UN NETWORKS
ಮಂಗಳೂರು : 2019ರ ಲೋಕಸಭಾ ಚುನಾವಣೆಯ ಕಾವು ಗರಿಗೆದರುತ್ತಿದ್ದಂತೆ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ನಲ್ಲೂ ಕಾವು ರಂಗೇರಿದೆ. ಕಳೆದ ಹಲವು ದಶಕಗಳಿಂದ ಜನಾರ್ಧನ ಪೂಜಾರಿಯ ಆಧಿಪತ್ಯದಲ್ಲಿದ್ದ ಈ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯ ಹುಡುಕಾಟ ಶುರುವಾಗಿದೆ. ಇದೀಗ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆನ್ನುವ ಕೂಗು ಮತ್ತಷ್ಟು ಬಲಗೊಂಡಿದ್ದು, ಈ ನಿಟ್ಟಿನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಮಹತ್ವದ ಸಭೆಯೊಂದನ್ನೂ ನಡೆಸಿದೆ.
ಈ ಸಭೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಡ ಹೇರುವ ಕುರಿತಂತೆ ಚರ್ಚೆಗಳಾಗಿವೆ. ಆದರೆ ಜಿಲ್ಲೆಯಲ್ಲಿ ಹಲವು ಮುಸ್ಲಿಮರು ಆಕಾಂಕ್ಷಿಗಳಾಗಿದ್ದರೂ ಸಮರ್ಥರ ಹುಡುಕಾಟ ಪ್ರಾರಂಭಗೊಂಡಿದೆ. ಯುಟಿ ಕಾದರ್, ಕೆಎಸ್ ಮಸೂದ್, ಮೊಯಿದ್ಬಾವಾ, ಕೋಡಿಜಾಲ್ ಇಬ್ರಾಹಿಂ, ಅಮೀರ್ ತುಂಬೆ ಮೊದಲಾದ ಘಟಾನುಘಟಿಗಳ ಹೆಸರು ಮುಂಚೂಣಿಯಲ್ಲಿದ್ದರೂ ಹೈಕಮಾಂಡ್ ನಿರ್ಧಾರ ಏನೆಂದು ಇನ್ನೂ ಸ್ಪಷ್ಟಗೊಂಡಿಲ್ಲ. ಕಾಂಗ್ರೆಸ್ ಪಾಲಿಗೆ ಹೈಕಮಾಂಡೇ ಎಲ್ಲವೂ ಆಗಿರುವುದರಿಂದ ಹೈಕಮಾಂಡ್ಗೆ ಮನವರಿಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ.
ಮಂಗಳೂರು ಕ್ಷೇತ್ರ ಮೊದಲೇ ಹಿಂದುತ್ವದ ಪ್ರಯೋಗ ಭೂಮಿ. ಹಾಲಿ ಸಂಸದರು ಮಾತಿನ ಮಲ್ಲ. ಉತ್ತಮ ಭಾಷಣಕಾರ ಕೂಡಾ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕೂಡಾ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಸದ್ಯ ನಳಿನ್ ಕುಮಾರ್ ಗೆ ಸೆಡ್ಡು ಹೊಡೆಯಲು ಅಮೀರ್ ತುಂಬೆಯೇ ಸೂಕ್ತ ಅಭ್ಯರ್ಥಿ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರತೊಡಗಿದೆ. ಯುವ ಸಂಘಟನೆ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಅಮೀರ್ ತುಂಬೆ ಉತ್ತಮ ಭಾಷಣಕಾರ. ಕಾಂಗ್ರೆಸ್ ಇತಿಹಾಸಗಳ ಬಗ್ಗೆ ಸ್ಪಷ್ಟ ಜ್ಞಾನ ಇರುವ ಅಮೀರ್ ಬಿಜೆಪಿಯ ಮಿಥ್ಯಾರೋಪಗಳನ್ನು ಸಮರ್ಥವಾಗಿ ಎದುರಿಸ ಬಲ್ಲರು ಎಂಬ ಮಾತುಗಳನ್ನು ಕಾಂಗ್ರೆಸ್ ನ ಯುವ ಕಾರ್ಯಕರ್ತರು ಹೇಳುತ್ತಿದ್ದಾರೆ. ಲೋಕ ಸಭೆ, ವಿಧಾನಸಭೆ ಸಹಿತ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ಅಮೀರ್ ತುಂಬೆಗೆ ಟಿಕೆಟ್ ನೀಡುವುದೇ ಸೂಕ್ತ ಎಂಬುದು ಕಾಂಗ್ರೆಸ್ ನ ಕೆಲ ಯುವ ಕಾರ್ಯಕರ್ತರ ಅಭಿಪ್ರಾಯ.
ಕಾಂಗ್ರೆಸ್ ಬಲಿಷ್ಠ ಜಾತ್ಯಾತೀತ ಪಕ್ಷವಾಗಿದ್ದು, ಅಲ್ಪಸಂಖ್ಯಾತರಿಗೇ ಟಿಕೆಟ್ ನೀಡಬೇಕೆಂದಿಲ್ಲ. ಆದರೆ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತರದಾರರು ಹೆಚ್ಚಿದ್ದು, ಅಲ್ಪಸಂಖ್ಯಾತರು ಕಾಂಗ್ರೆಸ್ಗಾಗಿ ನಿರಂತರ ದುಡಿಯುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ದೊರೆತರೆ ಸಂತೋಷ ಎಂದು ಕಾಂಗ್ರೆಸ್ನ ಅಮೀರ್ ತುಂಬೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಟಿಕೆಟ್ಗಾಗಿ ಬಹಳಷ್ಟು ಕಸರತ್ತು ನಡೆಯುತ್ತಿದ್ದರೂ ಹೈ ಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತೆ ಎಂಬುದನ್ನು ಕಾದುನೋಡಬೇಕಿದೆ.


