UN NETWORKS
ಮುಡಿಪು: ಸರ್ಕಾರದ ಸಬ್ಸಿಡಿ, ಸಾಲಮನ್ನಾ ನೇರವಾಗಿ ಫಲಾನುಭವಿಗಳಿಗೇ ಸೇರುವುದರಿಂದ ಸಹಕಾರಿ ಸಂಘಗಳು ಜನಸಾಮಾನ್ಯರ ಬಂಡವಾಳದಿಂದಲೇ ಮುನ್ನಡೆಯುತ್ತಿದೆ, ಆದರೆ ಸರ್ಕಾರದ ಕೆಲಸ ಸಂಘಗಳು ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಂ.ಎನ್.ರಾಜೇದ್ರ ಕುಮಾರ್ ಹೇಳಿದರು.
ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಳ, ದ.ಕ.ಜಿಲ್ಲ ಕೇಂದ್ರ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರಿ ಇಲಾಖೆ ಹಾಗೂ ಬಂಟ್ವಾಳ ತಾಲೂಕಿನ ಪತ್ತಿನ ಪ್ರಾಥಮಿಕ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹ-2018ರ ಪ್ರಯುಕ್ತ ಮುಡಿಪುವಿನಲ್ಲಿ ಶುಕ್ರವಾರ ನಡೆದ `ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್ ನಿರ್ಮಾಣ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಷ್ಟೇ ದೊಡ್ಡ ಬ್ಯಾಂಕ್ಗಳಿದ್ದರೂ ಕಟ್ಟಕಡೆಯ ರೈತನನ್ನು ತಲುಪುವುದು ಸಹಕಾರಿ ಬ್ಯಾಂಕ್ಗಳು ಮಾತ್ರ, ರೈತರ ಆರ್ಟಿಸಿ ಪಡೆದು ಸಾಲ ನೀಡುವ ರಾಷ್ಟ್ರೀಯ ಬ್ಯಾಂಕ್ಗಳು ಸಾಲಮನ್ನಾಕ್ಕೆ ಹಿಂದೇಟು ಹಾಕುತ್ತಿದ್ದರೂ ಸಹಕಾರಿ ಬ್ಯಾಂಕ್ಗಳು ರೈತರಿಗಾಗಿ ಪ್ರಾಮಾಣಿಕ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.ಸಭಾ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಹಕಾರಿ ಬ್ಯಾಂಕ್ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವುದಲ್ಲದೆ, ಜನರಲ್ಲಿ ಜಾಗೃತಿ ಮೂಡಿಸಿ ಸ್ವಾಭಿಮಾನದ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ದ.ಕ.ಜಿಲ್ಲೆ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೃಷಿ ಯಂತ್ರೋಪಕರಣ ಪ್ರದರ್ಶನ ಉದ್ಘಾಟಿಸಿದರು. ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಜಿ.ಪಂ.ಸದಸ್ಯೆ ಮಮತಾ ಗಟ್ಟಿ, ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಸಹಾಯಕ ನಿಬಂಧಕ ಎಸ್.ಜಿ.ಮಂಜುನಾಥ ಸಿಂಗ್, ಕುರ್ನಾಡು ಗ್ರಾ.ಪಂ.ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಹಾಪ್ಕಾಮ್ಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ಉಡುಪ, ತಾ.ಪಂ.ಸದಸ್ಯ ನವೀನ್ ಪಾದಲ್ಪಾಡಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ದೇವದಾಸ್ ಅಡಪ, ಸಂತೋಷ್ ಕುಮಾರ್ ಶೆಟ್ಟಿ, ಸ್ಕ್ಯಾಡ್ಸ್ ನಿರ್ದೇಶಕ ಜಯಶಂಕರ್ ಬಾಸ್ರಿತ್ತಾಯ, ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ ಮುಖ್ಯ ಅತಿಥಿಗಳಾಗಿದ್ದರು. ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಜಯರಾಮ ಶೆಟ್ಟಿ ವಂದಿಸಿದರು.
`ಮಹಿಳೆಯರೂ ಸ್ವಾವಂಭಿಗಳಾಗಿ ಜೀವನ ಸಾಗಿಸುವಂತಾಗಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಗುಂಪುಗಳಾಗಿ ಪೇಪರ್ ಕಪ್, ವಸ್ತ್ರ ತಯಾರಿಯಂತಹ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ’
ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ


