UN NETWORKS
ಉಳ್ಳಾಲ: ನಾಗರಪಂಚಮಿ ಪೂಜೆ ಮುಗಿಸಿದ ಅರ್ಚಕರೋರ್ವರು ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಸೋಮೇಶ್ವರದ ನಿವಾಸಿ ರಾಮಚಂದ್ರ ಭಟ್ (67) ಮೃತರು. ನಾಗರಪಂಚಮಿ ಪ್ರಯುಕ್ತ ತೊಕ್ಕೊಟ್ಟುವಿನ ಸೇವಂತಿಗುಡ್ಡೆ ಪ್ರದೇಶದಲ್ಲಿ ಬೆಳಿಗ್ಗೆ ಪೂಜೆ ನೆರವೇರಿಸಿದ ಇವರು ಬಳಿಕ ಸುಸ್ತಾಗುತ್ತಿದೆ ಎಂದು ತೊಕ್ಕೊಟ್ಟುವಿನ ಸಹಾರ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ವೈದ್ಯರು ಮಂಗಳೂರಿಗೆ ಕೊಂಡೊಯ್ಯುವಂತೆ ಸಲಹೆ ನೀಡಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಸೇರಿಸುವ ದಾರಿಮಧ್ಯೆ ಅವರು ಸಾವನ್ನಪ್ಪಿದ್ದಾರೆ.
ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಕಿರಿಶಾಂತಿ ಮತ್ತು ಬಲಿ ಸೇವೆಯಲ್ಲಿ ದೇವರನ್ನು ಹೊರುತ್ತಿದ್ದ ಇವರು ನಿವೃತ್ತಿ ಬಳಿಕವೂ ಅದೇ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ಗುಡಿಯಲ್ಲಿ ಪ್ರಸಾದ ನೀಡುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.


