UN NETWORKS
ಕೊಣಾಜೆ: ಜಾತಿ, ಧರ್ಮಗಳ ಮಧ್ಯೆ ಕಂದರ ಸೃಷ್ಟಿಯಾಗಿರುವ ಇಂದಿನ ದಿನಗಳಲ್ಲಿ ಹಿಂದುಗಳ ಹಬ್ಬಗಳನ್ನು ಇತರ ಧರ್ಮೀಯರು ಜೊತೆಯಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತೀ ಗ್ರಾಮದಲ್ಲೂ ನೈಜ ಅರ್ಥದಲ್ಲಿ ಸರ್ವಧರ್ಮ ಸಮ್ಮೇಳನ ನಡೆದಾಗ ದೇಶ ನೈಜ ಜಾತ್ಯಾತೀತ ಆಗಲಿದೆ ಎಂದು ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಭಿಪ್ರಾಯಪಟ್ಟರು.
ಕೊಣಾಜೆ ಮಂಗಳ ಗ್ರಾಮೀಣ ಯುವಕ ಸಂಘ, ಮೊಸರು ಕುಡಿಕೆ ಉತ್ಸವ ಸಮಿತಿ, ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ 15ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳ ಗ್ರಾಮೀಣ ಯುವಕ ಸಂಘದ ಕಲಾ ವೇದಿಕೆಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಹಾಗೂ ಸರ್ವಧರ್ಮ ಸಮನ್ವಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶ್ರೀ ಕೃಷ್ಣನ ವೇಷ ಹಾಕಿಸಿ ವೇದಿಕೆಗಳಲ್ಲಿ ಮಕ್ಕಳನ್ನು ನೃತ್ಯಕ್ಕೆ ಪ್ರೋತ್ಸಾಹ ನೀಡುವ ಪೋಷಕರು ಹಿಂದು ಧರ್ಮದ ಬಗ್ಗೆಯೂ ತಿಳಿಹೇಳಬೇಕಿದೆ ಎಂದು ಹೇಳಿದರು.ಪಜೀರು ಚರ್ಚ್ ಧರ್ಮಗುರು ಜೋಸೆಫ್ ಸುನಿಲ್ ವೇಗಸ್ ಮಾತನಾಡಿ ಧರ್ಮ ನಂತರ, ಮೊದಲು ಮಾನವ ಧರ್ಮವಾಗಿ ಬದುಕುವುದನ್ನು ಕಲಿಯಬೇಕಿದೆ. ಅಂತರ್ಜಾಲದಲ್ಲಿ ಅಮೆರಿಕಾವನ್ನು ಸಂಪರ್ಕಿಸುವ ನಾವು ನೆರೆಹೊರೆಯಿಂದ ದೂರವಾಗಿದ್ದೇವೆ. ನಾವು ಭೂಮಿಯಲ್ಲಿ ಜೀವಿಸಿ ಮರಣ ಹೊಂದಿದಾಗ ಎಲ್ಲ ಧರ್ಮದವರು ಆಗಮಿಸಿದಾಗ ಮತ್ರ ನಮ್ಮ ಜನ್ಮ ಸಾರ್ಥಕ ಎಂದು ನುಡಿದರು.
ಸಾಧಕರುಗಳಾದ ಶಿಕ್ಷಕಿ ಗೀತಾ ದೇವಳಿ, ಶಿಕ್ಷಕ ರಾಧಾಕೃಷ್ಣ ಭಟ್, ಪ್ರಗತಿಪರ ಕೃಷಿಕ ಮಹಮ್ಮದ್ ಕೋಡಿಜಾಲ್, ಪಾಸ್ಕಲ್ ಡಿಸೋಜ ಭಟ್ರೆಕೋಡಿ, ಹಿರಿಯರಾದ ಪಳ್ಳಿಬ್ಯಾರಿ ಮರಕಳಬೆಟ್ಟು, ಗಿರಿಜಾ ಶೆಟ್ಟಿ ಪಾಳೆಮಾರ್, ರಾಮಚಂದ್ರ ಕೊಣಾಜೆಪದವು ಅವರನ್ನು ಸನ್ಮಾನಿಸಲಾಯಿತು. ಕೊಣಾಜೆ ಪ್ರೌಢಶಾಲೆಯ ಸುರೇಶ್, ಪ್ರಾಥಮಿಕ ಶಾಲೆಯ ಭಾಗ್ಯಶ್ರೀ ಶೆಟ್ಟಿ ಅವರಿಗೆ ಉತ್ತಮ ಪ್ರತಿಭಾನ್ವಿತ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಮುಹಮ್ಮದ್ ಲಿಬ್ಝೆತ್ ಅವರನ್ನು ಗೌರವಿಸಲಾಯಿತು.
ವಿಜಯಾ ಗ್ರಾಮೀಣ ಪ್ರತಿಷ್ಠಾನದ ನಿರ್ದೇಶಕ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ, ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹಾಗೂ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ, ಎಪಿಎಂಸಿ ಉಪಾಧ್ಯಕ್ಷೆ ಮತ್ತು ಶೆಟ್ಟಿ, ಮಂಗಳಾ ಗ್ರಾಮೀಣ ಯುವಕ ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ., ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ ಕಲ್ಲಿಮಾರ್, ಯುವಕ ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್, ಎಸ್.ಜಯಪ್ರಸಾದ್ ಹಾಗೂ ಜಾನ್ ವಿಕ್ಟರ್ ಮೆಂಡೋನ್ಸ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಅಚ್ಚುತ ಗಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀಕೃಷ್ಣ ಕೇವಲ ರಾಜ್ಯ, ದೇಶಕ್ಕೆ ಸೀಮಿತವಲ್ಲ, ಉತ್ತಮ ಸಮಾಜ ರೂಪಿಸಬೇಕಾದರೆ ಶ್ರೀ ಕೃಷ್ಣನ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಅಗತ್ಯ. ಕೇವಲ ಕೃಷ್ಣಾಷ್ಟಮಿ ಆಚರಿಸಿದರೆ ಸಾಲದು, ಶ್ರೀಕೃಷ್ಣನ ಕೊಳಲು ಊದುವ ಮೂಲಕ ಎಲ್ಲ ವರ್ಗದ ಜನರನ್ನು ಸೇರಿಸುವ ಕೆಲಸ ನಡೆಯಬೇಕು.
ಯು.ಟಿ.ಖಾದರ್
ಜಿಲ್ಲಾ ಉಸ್ತುವಾರಿ ಸಚಿವ


