UN NETWORKS
ಉಳ್ಳಾಲ: ವಿದ್ಯುತ್ ತಂತಿ ನೆರೆ ನೀರಿಗೆ ಬಿದ್ದು ಅದರಲ್ಲಿ ವಿದ್ಯುತ್ ಪ್ರವಹಿಸಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಉಳ್ಳಾಲ ಉಳಿಯ ಸಮೀಪ ಗುರುವಾರ ತಡರಾತ್ರಿ ವೇಳೆ ನಡೆದಿದ್ದು, ಶುಕ್ರವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಉಳ್ಳಾಲ ಉಳಿಯ ಎವ್ರಿ ಡಿಸೋಜ ಮತ್ತು ಮೋನಿಕಾ ಡಿಸೋಜ ದಂಪತಿ ಪುತ್ರ ಅಶೊಕ್ ಡಿಸೋಜ (33) ಸಾವನ್ನಪ್ಪಿದವರು. ಬೋಟು ನಿರ್ಮಾಣ ಮತ್ತು ಸಿಯಾಳ ಮಾರಾಟ ಕೆಲಸವನ್ನು ನಡೆಸುತ್ತಿದ್ದ ಅಶೋಕ್ ಎಂದಿನಂತೆ ಉಳಿಯ ಸಮೀಪ ತನ್ನ ಗೆಳೆಯರ ಜತೆಗೆ ಮಾತನಾಡಿ, ಮನೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಮನೆಗೆ ವಾಪಸ್ಸಾಗಿದ್ದರು. ಆದರೆ ದುರಾದೃಷ್ಟವಶಾತ್ ನೇತ್ರಾವತಿ ನದಿ ತೀರದಲ್ಲಿರುವ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನೆರೆ ನೀರು ನಿಂತಿತ್ತು. ಸಂಜೆ ಬೀಸಿದ ಭಾರೀ ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ನೆರೆ ನೀರಿಗೆ ಬಿದ್ದಿತ್ತು. ಇದನ್ನು ಗಮನಿಸದೆ ಅಶೋಕ್ ಅವರು ದಾರಿನಡುವೆ ನೀರನ್ನು ದಾಟುತ್ತಿದ್ದಂತೆ ವಿದ್ಯುತ್ ಶಾಕ್ ತಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮನೆಮಂದಿ ಕಾಯುತ್ತಲೇ ಇದ್ದರು !
ಅಶೋಕ್ ಮನೆಗೆ ಹೊರಡಿರುವುದಾಗಿ ತಿಳಿಸಿದ್ದರೂ ತಡರಾತ್ರಿಯಾದರೂ ಬಾರದ ಹಿನ್ನೆಲೆಯಲ್ಲಿ ತಾಯಿ, ತಂದೆ ಮತ್ತು ಸಹೋದರ ಕಾಯುತ್ತಲೇ ಇದ್ದರು. ಜೋರಾಗಿ ಮಳೆ ಬರುತ್ತಿದ್ದರಿಂದ ಮನೆ ಸುತ್ತಲೂ ನೆರೆ ಆವರಿಸಿದ್ದರಿಂದಾಗಿ ಮನೆಮಂದಿಗೆ ಹೊರಬರಲು ಅಸಾಧ್ಯವಾಗಿತ್ತು. ಬಳಿಕ ಸ್ನೇಹಿತರ ಜತೆಗೆ ಉಳಿದುಕೊಂಡಿರುವ ಸಾಧ್ಯತೆ ಇದೆ ಎಂದು ಸಮಾಧಾನಗೊಂಡಿದ್ದರು. ಆದರೆ ಇಂದು ಮುಂಜಾನೆ ನೆರೆಮನೆಯವರು ಮೃತದೇಹ ತೇಲುತ್ತಿರುವುದನ್ನು ಕಂಡು ಮನೆಮಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ನಗರಸಭೆ ಸದಸ್ಯೆ ಸುಂದರ್ ಉಳಿಯ ಇವರು ಮೆಸ್ಕಾಂ ಇಲಾಖೆ ಸೇರಿದಂತೆ , ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಶೋಕ್ ಡಿಸೋಜ ಅವರು ಮೂವರು ಮಕ್ಕಳಲ್ಲಿ ಹಿರಿಯವರು. ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿರುವ ಇವರು ಕಿರಿಯ ಮನೆಯಲ್ಲಿ ತಂದೆ, ತಾಯಿ ಮತ್ತು ಸಹೋದರನ ಜತೆಗೆ ವಾಸಿಸುತ್ತಿದ್ದರು. ತಂದೆಯೂ ಅನಾರೋಗ್ಯದಿಂದ ಇದ್ದು, ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು. ಇದೀಗ ಅವಘಢದಿಂದ ಆದ ಅಶೋಕ್ ಸಾವು ಇಡೀ ಕುಟುಂಬವನ್ನು ಕಂಗಾಲಾಗಿಸಿದೆ.
ಮೃತದೇಹ ಕೊಂಡೊಯ್ಯಲು ಬಿಡದೆ ಸ್ಥಳೀಯರ ಪ್ರತಿಭಟನೆ
ಬೆಳಿಗ್ಗೆ ವೇಳೆ ಮೃತದೇಹ ನೆರೆಮನೆಯವರು ನೋಡಿದ್ದರಿಂದಾಗಿ ಘಟನೆ ಬೆಳಕಿಗೆ ಬಂದಿದೆ. ಮೆಸ್ಕಾಂ ಇಲಾಖೆ, ಕಂದಾಯ ಇಲಾಖೆ ಹಾಗೂ ನಗರಸಭೆಯ ಅವ್ಯವಸ್ಥೆಯಿಂದಾಗಿ ಅವಘಢ ಸಂಭವಿಸಿರುವುದಾಗಿ ಆರೋಪಿಸಿ ಸಂತ ಸೆಬೆಸ್ತಿಯನ್ನರ ಚರ್ಚಿನ ಸಹಾಯಕ ಧರ್ಮಗುರುಗಳು ಸೇರಿದಂತೆ ಸ್ಥಳೀಯರು ಮೃತದೇಹವನ್ನು ಸ್ಥಳದಿಂದ ಕೊಂಡೊಯ್ಯದಂತೆ ಪ್ರತಿಭಟಿಸಿದರು. ಅಧಿಕಾರಿಗಳು ಸೂಕ್ತ ಪರಿಹಾರ ನೀಡುವ ಭರವಸೆ ನೀಡುವವರೆಗೂ ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಸಂತ ಸೆಬೆಸ್ತಿಯನ್ನರ ಚರ್ಚಿನ ಸಹಾಯಕ ಧರ್ಮಗುರು ಸಹಾಯಕ ಧರ್ಮಗುರು ಸ್ಟ್ಯಾನಿ ಪಿಂಟೋ ಮಾತನಾಡಿ ಬಡ ಕುಟುಂಬದ ಆಧಾರಸ್ತಂಭವಾಗಿದ್ದ ಅಶೋಕ್ ಡಿಸೋಜಾ ಸಾವನ್ನಪ್ಪಿರುವುದು ಇಡೀ ಕುಟುಂಬವನ್ನು ಕಂಗೆಡಿಸಿದೆ. ವಿದ್ಯುತ್ ತಂತಿ ತುಂಡಾಗಿ ಅವಘಢ ಸಂಭವಿಸಿದೆ. ಬಡ ಕುಟುಂಬದವರಾಗಿರುವುದರಿಂದ ಗರಿಷ್ಟ 25 ಲಕ್ಷ ಪರಿಹಾರ ಕೊಡಬೇಕಿದೆ. ಅಲ್ಲದೆ ಉಳ್ಳಾಲ ನಗರಸಭೆ ವ್ಯಾಪ್ತಿಯಾಗಿರುವುದರಿಂದ ಈ ಭಾಗದವರಿಗೆ ಸೂಕ್ತ ರಸ್ತೆ ವ್ಯವಸ್ಥೆ ಮಾಡಬೇಕು. ಕಂದಾಯ ಇಲಾಖೆ ರಸ್ತೆಗಾಗಿ ಸ್ಥಳವನ್ನು ಒದಗಿಸಿಕೊಡಬೇಕಿದೆ. ಸಚಿವ ಯು.ಟಿ.ಖಾದರ್ ಅವರು ಗರಿಷ್ಠ ಮೊತ್ತದ ಪರಿಹಾರವನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ. ಅದರಂತೆ ಇಲಾಖೆಯವರು ಅದನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಮೃತ ಅಶೋಕ್ ಡಿಸೋಜ ಕುಟುಂಬಕ್ಕೆ ತುರ್ತಾಗಿ 54 ಗಂಟೆಯೊಳಗೆ ಗರಿಷ್ಟ ಪರಿಹಾರವಾಗಿ ರೂ. 5 ಲಕ್ಷ ನೀಡುವುದಾಗಿ ತಹಶೀಲ್ದಾರ್ ಗುರುಪ್ರಸಾದ್ ಘೋಷಣೆ ಮಾಡಿದರು. ಬಳಿಕ ಮಾತನಾಡಿದ ಅವರು ಜಿಲ್ಲೆಯಾದ್ಯಂತ 4-5 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಸತತ 24 ಗಂಟೆಗಳ ಕಾಲವೂ ಕಂದಾಯ ಇಲಾಖೆ ಕಾರ್ಯಾಚರಣೆ ನಡೆಸುತ್ತಲೇ ಇದೆ. ದುರಾದೃಷ್ಠದಿಂದ ಅಶೋಕ್ ಸಾವು ಸಂಭವಿಸಿದೆ. ಬಡಕುಟುಂಬದ ಯುವಕನಾಗಿರುವುದರಿಂದ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸಲುವಾಗಿ ಮುಖ್ಯಮಂತ್ರಿಯವರ ವಿಶೇಷ ಪರಿಹಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದ ಅವರು ಮೆಸ್ಕಾಂ ಇಲಾಖೆಯಿಂದಲೂ ತನಿಖೆ ಬಳಿಕ ಪರಿಹಾರ ದೊರಕಿಸುವ ಭರವಸೆ ನೀಡಿದರು. ರಸ್ತೆ ನಿರ್ಮಾಣಕ್ಕೆ ಸ್ಥಳೀಯಾಡಳಿತ ಚುನಾವಣೆ ಇರುವುದರಿಂದ ಶೀಘ್ರವೇ ನಡೆಸಲು ಅಸಾಧ್ಯ. ಚುನಾವಣೆ ಬಳಿಕ ಜಾಗದ ಸರ್ವೆ ನಂಬರನ್ನು ಪಡೆದು ಸಂಬಂಧಪಟ್ಟವರಿಗೆ ಮಾತುಕತೆ ನಡೆಸಿ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ ಅವರು ಸ್ಥಳದಲ್ಲಿರುವ ಮರಗಳನ್ನು ತೆರವುಗೊಳಿಸಲು ನಗರಸಭೆ ಅರಣ್ಯ ಇಲಾಖೆ ಜತೆಗೆ ಮಾತುಕತೆ ನಡೆಸಬೇಕೆಂದು ಸೂಚಿಸಿದರು.
ಮಾಮೂಲಿ ಮಳೆಯಲ್ಲ ಜಾಗೃತರಾಗಿ : ಜಿಲ್ಲೆಯಾದ್ಯಂತ ನದಿ ತೀರದಲ್ಲಿರುವ ಕುಟುಂಬಗಳಿಗೆ ಮುನ್ನೆಚ್ಚರಿಕೆ ನೀಡಿದ ತಹಶೀಲ್ದಾರ್ ಗುರುಪ್ರಸಾದ್ ಗುರುವಾರ ಮಳೆಗೆ ಮೂಡುಪೆರಾರ ಸಮೀಪ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೊಳಂಬೆ, ಅದ್ಯಪಾಡಿ, ಪಾವೂರು, ಪಾವೂರು ಉಳಿಯ ಭಾಗದಲ್ಲಿ ನೆರೆ ನೀರು ಬರುತ್ತಿವೆ. ಇದೊಂದು ಮಾಮೂಲಿ ಮಳೆಯಲ್ಲ ಎಂದು ತಗ್ಗುಪ್ರದೇಶದ ಮಂದಿ ಅರಿಯಬೇಕಿದೆ. ಗುರುವಾರ ತಡರಾತ್ರಿ ಪಾವೂರು ಉಳಿಯ ಭಾಗದಲ್ಲಿ 11 ಗಂಟೆ ಬಳಿಕ ನೀರು ಜಾಸ್ತಿಯಾಗಿದೆ. ಯಾವ ಸಮಯದಲ್ಲೂ ನೀರು ಜಾಸ್ತಿಯಾಗುವ ಸಾಧ್ಯತೆಯಿರುವುದರಿಂದ ಜಿಲ್ಲಾಡಳಿತ ಸೂಚಿಸಿದಂತೆ ತಗ್ಗುಪ್ರದೇಶದವರು ಸೂಚನೆಯನ್ನು ಪಾಲಿಸಬೇಕಿದೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ನೋಡೆಲ್ ಅಧಿಕಾರಿಯಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತೆ ಗಾಯತ್ರಿ ನಾಯಕ್ , ಮಾತನಾಡಿ ಜಿಲ್ಲಾಡಳಿತದ ಸಕಾಲದಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ನೀಡುತ್ತಾ ಬಂದಿದ್ದೇವೆ. ಪ್ರದೇಶದಲ್ಲಿ ಮಳೆ- ಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿ ಜೀವ ಬಲಿಯಾಗಿರುವ ಶಂಕೆ ಇದೆ. ಈ ಭಾಗದ ಜನರ ಮನವಿಯನ್ನು ಪರಿಗಣಿಸಿ ಗರಿಷ್ಠ ಮಟ್ಟದ ಪರಿಹಾರವನ್ನು ಒದಗಿಸುತ್ತೇವೆ. ಮತ್ತೆ ಅವಘಢಗಳು ನಡೆಯದಂತೆ ಇಲಾಖೆಯ ಜೊತೆಗೆ ಜನರು ಕೈಜೋಡಿಸಬೇಕಿದೆ. ರಾತ್ರಿ ಹೊತ್ತಿನಲ್ಲಿ ಸಂಜೆ ಬಳಿಕ ನೆರೆ ನೀರಿನಲ್ಲಿ ಯಾರೂ ಹೋಗದಂತೆ ಜಾಗೃತವಹಿಸಬೇಕಿದೆ. 48 ಗಂಟೆಯೊಳಗೆ ಕಂದಾಯ ಇಲಾಖೆ ತುರ್ತಾಗಿ ಪರಿಹಾರ ವಿತರಿಸುತ್ತದೆ. ಮೆಸ್ಕಾಂ ಇಲಾಖೆ ಮರಣೋತ್ತರ ವರದಿ ಬಂದ ಬಳಿಕ, ಮೃತ ಯುವಕನ ವಯಸ್ಸಿಗೆ ಅನುಗುಣವಾಗಿ ಪರಿಹಾರವನ್ನು ಒದಗಿಸಲಿದೆ .
ಮೆಸ್ಕಾಂ ಅಧಿಕಾರಿಗಳಾದ ದಯಾನಂದ್, ರಾಜೇಶ್, ಪೌರಾಯುಕ್ತೆ ವಾಣಿ ಆಳ್ವ ಮುಂತಾದವರು ಉಪಸ್ಥಿತರಿದ್ದರು.


