ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಸ್ಕೂಟರಿನಿಂದ ಬಿದ್ದ ಮಹಿಳೆ ಮೇಲೆ ಲಾರಿ ಹರಿದು ಆಕೆ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಹಾರಾ ಆಸ್ಪತ್ರೆ ಎದುರುಗಡೆ ಭಾನುವಾರ ೧.೩೦ರ ಸುಮಾರಿಗೆ ಸಂಭವಿಸಿದೆ.
ಕೃಷ್ಣಾಪುರ ನಿವಾಸಿ ಮೈಮುನಾ(೫೦) ಮೃತರು. ಕೃಷ್ಣಾಪುರದ ನಿವಾಸದಿಂದ ಮಗ ಶಬೀರ್ ಜತೆಗೆ ಆಕ್ಟಿವಾ ಸ್ಕೂಟರಿನಲ್ಲಿ ಬಂದಿದ್ದ ಮೈಮುನಾ ಅವರು ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ನಡೆದಿದ್ದ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಅದನ್ನು ಮುಗಿಸಿ ಉಳ್ಳಾಲ ದರ್ಗಾ ಉರೂಸಿಗೆ ತೆರಳುವ ಸಂದರ್ಭ ತೊಕ್ಕೊಟ್ಟು ಸಹಾರಾ ಆಸ್ಪತ್ರೆ ಎದುರುಗಡೆ ರಾಷ್ಟ್ರೀಯ ಹೆದ್ದಾರಿ .೬೬ರ ಬದಿಯ ಹೊಂಡಕ್ಕೆ ಸ್ಕೂಟರ್ ಸಿಲುಕಿದ ಪರಿಣಾಮ ಮೈಮುನಾ ಅವರು ರಸ್ತೆಗೆ ಉರುಳಿ ಬಿದ್ದಿದ್ದರು. ಈ ವೇಳೆ ಹಿಂದಿನಿಂದ ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಕಸ ವಿಲೇವಾರಿ ಲಾರಿ ಚಕ್ರದಡಿ ಸಿಲುಕಿ ಮೈಮುನಾ ಅವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ.
ಘಟನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆಯುಂಟಾಗಿ, ಉಳ್ಳಾಲ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಲ್ಲದೆ ರಸ್ತೆ ಹೊಂಡಕ್ಕೆ ಬ್ಯಾರಿಕೇಡ್ ಅಳವಡಿಸಿ ಮುಂದೆ ಅಪಘಾತ ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಿದರು. ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ಮಹಿಳೆ ಬಲಿಯಾಗಿರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
















