UN NETWORKS
ಕೋಟೆಕಾರು: ಕೇಂದ್ರ ಸರಕಾರದ ಯೋಜನೆಗಳ ಪರಿಚಯಕ್ಕಾಗಿ ಪ್ರತಿ ಪಂಚಾಯಿತಿನಲ್ಲಿ ಸೇವಾ ಕೇಂದ್ರ ಆರಂಭವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದವರು ಸೇವಾಕೇಂದ್ರಗಳನ್ನು ಅನುಷ್ಠಾನ ಮಾಡಲಿದ್ದಾರೆ. ಅದಕ್ಕಾಗಿ ಬುಧವಾರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಜೊತೆಗೆ ಒಪ್ಪಂದ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪೌರಾಡಳಿತ ಇಲಾಖೆ ಮತ್ತು ಜಿಲ್ಲಾಡಳಿತ ಸಹಯೋಗದೊಂದಿಗೆ ನಿರ್ಮಿಸಲಾದ ಕೋಟೆಕಾರು ಪಟ್ಟಣ ಪಂಚಾಯತ್ ನವೀಕೃತ ಕಟ್ಟಡದ ಉದ್ಘಾಟನೆಯನ್ನು ಗುರುವಾರದಂದು ನೆರವೇರಿಸಿ ಮಾತನಾಡಿದರು.
ಜನ ಗ್ರಾಮದಲ್ಲಿ ತಮ್ಮ ಹಕ್ಕುಗಳಿಗೆ ಅಲೆದಾಡಬಾರದು ಅನ್ನುವ ಉದ್ದೇಶದಿಂದ ಪ್ರಧಾನಿ ಮೋದಿಯವರ ಕಲ್ಪನೆಯಂತೆ ಸೇವಾ ಕೇಂದ್ರಗಳನ್ನು ಪ್ರತಿ ಪಂಚಾಯಿತಿನಲ್ಲಿ ತೆರೆಯುವಂತಹ ಯೋಜನೆ ಕೇಂದ್ರ ಸರಕಾರದಿಂದ ರೂಪಿಸಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಜೊತೆಗೆ ಗುರುವಾರ ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಜಿಲ್ಲೆಯ ಪ್ರತಿ ಮತಗಟ್ಟೆಯಲ್ಲಿ ಕೇಂದ್ರ ಸರಕಾರದ ಸೇವಾಕೇಂದ್ರ ಕಾರ್ಯಾಚರಿಸಲಿದೆ ಅದರಲ್ಲಿ ಓರ್ವ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದ ಅವರು ಗ್ರಾಮ ಪಂಚಾಯತ್, ಪಟ್ಟಣ ಪಂಚಾಯಿತಿನಲ್ಲಿ ಸರಿಯಾಗಿ ಆಡಳಿತ ನಡೆಸುವವನೇ ನಿಜವಾದ ಪ್ರಧಾನಮಂತ್ರಿ. ಪ್ರಧಾನಮಂತ್ರಿಗಳು ಹಲವಾರು ಅನುದಾನಗಳನ್ನು ಬಿಡುಗಡೆಗೊಳಿಸಿದರೂ, ಸರಿಯಾಗಿ ಜನರಿಗೆ ವಿನಿಯೋಗಿಸಲು ಗ್ರಾಮ ಪಂಚಾಯಿತಿ ಆಡಳಿತದಿಂದ ಮಾತ್ರ ಸಾಧ್ಯ.
ಬಿಡುಗಡೆಗೊಳಿಸಿದ ಅನುದಾನವನ್ನು ವ್ಯವಸ್ಥಿತವಾಗಿ ಜೋಡಿಸಲು, ಗ್ರಾಮೀಣ ಭಾಗದ ಜನರಿಗೆ ತಲುಪಿಸಲು ಪಂಚಾಯಿತಿ ಪಾರದರ್ಶಕ ಆಡಳಿತ ವ್ಯವಸ್ಥೆಯಿಂದ ಮಾತ್ರ ಸಾಧ್ಯವಿದೆ. ಕೋಟೆಕಾರು ಪಟ್ಟಣ ಪಂಚಾಯಿತಿನಲ್ಲಿ ಆಡಳಿತ ಮತ್ತು ಪ್ರತಿಪಕ್ಷದವರು ಒಂದಾಗಿ ಅಭಿವೃದ್ಧಿ ಕಾರ್ಯವನ್ನು ಮಾಡಲಾಗಿದೆ. ಸ್ವಚ್ಛಭಾರತದ ಪರಿಕಲ್ಪನೆಯ ಜೊತೆಗೆ , ಅಂತರ್ಜಲ ಹೆಚ್ಚಿಸುವಂತಹ ಯೋಜನೆಯನ್ನು ರೂಪಿಸುವುದರ ಜೊತೆಗೆ ಆದರ್ಶಗಳನ್ನು ಕೋಟೆಕಾರು ಪಟ್ಟಣ ಪಂಚಾಯಿತಿ ಆಡಳಿತ ಸಮಾಜಕ್ಕೆ ನೀಡಿದೆ. ಇದೀಗ ಸಿಮೆಂಟಿಗಿಂತ ಮರಳು ದುಬಾರಿ ಆಗಿರುವುದರಿಂದ ಹೆಚ್ಚು ಸಿಮೆಂಟು ಉಪಯೋಗಿಸಿಯೇ ಕಟ್ಟಡದ ನಿರ್ಮಾಣವಾಗಿದೆ. ಈ ಮೂಲಕ ಕಳಪೆಯಿಲ್ಲದ ಕಾಮಗಾರಿ ನಡೆದಿದೆ. ಜನಸಾಮಾನ್ಯರ ಸಹಕಾರಕ್ಕಾಗಿ ಪಂಚಾಯಿತಿಗಳು ಸ್ಥಾಪನೆಯಾಗಿದೆ. ವಿವಿಧ ಅಭಿವೃದ್ಧಿ ಪರ ಕಾರ್ಯಗಳೊಂದಿಗೆ ಜೊತೆಗೆ ಆದರ್ಶಗಳನ್ನು ಪಂ. ಸಮಾಜಕ್ಕೆ ನೀಡಿದ್ದೇನೆ. ರಾಜಕಾರಣಿ ಮುನ್ನ ಗುತ್ತಿಗೆದಾರನಾಗಿದ್ದೆ. ಹೊಯ್ಗೆಗಿಂತ ಸಿಮೆಂಟು ಹೆಚ್ಚಾಗಿ ಹಾಕಬೇಕಾದ ಸ್ಥಿತಿಯಿದೆ. ಈ ನಿಟ್ಟಿನಲ್ಲಿ ಸಿಮೆಂಟೇ ಹೆಚ್ಚಾಗಿ ಅಳವಡಿಸಿ ಕಳಪೆಯಿಲ್ಲದೆ ಕಾಮಗಾರಿ ನಡೆದಿದೆ. 14ನೇ ಹಣಕಾಸು ಆಯೋಗ, ರಾಜ್ಯ ಸರಕಾರ, ಎಸ್ ಎಫ್ ಸಿ ಯೋಜನೆಗಳಿಂದ ಪಂಚಾಯಿತಿಗೆ ಅನುದಾನಗಳು ಬರುತ್ತವೆ. ಆದರೆ ಸದಸ್ಯರು ತಮ್ಮ ತಮ್ಮ ವಾರ್ಡುಗಳಿಗೆ ಅನುದಾನ ಬಳಕೆ ಮಾಡುವಂತಹ ಮಾನಸಿಕತೆಯಿಂದ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅರ್ಧ ರಸ್ತೆಗಳು ಕಾಂಕ್ರೀಟಿಕರಣಗೊಳ್ಳುತ್ತಿದೆ. ಆದರೆ ಸಮಗ್ರ ಅನುಷ್ಠಾನಕ್ಕೆ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಕ್ರಿಯಾಯೋಜನೆ ರಚಿಸಿ ಅದರ ಆಧಾರದಲ್ಲಿ ಅನುದಾನವನ್ನು ಬಳಕೆ ಮಾಡಿದಲ್ಲಿ ಪಂಚಾಯಿತಿ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ಉಳ್ಳಾಲ ಮತ್ತು ಕೊಣಾಜೆ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣಗಳು ಹೆಚ್ಚು ಬೆಳೆದು ನಿಂತಿರುವುದರಿಂದ ಈ ಭಾಗವನ್ನು ಮಹಾನಗರಪಾಲಿಕೆಯಾಗಿ ಘೋಷಿಸಬೇಕಾದ ಅನಿವಾರ್ಯತೆ ಇದೆ. ಈ ಮೂಲಕ ಶಾಶ್ವತ ನೀರಿನ ವ್ಯವಸ್ಥೆ, ಬಸ್ಸಿನ ವ್ಯವಸ್ಥೆ, ದಾರಿದೀಪ, ರಸ್ತೆಗಳು ಈ ರೀತಿಯ ನಗರಕ್ಕೆ ಬರುವ ಎಲ್ಲಾ ವ್ಯವಸ್ಥೆಗಳನ್ನು ಜಾರಿಗೊಳಿಸಬಹುದು. ಅದಕ್ಕಾಗಿ ಜನಪ್ರತಿನಿಧಿಗಳು ಹೆಚ್ಚಿನ ಗಮನಹರಿಸಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸುಳ್ಳೆಂಜೀರ್ ವಹಿಸಿದ್ದರು. ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ , ಕಿರಿಯ ಅಭಿಯಂತರೆ ಆರತಿ ಅಣವೇಕರ್ , ಕಂದಾಯ ನಿರೀಕ್ಷಕ ದೇವದಾಸ್ ಶ್ರೀಯಾನ್ , ಸದಸ್ಯರುಗಳಾದ ಭಾರತಿ ರಾಘವ ಗಟ್ಟಿ ,ಜಯಶ್ರೀ ಪ್ರಫುಲ್ಲಾದಾಸ್, ವಿದ್ಯಾ, ಅಣ್ಣು ಸೋವೂರು ಭಾಗವಹಿಸಿದ್ದರು.
ಉಪಾಧ್ಯಕ್ಷ ಅನಿಲ್ ಕುಮಾರ್ ಬಗಂಬಿಲ ಸ್ವಾಗತಿಸಿದರು. ರವಿ ಕೊಂಡಾಣ ಕಾರ್ಯಕ್ರಮ ನಿರೂಪಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕುಸಾಲ್‍ನಗರ ವಂದಿಸಿದರು.ಇದೇ ವೇಳೆ ಗ್ರಾಮದ ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳ ಚೆಕ್ ವಿತರಿಸಲಾಯಿತು.
ಗೈರಾದ ಪ್ರತಿಪಕ್ಷ ಸದಸ್ಯರು !
ಕೋಟೆಕಾರು ಪಟ್ಟಣ ಪಂಚಾಯಿತಿನಲ್ಲಿ ಬಿಜೆಪಿ ಆಡಳಿತವಿದ್ದು, ಗುರುವಾರ ನಡೆದ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಕೇವಲ ಬಿಜೆಪಿ ಸದಸ್ಯರು ಮಾತ್ರ ಭಾಗವಹಿಸಿ ಪ್ರತಿಪಕ್ಷದ ಸದಸ್ಯರೆಲ್ಲರೂ ಗೈರಾಗಿದ್ದರು. ಕಾಂಗ್ರೆಸ್ ನ 6, ಸಿಪಿಎಂ 1 ಮತ್ತು ಪಕ್ಷೇತರ 2 ಪಟ್ಟಣ ಪಂಚಾಯಿತಿ ಸದಸ್ಯರು ಗೈರಾಗಿದ್ದರು. ನೂತನ ಕಟ್ಟಡ ಅನುದಾನಗಳ ಕುರಿತು ಮಾಹಿತಿಯನ್ನು ಆಡಳಿತದಲ್ಲಿರುವವರು ನೀಡಿಲ್ಲ. ಕಾಮಗಾರಿಯನ್ನು ತರಾತುರಿಯಲ್ಲಿ ನಡೆಸಲಾಗಿದೆ. ಪ್ರತಿಪಕ್ಷದವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ, ಸರ್ವಾಧಿಕಾರದಂತೆ ಆಡಳಿತ ಪಕ್ಷದ ಅಧ್ಯಕ್ಷರು ಹಾಗೂ ಸದಸ್ಯರು ನಡೆದುಕೊಂಡಿದ್ದಾರೆ. ಸಚಿವ ಯು.ಟಿ.ಖಾದರ್ ಅವರ ಅನುದಾನವೂ ಪಟ್ಟಣ ಪಂಚಾಯಿತಿನಲ್ಲಿ ವಿನಿಯೋಗ ಆಗಿದೆ. ಆದರೆ ಅವರಿಗೆ ಅಗೌರವ ತೋರಲಾಗಿದೆ. ಈವರೆಗೆ ಪ್ರತಿಪಕ್ಷದವರಾಗಿ ಉಳಿದುಕೊಂಡಿದ್ದೆವು. ಮುಂದೆ ವಿರೋಧ ಪಕ್ಷದವರಾಗಿ ಮುಂದುವರಿಯುತ್ತೇವೆ ಎಂದು ಸದಸ್ಯ ಹಮೀದ್ ಹಸನ್ ಮಾಡೂರು ತಿಳಿಸಿದ್ದಾರೆ.


