UN NETWORKS
ಉಳ್ಳಾಲ: 1969 ರಲ್ಲಿ ಸ್ಥಾಪನೆಯಾದ ಮುನ್ನೂರು ಯುವಕ ಮಂಡಲ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಆ ಪ್ರಯುಕ್ತ ಒಂದು ವರ್ಷದ ಕಾಲ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ, ಪ್ರೋ ಕಬ್ಬಡ್ಡಿ ಪಂದ್ಯಾಟ , ಹೈಸ್ಕೂಲ್ ವಿಭಾಗದ ಜಾನಪದ ನೃತ್ಯ ಕಾರ್ಯಕ್ರಮ ಹಾಗೂ ಉಳ್ಳಾಲ ವಲಯ ಹೈಸ್ಕೂಲ್ ಮಟ್ಟದ ಕ್ರೀಡಾಕೂಟಗಳಿಗೆ ತಂಡಗಳನ್ನು ಆಹ್ವಾನಿಸಿದೆ ಎಂದು ಮುನ್ನೂರು ಯುವಕ ಮಂಡಲದ ಅಧ್ಯಕ್ಷ ಶಶೀಂದ್ರ ಕುಕ್ಯಾನ್ ಹೇಳಿದರು.
ಕುತ್ತಾರು ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅ.14 ರಂದು ಜಿಲ್ಲಾ ಮಟ್ಟದ ಹೈಸ್ಕೂಲ್ ವಿಭಾಗದ ಜಾನಪದ ನೃತ್ಯ ಸ್ಪರ್ಧೆ , ನ.11 ರಂದು ಚೆಂಬುಗುಡ್ಡೆ ಮಂಗಳೂರು ವನ್ ಶಾಲಾ ಮೈದಾನದಲ್ಲಿ ಉಳ್ಳಾಲ ವಲಯ ಹೈಸ್ಕೂಲ್ ಮಟ್ಟದ ಕ್ರೀಡಾಕೂಟ, ಡಿ.9 ರಿಂದ 15 ರವರೆಗೆ ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ , 2019ರ ಜನವರಿ ತಿಂಗಳಲ್ಲಿ ಕಬ್ಬಡ್ಡಿ ಪಂದ್ಯಾಟ , ಫೆಬ್ರವರಿಯಲ್ಲಿ ಅನಾಥಾಶ್ರಮ ವಾಸಿಗಳಿಗೆ ಸವಲತ್ತುಗಳ ವಿತರಣೆ, ಮಾರ್ಚ್ ತಿಂಗಳಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಎಪ್ರಿಲ್ನಲ್ಲಿ ಸುವರ್ಣ ಮಹೋತ್ಸವ ಜರಗಲಿದೆ. ತುಳು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡ ಅ.20 ರಂದು ಸ್ಕ್ರಿಪ್ಟ್ ಗಳನ್ನು ನೀಡಬೇಕಾಗಿದೆ ಎಂದರು.
ಗೌರವಾಧ್ಯಕ್ಷ ಹರೀಶ್ ಮುಂಡೋಳಿ ಮಾತನಾಡಿ ಸುವರ್ಣ ಮಹೋತ್ಸವದ ಪ್ರಯುಕ್ತ ಎಪ್ರಿಲ್ ತಿಂಗಳಿನಿಂದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಮೇ.20 ರಂದು ಯೆನೆಪೋಯ ವೈದ್ಯಕೀಯ ಕಾಲೇಜು ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ಜೂನ್ .22 ರಂದು ಕಣಚೂರು ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಕಣ್ಣಿನ ಪರೀಕ್ಷೆ ಮತ್ತು 250 ಮಂದಿಗೆ ಉಚಿತ ಕನ್ನಡಕ ವಿತರಣೆ, ಜುಲೈ 12 ರಂದು ಆಟಿಡೊಂಜಿ ದಿನ, ಆ.23 ರಂದು ದ.ಕ ಜಿಲ್ಲಾ ಬಾಡಿಬಿಲ್ಡಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ದೇಹದಾಢ್ರ್ಯ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಸಲಹೆಗಾರರಾದ ಕೃಷ್ಣಪ್ಪ ಸಾಲ್ಯಾನ್, ಚಂದ್ರಹಾಸ, ರಾಮಚಂದ್ರ ಬಬ್ಬುಕಟ್ಟೆ, ಜನಾರ್ದನ.ಕೆ, ಜಯ ದೇಸೋಡಿ, ಗಣೇಶ್ ಟೈಲರ್, ಜಯ ಶೆಟ್ಟಿ ಉಪಸ್ಥಿತರಿದ್ದರು.


