲ, ಕುಡುವಿನ ಸೂಪ್ ಮಟನ್, ಚಿಕನ್ ಸೂಪ್ ಗಿಂತ ಕಡಿಮೆಯಿಲ್ಲ’.
ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ


