UN NETWORKS
ಕುತ್ತಾರು: ಹಿಂದೆಲ್ಲಾ ಅನ್ನದಾನ, ವಿದ್ಯಾದಾನ ಮಹತ್ವ ಎನಿಸಿತ್ತು, ಆದರೆ ಇಂದು ಸರ್ಕಾರದ ಉಚಿತ ಅಕ್ಕಿಯಿಂದ ಅನ್ನ ಸಿಗುತ್ತಿದೆ, ಗೂಗಲ್ನಲ್ಲಿ ಶಿಕ್ಷಣ ಸಿಗುತ್ತಿದೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯೇ ಇಲ್ಲದ ರಕ್ತದಾನ ಶ್ರೇಷ್ಠವಾಗಿದ್ದು, ದಾನಿಗಳು ಸಾಮಾಜಿಕ ಬದ್ಧತೆ ತೋರಿದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಭಾರತೀಯ ರೆಡ್ಕ್ರಾಸ್ ಸೊಸೈಟಿ ಜಿಲ್ಲಾ ಶಾಖೆ, ರೋಟರಿ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯದಳ ಕೊಲ್ಯ, ಮುನ್ನೂರು ಯುವಕ ಮಂಡಲ ಹಾಗೂ ದುರ್ಗಾವಾಹಿನಿ ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕುತ್ತಾರ್ ಎಂವೈಎಂ ಸಭಾಂಗಣದಲ್ಲಿ ಬೃಹತ್ ರಕ್ತದಾನ ಹಾಗೂ ಅರ್ಹ ವಿಕಲಚೇತನರಿಗೆ ಪುನಶ್ಚೇತನಗೊಳಿಸುವ ಉಚಿತ ಸಲಕರಣೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
20 ವರ್ಷಗಳ ಹಿಂದೆ ರಕ್ತದಾನ ಮಾಡುವುದೆಂದರೆ ಭಯದ ವಿಷಯ, ಇಂತಹ ಶಿಬಿರ ಅಯೋಜಿಸುವಾಗ ದಾನಿಗಳು ಮುಂದಾದರೂ ಹೆತ್ತವರು ಅವಕಾಶ ನೀಡುತ್ತಿರಲಿಲ್ಲ. ಇದರಿಂದಾಗಿ ಶಿಬಿರಗಳೇ ರದ್ದಾಗುತ್ತಿದ್ದ ಉದಾಹರಣೆಗಳಿವೆ. ಆದರೆ ಇಂದು ದಾನಿಗಳೂ ಇದ್ದಾರೆ, ಸಾಕಷ್ಟು ಪ್ರೋತ್ಸಾಹವೂ ಸಿಗುತ್ತಿದೆ. ವೈದ್ಯಕೀಯ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆಗಳು ಕಂಡಿದೆ ಎಂದು ಹೇಳಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಮಂಗಳೂರು ಶಾಖಾಧ್ಯಕ್ಷ ಸಿ.ಎ.ಶಾಂತರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ರೆಡ್ಕ್ರಾಸ್ ಸಂಸ್ಥೆಯ ಗೌರವಾಧ್ಯಕ್ಷ ಎಸ್.ಎ.ಪ್ರಭಾಕರ ಶರ್ಮ, ಉದ್ಯಮಿ ಚಂದ್ರಹಾಸ ಪಂಡಿತ್ಹೌಸ್, ಮುನ್ನೂರು ಯುವಕ ಮಂಡಲದ ಅಧ್ಯಕ್ಷ ಶಶೀಂದ್ರ ಕುಕ್ಯಾನ್, ರೋಟರಿ ಕ್ಲಬ್ ಮಂಗಳೂರು ಪೂರ್ವಾಧ್ಯಕ್ಷ ಕೈಕುಮಾರ್ ಕೊಲ್ಯ, ರೋಟರಿ ಸಮುದಾಯ ದಳದ ಅಧ್ಯಕ್ಷ ಸುಧಾ ಸುರೇಶ್ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ಸಂಯೋಜಕಿ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಸುಮಾಕರ್ ಕುಂಪಲ ವಂದಿಸಿದರು.
ತಕ್ಷಣದ ಸ್ಪಂದನೆಯಿಂದ ಸವಲತ್ತು ವಿತರಣೆ
ಜುಲಾಯಿ 12ರಂದು ಕುತ್ತಾರ್ ದುರ್ಗಾವಾಹಿನಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅವರು ವಿಕಲಚೇತನರಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಸಲಕರಣೆ ದೊರಕಿಸಲು ಅರ್ಜಿ ಆಹ್ವಾನಿಸಿದ್ದರು. ಸಾಕಷ್ಟು ಅರ್ಜಿಗಳು ಬಂದಿದ್ದು, ಅದರಂತೆ ರೆಡ್ಕ್ರಾಸ್ ಸಂಸ್ಥೆ, ಕೊಲ್ಯ ರೋಟರಿ ಕ್ಲಬ್ ಹಾಗೂ ರೋಟರಿ ಸಮುದಾಯ ದಳ ನೀಡಿದ ಸ್ಪಂದನೆಯ ಫಲವಾಗಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 17 ಗಾಲಿಕುರ್ಚಿ, 7 ನೀರಿನ ಬೆಡ್, 3 ಉರುಗೋಲು, 1 ವಾಕರ್, ಮಗುವಿಗೆ ಬೆಡ್ಪೆನ್ ಕುರ್ಚಿ ವಿತರಿಸಲಾಯಿತು. ಸರ್ಕಾರದ ಯೋಜನೆಯಿಂದ 34 ಫಲಾನುಭವಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.


