UN NETWORKS
ಕೊಣಾಜೆ: ಭಾರತ ಎಂಬುದು ಅದೊಂದು ಶಕ್ತಿ. ಭಾರತದ ನೆಲದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯವಾಗಿದೆ. ಸ್ವತಂತ್ರ ದೇಶವನ್ನು ಕಟ್ಟುವಲ್ಲಿ ಸರ್ವವನ್ನೂ ತ್ಯಾಗ ಮಾಡಿದ ಮಹಾತ್ಮರನ್ನು ನಾವು ಎಂದಿಗೂ ಮರೆಯದೆ ಮುನ್ನಡೆಯಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ ಶಿವಮೊಗ್ಗ ಅವರು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ 72ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಂದಿನ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ನನ್ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜೈಲಿನಲ್ಲಿರುವಾಗ ಸ್ವಾತಂತ್ರಕ್ಕಾಗಿ ಅದೆಷ್ಟೋ ವರ್ಷದಿಂದ ಹೋರಾಡುತ್ತಿದ್ದ ಮಹಾತ್ಮರ ಪರಿಚಯವಾಗಿತ್ತು. ನಾನು ಶಿವಮೊಗ್ಗದಲ್ಲಿ ವಾಸವಾಗಿದ್ದರೂ ನನ್ನ ಸ್ವಂತ ಊರು ದಕ್ಷಿಣ ಕನ್ನಡದ ಮೊಡಂಕಾಪು. ಇಂದು ನಾವು ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಜಾತಿ ಮತ ಭೇದವಿಲ್ಲದ ಸೌಹಾರ್ದ ಸಮಾವನ್ನು ಕಟ್ಟಬೇಕಿದ್ದು ಇದರಲ್ಲಿ ಯುವ ಸಮುದಾಯದ ಪಾತ್ರವೂ ಪ್ರಮುಖವಾಗಿದೆ ಎಂದರು. ನಾವು ಮಾಡುವ ಯಾವುದೇ ಉದ್ಯೋಗ ಆಗಲಿ, ವಿದ್ಯೆ ಆಗಲಿ ಪ್ರೀತಿ ಶ್ರದ್ಧೆಯಿಂದ ಮಾಡಿದರೆ ಖಂಡಿತಾ ನಮಗೆ ಅದರ ಫಲ ಸಿಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ಪ್ರೊ.ಕಿಶೋರ್ ಕುಮಾರ್ ಸಿ.ಕೆ ಅವರು, ದೇಶದಲ್ಲಿ ನಾವು ಇಂದು ನೆಮ್ಮದಿಯಿಂದ ಸ್ವತಂತ್ರವಾಗಿ ಇರುವುದಾದರೆ ಅಂದಿನ ಕಾಲದಲ್ಲಿ ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾನ್ ನಾಯಕರ ಕೊಡುಗೆಯಾಗಿದೆ. ಆದ್ದರಿಂದ ಸ್ವಾತಂತ್ರ ಹೋರಾಟಗಾರರ ಸೇವೆಯನ್ನು ನಾವು ಸದಾ ನೆನಪಿನಲ್ಲಿಟ್ಟುಕೊಂಡು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಜೀವನದಲ್ಲಿ ನಾವು ಸಂಸ್ಕಾರಯುತ ಜೀವನವನ್ನು ಅಳವಡಿಸಿಕೊಂಡು ಮುನ್ನಡೆದರೆ ಮುಂದೆ ಯಶಸ್ವೀ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಎಂ.ಖಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ರವೀಂದ್ರ ಅವರು ವಂದಿಸಿದರು. ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.


