UN NETWORKS
ಮುಡಿಪು: ಗ್ರಾಮೀಣ ಪ್ರದೇಶದ ಬಡ ಜನರು ನೆಮ್ಮದಿಯುತ ಜೀವನ ನಡೆಸುವುದಕ್ಕಾಗಿ ರಾಜ್ಯ ಸರಕಾರವು ಬಡವರಿಗೆ ಮುಖ್ಯಮಂತ್ರಿ ಉಚಿತ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಎಷ್ಟೋ ಬಡ ಮಹಿಳೆಯರು ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಹೇಳಿದರು.
ಅವರು ಮುಡಿಪುವಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ವೌವ್ ವಿತರಣೆ ಹಾಗೂ ಅಡುಗೆ ಅನಿಲ ಬಳಕೆ ಬಗ್ಗೆ ಸುರಕ್ಷಾ ಕ್ರಮಗಳ ಕುರಿತು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಆಹಾರ ಸಚಿವನಾಗಿದ್ದ ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಉಚಿತ ಅನಿಲ ಭಾಗ್ಯ ಯೋಜನೆಯ ಬಗ್ಗೆ ತಿಳಿಸಿದಾಗ ಬಡವರಿಗೆ ಅನುಕೂಲವಾಗುವ ಯೋಜನೆಗೆ ಪ್ರೋತ್ಸಾಹ ನೀಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯೋಜನೆಯನ್ನು ಮುಂದುವರಿಸಿದ್ದಾರೆ. ಈ ಯೋಜನೆಯಲ್ಲಿ ಸಿಲಿಂಡರ್, ಸ್ವೌವ್, ರೆಗ್ಯುಲೇಟರ್ ಜೊತೆಗೆ ಎರಡು ಸಲ ಉಚಿತ ರಿಫಿಲ್ ಕೂಡಾ ಮಾಡಲಾಗುತ್ತಿದೆ. ಈ ಯೋಜನೆಯು ಬಹಳಷ್ಟು ಬಡ ಜನರ ಬದುಕಿಗೆ ನೆರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಮಹಮ್ಮದ್ ಮೋನು, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ನಾಸೀರ್ ನಡುಪದವು, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಬಶೀರ್ ಮುಡಿಪು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


