UN NETWORKS
ಕೊಣಾಜೆ: ಇಂದಿನ ಚಲನಚಿತ್ರಗಳಲ್ಲಿ ಕೇವಲ ಮನರಂಜನೆಯನ್ನೇ ಗುರಿಯಾಗಿಸಿವೆ. ಪ್ರಮುಖವಾಗಿ ಚಿತ್ರಗಳು, ಕಿರುಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರೊಂದಿಗೆ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಶಾಂತ್ ಮಾರ್ಲ ಅವರು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪೀಠ ಕ್ರಿಯೇಷನ್ಸ್ ತಂಡದ ಕರೆ ಎನ್ನುವ ಕನ್ನಡ ಕಿರು ಚಿತ್ರವನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣ ಇವತ್ತಿನ ಯುಗದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಶಿಕ್ಷಣಕ್ಕೆ ಮಹತ್ವ ನೀಡುವ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತಹ ಚಿತ್ರವನ್ನು ನೀಡಬೇಕಾಗಿದೆ. ಕರೆ ಕಿರುಚಿತ್ರವು ಯುವಕರ ತಂಡದಿಂದ ನಿರ್ಮಾಣಗೊಂಡಿದ್ದು ಉತ್ತಮ ಪ್ರಯತ್ನವಾಗಿದೆ. ಇದರಲ್ಲಿ ಸಮಾಜಕ್ಕೊಂದು ಸಂದೇಶವಿದ್ದು, ಮುಂದಿನ ದಿನಗಳಲ್ಲಿ ಈ ತಂಡದಿಂದ ಇನ್ನಷ್ಟು ಪ್ರಯತ್ನಗಳು ನಡೆಯಲಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಎ.ಎಮ್.ಖಾನ್‍ರವರು ಮಾತಾನಾಡಿ ಈಗಿನ ಜನಾಂಗಕ್ಕೆ ತಂತ್ರಜ್ಞಾನ ಮುಂದುವರಿದ ಹಾಗೆ ಮಾಧ್ಯಮ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಾಗಿವೆ. ಕಿರುಚಿತ್ರಗಳನ್ನು ಮತ್ತು ಇತರ ಸಮಾಜಕ್ಕೆ ಒಳಿತಾಗುವಂತಹ ಉತ್ತಮ ರೀತಿಯ ಪ್ರಯತ್ನಗಳನ್ನು ಯುವಕರು ಮಾಡಬೇಕು. ಇತ್ತೀಚೆಗೆ ವಿದ್ಯಾರ್ಥಿಗಳಿಂದ ಮೊಬೈಲ್‍ಗಳ ಬಳಕೆ ಹೆಚ್ಚಾಗುತ್ತಿದ್ದು, ಇದು ಆರೋಗ್ಯದ ಮೇಲಿನ ಪರಿಣಾಮದ ಜೊತೆಗೆ ಶಿಕ್ಷಣಕ್ಕೂ ಹಾನಿಕಾರಕವಾಗಿದೆ. ಆದ್ದರಿಂದ ಮೊಬೈಲ್ ಬದಲು ಕಂಪ್ಯೂಟರ್ ಹೆಚ್ಚು ಬಳಕೆ ಉತ್ತಮ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಸೋಮಣ್ಣ ಹೊಂಗಳ್ಳಿ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಪ್ರಭಾಕರ ನೀರ್‍ಮಾರ್ಗ, ಮಂಗಳೂರಿನ ಉದ್ಯಮಿ ಪ್ರಾಣ್ ಹೆಗ್ಡೆ, ಎಜೆ ಆಸ್ಪತ್ರೆಯ ಹೆಚ್. ಆರ್. ಅಧಿಕಾರಿ ಲಕ್ಷ್ಮೀಶ, ಗುಣಕರ್ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕರೆ ಚಿತ್ರದ ನಿರ್ದೇಶಕ ದಿಲೀಪ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಯತೀಶ್ ಕುಡುಪು ಸ್ವಾಗತಿಸಿದರು, ಮಹೇಶ್ ಮೂಲ್ಯ ವಂದಿಸಿದರು. ಮನಸ್ವಿ ಕಾರ್ಯಕ್ರಮ ನಿರೂಪಿಸಿದರು.


