ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಟ್ವಿಟ್ಟರ್ ಮತ್ತು ವಿದೇಶ ಪ್ರಯಾಣದಲ್ಲೇ ಕಾಲಹರಣ ನಡೆಸುತ್ತಿರುವ ಪ್ರಧಾನಿ ಮೋದಿ, ವಿದೇಶಿ ನೀತಿಯನ್ನು ಜಾರಿಗೊಳಿಸಿ ಕಾರ್ಮಿಕರ ಕೆಲಸಗಳಿಗೆ ಕತ್ತರಿ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಜಿಲ್ಲಾ ಸಿಐಟಿಯು ಪ್ರಧಾನ ಕಾರ್‍ಯದರ್ಶಿ ವಸಂತ ಆಚಾರಿ ಹೇಳಿದ್ದಾರೆ.

ಅವರು ಸಿಐಟಿಯು ಉಳ್ಳಾಲ ವಲಯ ಸಮಿತಿ ವತಿಯಿಂದ ಮೇ ದಿನಾಚರಣೆ-೨೦೧೫ರ ಪ್ರಯುಕ್ತ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಜರಗಿದ ಕಾರ್ಮಿಕರ ವಿಜಯ ಸಂಗಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರಕಾರ ಅಮೆರಿಕಾದ ಬಾಲಂಗೋಚಿಯಾಗಿ ಪರಿವರ್ತನೆಯಾಗಿದೆ. ರಾಷ್ಟ್ರೀಕರಣದ ಹೆಸರಿನಲ್ಲಿ ವಿಜಯಿಗಳಿಸಿರುವ ಪ್ರಧಾನಿ ಅಮೆರಿಕಾದ ನೀತಿಯಂತೆ ಖಾಸಗೀಕರಣ ನಡೆಸಲು ಹೊರಟಿದೆ. ಶೇ.೮೫ ರಷ್ಟು ದುಡಿಯುವ ವರ್ಗ ಇರುವ ದೇಶದಲ್ಲಿ, ಅವರ ವಿರುದ್ಧವಾಗಿ ಕಾರ್‍ಯಚರಿಸುವ ಸರಕಾರದ ಕ್ರಮ ಸಮಂಜಸವಲ್ಲ. ದೇಶದ ಪ್ರಮುಖ ಸರಕಾರಿ ಭವನಗಳಿಗೆ ಗುತ್ತಿಗೆ ಆಧಾರಿತ ಕೆಲಸದವರನ್ನು ನಿಯೋಜಿಸುವ ಮೂಲಕ, ಸರಿಯಾದ ಭದ್ರತೆಯಿಲ್ಲದೆ ದೇಶ ಅಪಾಯದಲ್ಲಿದೆ ಎಂದ ಅವರು ಸಮಾಜವಾದಿ ವ್ಯವಸ್ಥೆ ವಿಶ್ವಾದ್ಯಂತ ಹಾಳಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಐಟಿಯುನ ಉಳ್ಳಾಲ ವಲಯ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ವಹಿಸಿದ್ದರು, ಸಿಐಟಿಯು ಜಿಲ್ಲಾ ಸಮಿತಿ ಸದಸ್ಯೆ ಪದ್ಮಾವತಿ.ಯಸ್.ಶೆಟ್ಟಿ , ಉಳ್ಳಾಲ ವಲಯ ಕಟ್ಟಡ ಕಾರ್ಮಿಕರ ಅಧ್ಯಕ್ಷ ಜನಾರ್ದನ ಕುತ್ತಾರು, ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಜನವಾದಿ ಮಹಿಳಾ ಸಂಘಟನೆ ಕಾರ್‍ಯದರ್ಶಿ ವಿಲಾಸಿನಿ ತೊಕ್ಕೊಟ್ಟು, ಉಳ್ಳಾಲ ವಲಯ ಪಿಂಚಣಿದಾರರ ಸಂಘಟನೆ ಅಧ್ಯಕ್ಷ ಸುಂದರ ಕುಂಪಲ ಉಪಸ್ಥಿತರಿದ್ದರು.
ಜಯಂತ್ ನಾಕ್ ಸ್ವಾಗತಿಸಿದರು. ಬಾಬು ಪಿಲಾರ್ ವಂದಿಸಿದರು. ಕಾರ್ಯಕ್ರಮದ ಮುನ್ನ ವಿಜಯದೆಡೆಗೆ ಕಾರ್ಮಿಕರ ನಡಿಗೆ ಕಾಲ್ನಡಿಗೆ ಜಾಥಾ ನಡೆಯಿತು.




