UN NETWORKS
ಉಳ್ಳಾಲ: ಉಳ್ಳಾಲ ನಗರಸಭೆಗೆ ಪ್ರಥಮ ಬಾರಿಗೆ ಸೆ. 31ರಂದು ಚುನಾವಣೆ ನಡೆಯಲಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಪೈಪೋಟಿಗೆ ಈ ಬಾರಿ ಇಳಿದಿದೆ.
ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮಾನ ಹೆಜ್ಜೆ ಇಟ್ಟಿದೆ. ಕಳೆದ ಬಾರಿ ಉಳ್ಳಾಲ ಪುರಸಭೆಗೆ ನಡೆದ ಚುನಾವಣೆಯಲ್ಲಿ 27ಸ್ಥಾನಗಳ ಪೈಕಿ ಕಾಂಗ್ರೆಸ್ 17ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಅಧಿಕಾರ ಹಿಡಿದಿತ್ತು. ಬಿಜೆಪಿ ಏಳು, ಪಕ್ಷೇತರ ಎರಡು ಹಾಗೂ ಎಸ್ಡಿಪಿಐ ಒಂದು ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ನಗರಸಭೆಯಲ್ಲಿ ನಾಲ್ಕು ವಾರ್ಡ್ಗಳು ಹೆಚ್ಚಾಗಿದ್ದು ಆ ನಾಲ್ಕೂ ವಾರ್ಡ್ಗಳು ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರಗಳೇ ಆಗಿರುವುದರಿಂದ ಕಾಂಗ್ರೆಸ್ಗೆ ಅಧಿಕಾರ ಹಿಡಿಯಲು ಇನ್ನೂ ಹೆಚ್ಚಿನ ಬಲ ಸಿಕ್ಕಿದೆ.
ಬಿಜೆಪಿ ಕಳೆದ ಬಾರಿ ಗೆದ್ದಿರುವ ಕ್ಷೇತ್ರದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಬಂದಿರುವುದರಿಂದ ಮಹಿಳೆಯರಿಗೆ ಹೆಚ್ಚಿನ ಸೀಟು ಸಿಕ್ಕಿದೆ. ಕಳೆದ ಬಾರಿ ಗೆದ್ದಿರುವ ಸದಸ್ಯರ ಪೈಕಿ ಮಹಾಲಕ್ಷ್ಮಿ ಅವರನ್ನು ಹೊರತು ಪಡಿಸಿ ಇತರ ಯಾವ ಮಾಜಿ ಕೌನ್ಸಿಲರ್ಗೆ ಸೀಟು ಸಿಕ್ಕಿಲ್ಲ. ಅವರ ವಾರ್ಡ್ ಬದಲಾಗಿದೆ. ಪ್ರಮುಖವಾಗಿ ಬಿಜೆಪಿಯಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿಯೇ ಇದ್ದ ಪಕ್ಷದ ಮುಖಂಡರ ನಡುವಿನ ಮುಸುಕಿನ ಗುದ್ದಾಟ, ಬಣ ರಾಜಕೀಯ ಕೆಲವು ಆಕಾಂಕ್ಷಿಗಳಿಗೆ , ಅವರ ಸಂಬಂಧಿಕರಿಗೆ ಹಾಗೂ ಅವರ ಆಪ್ತರಿಗೂ ಸೀಟು ಸಿಗುವ ಅವಕಾಶ ತಪ್ಪಿಸಿದೆ. ಹಲವು ಬಾರಿ ಸ್ಪರ್ಧಿಸಿದವರಿಗಿಂತ ಪಕ್ಷಕ್ಕಾಗಿ ದುಡಿದ ಎಲ್ಲ ಕಾರ್ಯಕರ್ತರಿಗೆ ಹಂತ ಹಂತವಾಗಿ ಸೀಟು ಸಿಗಲಿ ಎಂಬ ನಾಯಕರ ಮಾತು ಕಾರ್ಯಕರ್ತರಿಗೆ ಖುಷಿ ಕೊಟ್ಟಿದೆ.
ಕಳೆದ ಚುನಾವಣೆಯಲ್ಲಿ 27ವಾರ್ಡ್ಗಳಿದ್ದು ಈ ಬಾರಿ 31ಕ್ಕೆ ಏರಿದೆ. ಉಳ್ಳಾಲ ನಗರಸಭೆಯ ವ್ಯಾಪ್ತಿ ಹಾಗೂ ವಾರ್ಡ್ನತ್ತ ಗಮನ ಹರಿಸಿದರೆ ಬಿಜೆಪಿ ಪ್ರಾಬಲ್ಯ ಇರುವ ಕ್ಷೇತ್ರ ಜನಸಂಖ್ಯೆ ಹಾಗೂ ವಿಸ್ತಾರದ ದೃಷ್ಟಿಯಿಂದಲೂ ದೊಡ್ಡದಾಗಿದ್ದರೂ ಆ ಯಾವ ವಾರ್ಡ್ನ್ನೂ ವಿಭಜಿಸಿಲ್ಲ. ಬದಲಿಗೆ ಮತದಾರರ ಸಂಖ್ಯೆ ಕಡಿಮೆ ಇದ್ದರೂ ವಿಸ್ತಾರದಲ್ಲಿ ಸಣ್ಣದಾಗಿದ್ದರೂ ಕಾಂಗ್ರೆಸ್ ಮತದಾರರು ಹೆಚ್ಚಿರುವ ಕ್ಷೇತ್ರ ವಿಭಜಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಸೀಟು ಹಂಚಿಕೆಯಲ್ಲಿ ಪಕ್ಷದೊಳಗೆ ಸದಾ ಕುದಿಯುತ್ತಿದ್ದ ಒಳ ಬಂಡಾಯಕ್ಕೆ ಬ್ರೇಕ್ ಹಾಕಲಾಗಿದೆ .
ಜೆಡಿಎಸ್ ಈ ಬಾರಿ ಪ್ರಾಬಲ್ಯ ಹೊಂದಿದ್ದು ಕನಿಷ್ಠ ನಾಲ್ಕು ಸ್ಥಾನ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ನಾಲ್ಕು ಜೆಡಿಎಸ್ ಮುಖಂಡರು ರಾಜ್ಯಮಟ್ಟದಲ್ಲಿ ಹೆಸರು ಪಡೆದವರು ಈ ಬಾರಿ ತಮ್ಮ ಇರುವಿಕೆ ಸಾದರ ಪಡಿಸಲು, ಉಳ್ಳಾಲದಲ್ಲಿ ತಮ್ಮ ಪ್ರಭಾವ ಇನ್ನೂ ಇದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕದತಟ್ಟಲು ಎರಡು ಸೀಟು ಪಡೆಯುವುದು ಅನಿವಾರ್ಯವಾಗಿದೆ. ಅವರಿಗೆ ಬಲವಾಗಿ ಕೆಲವು ಕೌನ್ಸಿಲರ್ಗಳ ಬೆಂಬಲ ಸಿಕ್ಕಿದೆ.
ಪಕ್ಷೇತರ ಅಭ್ಯರ್ಥಿಯಾಗಿಯೇ ಎರಡು ಬಾರಿ ಗೆದ್ದಿರುವ ನಗರಸಭೆಯ ಅಜಾತಶತ್ರು ಎಂದು ಗುರುತಿಸಿಕೊಂಡಿರುವ ಸುಂದರ ಉಳಿಯ ಅವರು ಈ ಬಾರಿ ಮೀಸಲಾತಿಯಿಂದಾಗಿ ಅವಕಾಶ ವಂಚಿತರಾಗಿದ್ದಾರೆ. ಆದರೆ ತಮ್ಮ ವಾರ್ಡ್ನಲ್ಲಿ ಸದಾ ಕಾಲ ತಮ್ಮನ್ನು ಬೆಂಬಲಿಸಿದ ಕ್ರಿಶ್ಚಿಯನ್ ಸಮುದಾಯದ ಜೊತೆ ಅಭ್ಯರ್ಥಿ ಮಹಿಳೆಗೆ ಬೆಂಬಲವಾಗಿ ನಿಂತಿದ್ದಾರೆ.
ಕಳೆದ ಚುನಾವಣೆ ಸಂದರ್ಭ ಪುರಸಭೆಯ 27ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಬಳಿಕ ನಗರಸಭೆಯಾಗಿ ಮೇಲ್ದರ್ಜೆಗೇರಿತ್ತು. ಪುರಸಭೆಯಲ್ಲಿ 17ಸ್ಥಾನ ಕಾಂಗ್ರೆಸ್, ಏಳು ಬಿಜೆಪಿ, ಇಬ್ಬರು ಪಕ್ಷೇತರರು ಹಾಗೂ ಒಂದು ಸ್ಥಾನ ಎಸ್ಡಿಪಿಐ ಪಡೆದಿತ್ತು. ಈ ಬಾರಿ ನಾಲ್ಕು ವಾರ್ಡ್ಗಳು ಹೆಚ್ಚಳವಾಗಿದ್ದು 31 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
31 ವಾರ್ಡ್ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ 24, ಜೆಡಿಎಸ್ 24, ಇತರ ಪಕ್ಷಗಳಿಂದ 17, ಪಕ್ಷೇತರರು 10, 5 ವಾರ್ಡ್ಗಳಲ್ಲಿ ಸಿಪಿಐಎಂ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಕೆಲವು ವಾರ್ಡ್ಗಳಲ್ಲಿ ಅಲ್ಪಸಂಖ್ಯಾತರೇ ಇರುವ ಕಾರಣ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಆದರೆ ಜೆಡಿಎಸ್ ಬಿಜೆಪಿ ಜೊತೆ ಸಮಾನ ಅಂತರ ಕಾಪಾಡಿದೆ.
ರಾಜ್ಯದಲ್ಲಿ ಜೆಡಿಎಸ್ನ ಮುಖ್ಯಮಂತ್ರಿ, ಕಾಂಗ್ರೆಸ್ನ ಕೆಲವು ನಾಯಕರ ಸಹಿತ ಕೌನ್ಸಿಲರ್ಗಳು ಜೆಡಿಎಸ್ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಆನೆಬಲ ತಂದಿದೆ. ಕಾಂಗ್ರೆಸ್ನ ಕೌನ್ಸಿಲರ್ ಅಬ್ದುಲ್ ಫತಾಕ್ ಜೆಡಿಎಸ್ನಲ್ಲಿ ಅದಾಗೇ ಗುರುತಿಸಿಕೊಂಡಿದ್ದು , ಕೌನ್ಸಿಲರ್ ಅಶ್ರಫ್ ಬಾವ ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ. ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ದಿನಕರ್ ಉಳ್ಳಾಲ್ ಜೆಡಿಎಸ್ನಿಂದ ಕಣಕ್ಕಿಳಿದಿದ್ದು, ಅವರ ಸಹೋದರ ಎಂಎಲ್ಎ ಟಿಕೆಟ್ ಆಕಾಂಕ್ಷಿಯಾಗಿದ್ದ ಗಂಗಾಧರ್ ಉಳ್ಳಾಲ್ ಅವರೂ ಕಣಕ್ಕಿಳಿದಿದ್ದಾರೆ. ಪಕ್ಷೇತರ ಕೌನ್ಸಿಲರ್ ಫಾರೂಕ್ ಯು.ಎಚ್. ಜೆಡಿಎಸ್ ಸೇರ್ಪಡೆಗೊಂಡಿರುವುದು ಜೆಡಿಎಸ್ ಗೆ ಬಲತಂದಂತಾಗಿದೆ.
ಬಿಜೆಪಿಯಲ್ಲಿ ಮುಸ್ಲಿಂ ದಂಪತಿ : ಜೆಡಿಎಸ್ನಲ್ಲಿ ಸಹೋದರರಿಬ್ಬರು ಕಣದಲ್ಲಿದ್ದಾರೆ. ಬಿಜೆಪಿಯಲ್ಲಿ ಮುಸ್ಲಿಂ ದಂಪತಿ ಕಣದಲ್ಲಿರುವುದು ಇನ್ನೊಂದು ವಿಶೇಷ. ಕೋಡಿ 2ನೇ ವಾರ್ಡ್ನಿಂದ ಆಶಿಯಾ ಮತ್ತು ಅವರ ಪತಿ ವಿಶೇಷಚೇತನ ಮಹಮ್ಮದ್ ನುಸ್ರತ್ ಹಕ್ 3ನೇ ವಾರ್ಡ್ ಕೋಡಿ ತೋಟ ವಾರ್ಡ್ನಿಂದ ಬಿಜೆಪಿಯಿಂದ ಕಣದಲ್ಲಿದ್ದಾರೆ. ಗಾಂಜಾ ಮಾಫಿಯಾ ವಿರುದ್ಧ ಧ್ವನಿ ಎತ್ತಿ ಕೊಲೆಗೀಡಾಗಿದ್ದ ಝುಬೈರ್ ಅವರ ಸಹೋದರ ಮುಕಚ್ಚೇರಿ ಎರಡು ವಾರ್ಡ್ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿ ಕೌನ್ಸಿಲರ್ ಇಸ್ಮಾಯಿಲ್ ಪೊಡಿಮೋನು ಈ ಬಾರಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ.
ಹಳೆಕೋಟೆ ವಾರ್ಡ್ನಲ್ಲಿ ಹಿಂದುಳಿದ ವರ್ಗ `ಎ’ ಮೀಸಲಾತಿಯಡಿ ಬಿಜೆಪಿಯಿಂದ ಕಣಕ್ಕಿಳಿಯಬೇಕಿದ್ದ ಹಸನ್ ಅವರ ಜಾತಿ ಪ್ರಮಾಣ ಪತ್ರ ಸಮಸ್ಯೆಯಿಂದ ಸ್ಪರ್ಧೆ ಸಾಧ್ಯವಾಗಿಲ್ಲ. ಆರು ವಾರ್ಡ್ಗಳಲ್ಲಿ ಬಿಜೆಪಿಯಿಂದ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲು ಮೀಸಲಾತಿ ಪಟ್ಟಿ ಪ್ರಕಟಗೊಂಡಾಗ ಮತ್ತೊಮ್ಮೆ ಸ್ಪರ್ಧಿಸುವ ಕನಸು ಕಂಡಿದ್ದ ಕಾಂಗ್ರೆಸ್ ಕೌನ್ಸಿಲರ್ ಫಾರೂಕ್ ಉಳ್ಳಾಲ್, ತಿದ್ದುಪಡಿಗೊಂಡು ಎರಡನೇ ಪಟ್ಟಿ ಪ್ರಕಟಗೊಂಡಾಗ ಮಹಿಳಾ ಮೀಸಲಾತಿ ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ವಂಚಿತರಾಗಿದ್ದಾರೆ.
24ಕಡೆ ಬಿಜೆಪಿ ಪಕ್ಷದಿಂದ ಹಾಗೂ ಎರಡು ವಾರ್ಡ್ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇತರ ಪಕ್ಷಕ್ಕಿಂತ ಭಿನ್ನವಾಗಿ ಮುಸ್ಲಿಂ ಸಮುದಾಯದ ವಿಶೇಷಚೇತನ ಪದವೀಧರ ಹಾಗೂ ಅವರ ಪತ್ನಿ ಇಬ್ಬರಿಗೂ ಪ್ರತ್ಯೇಕ ವಾರ್ಡ್ಗಳಲ್ಲಿ ಸ್ಪರ್ಧೆಗೆ ಬಿಜೆಪಿ ಅವಕಾಶ ನೀಡಿದೆ’
ಸಂತೋಷ್ ಕುಮಾರ್ ರೈ ಬೋಳಿಯಾರು
ಬಿಜೆಪಿ
ಮಂಗಳೂರು ಕ್ಷೇತ್ರಾಧ್ಯಕ್ಷ
ನಗರಸಭೆಯಲ್ಲಿ ಈಗಾಗಲೇ ಕಾಂಗ್ರೆಸ್ ಉತ್ತಮ ಆಡಳಿತ ನೀಡಿದೆ. ಸಚಿವ ಯು.ಟಿ. ಖಾದರ್ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. ಈ ಚುನಾವಣೆಯಲ್ಲಿ ಎಲ್ಲಾ ವಾರ್ಡ್ಗಳಲ್ಲೂ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು ಮತ್ತೊಮ್ಮೆ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ.
ಸಂತೋಷ್ ಶೆಟ್ಟಿ ಅಸೈಗೋಳಿ
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಜೆಡಿಎಸ್ನಿಂದ 24ವಾರ್ಡ್ಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಸಲಾಗಿದೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಮುಖ್ಯಮಂತ್ರಿಯಿದ್ದು ಉತ್ತಮ ಆಡಳಿತದ ಲಾಭ ನಗರಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದಕ್ಕಲಿದೆ. ಅಲ್ಲದೆ ಕಾಂಗ್ರೆಸ್ನ ಕೌನ್ಸಿಲರ್ಗಳು, ಮುಖಂಡರು ಜೆಡಿಎಸ್ನಲ್ಲಿದ್ದು ಅತ್ಯಧಿಕ ಸ್ಥಾನ ಲಭಿಸಲಿದೆ.
ಮೋಹನ್ದಾಸ್ ಶೆಟ್ಟಿ ಹರೇಕಳ
ಜೆಡಿಎಸ್
ಮಂಗಳೂರು ಕ್ಷೇತ್ರಾಧ್ಯಕ್ಷ


