UN NETWORKS
ಉಳ್ಳಾಲ: ದೇರಳಕಟ್ಟೆ ಜಂಕ್ಷನ್ನಿನಲಲ್ಲಿರುವ ಬಂಕ್ ತೊಟ್ಟಿಯಲ್ಲಿ ನೀರು ಸೋರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಕಾನಕರೆ ಬಾವಿಗಳಲ್ಲಿ ಕಂಡು ಬಂದ ತೈಲ ಮಾದರಿ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.
ಕಳೆದ ವಾರದಿಂದ ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಕೆರೆ ಬಾವಿಗಳಲ್ಲಿ ಪೆಟ್ರೋಲ್ ಮಾದರಿಯ ತೈಲ ಪತ್ತೆಯಾಗಿತ್ತು. ಇದು ತೀವ್ರ ಕುತೂಹಲ ಕೆರಳಿಸಿದ್ದಲ್ಲದೆ ಸ್ಥಳಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. ನೀರನ್ನು ಹಲವು ಬಾರಿ ಪರೀಕ್ಷೆಗೊಳಪಡಿಸಲಾಗಿತ್ತು. ಕಾನಕೆರೆಯಿಂದ ಸುಮಾರು 120 ಅಡಿ ಎತ್ತರದ ದೇರಳಕಟ್ಟೆಯಲ್ಲಿರುವ ಪೆಟ್ರೋಲ್ ಬಂಕ್ ಇವೆಲ್ಲಕ್ಕೂ ಕಾರಣ ಎಂದು ಅನುಮಾನದ ಹಿನ್ನೆಲೆಯಲ್ಲಿ ಪಂಚಾಯಿತಿ ಸೂಚನೆ ಮೇರೆಗೆ ಒಂದು ದಿನ ಬಂಕ್ ಮುಚ್ಚಲಾಗಿತ್ತು. ಮರುದಿನ ಯಾವುದೇ ರೀತಿಯಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಸೋರಿಕೆಯಾಗದ ಹಿನ್ನೆಲೆಯಲ್ಲಿ ಬಂಕ್ ಕಾರ್ಯಾಚರಣೆಗೆ ಅವಕಾಶ ನೀಡಲಾಗಿತ್ತು.
ಕಳೆದ ಮೂರು ಬಾವಿಗಳ ನೀರು ಖಾಲಿ ಮಾಡಿದ ಸಂದರ್ಭ ಒಂದು ಬಾವಿಯಲ್ಲಿ ಕೆಂಪು ಬಣ್ಣದಿಂದ ಕೂಡಿದ ಪೆಟ್ರೋಲ್ ಕಂಡು ಬಂದಿತ್ತು. ಈ ನಿಟ್ಟಿನಲ್ಲಿ ಮೂರು ಬಾವಿಗಳನ್ನು ಪಂಚಾಯಿತಿ ವಶಕ್ಕೆ ಪಡೆದಿತ್ತು. ಅದಲ್ಲದೆ ಕಳೆದ ಶನಿವಾರ ಮತ್ತೆ ಬಂಕ್ ಬಂದ್ ಮಾಡಲಾಗಿದ್ದು ಡೀಸೆಲ್ ಮತ್ತು ಪೆಟ್ರೋಲ್ ಟ್ಯಾಂಕ್ ಖಾಲಿ ಮಾಡಿ ನೀರು ತುಂಬಲಾಗಿತ್ತು.
ಸೋಮವಾರ ಪಂಚಾಯಿತಿ ಅಧ್ಯಕ್ಷೆ ವಿಜಯಾ, ಉಪಾಧ್ಯಕ್ಷ ಬಿ.ಎಂ.ಸತ್ತಾರ್, ಸದಸ್ಯ ರಝಾಕ್, ತೈಲ ಸಂಸ್ಥೆಯ ಪ್ರತಿನಿಧಿಗಳಾದ ರಾಹಿಶ್ ಮತ್ತು ನಿತೇಶ್, ಬಂಕ್ ಮಾಲೀಕ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯಡಿ ಸಮ್ಮುಖದಲ್ಲಿ ಟ್ಯಾಂಕ್ ತೆರೆದಾಗ ಪೆಟ್ರೋಲ್ ಒಂದಷ್ಟು ಸೋರಿಕೆಯಾಗಿದ್ದು ಕಂಡು ಬಂತು. ಆದರೂ ಬಿಸಿಲಿನಿಂದ ಸೋರಿದೆ ಎಂದು ಅಂದಾಜಿಸಲಾಯಿತು.
ಆದರೂ ಅನುಮಾನ ಪರಿಹರಿಸುವ ನಿಟ್ಟಿನಲ್ಲಿ ಪೆಟ್ರೋಲ್ ಟ್ಯಾಂಕ್ ನೊಳಗೆ ಕಂಪ್ರೆಸರ್ ಬಳಸಿ ಗಾಳಿ ಬಿಟ್ಟಾಗ ಒಂದಷ್ಟು ರಭಸದಿಂದ ನೀರು ಹೊರಬಂತು. ಎರಡನೇ ಬಾರಿ ಗಾಳಿ ಬಿಟ್ಟು ನೀರು ಹಾಕಿದಾಗ ಸೋರಿಕೆಯಾಗುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಜಯಪ್ರಕಾಶ್ ನಾಯಕ್, ಪೆಟ್ರೋಲ್ ಟ್ಯಾಂಕ್ನಲ್ಲಿ ಸೋರಿಕೆ ಇರುವ ಕಾರಣ ಅದನ್ನು ಬದಲಾಯಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಐಒಸಿಎಲ್ ಸಂಸ್ಥೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.


