UN NETWORKS
ಉಳ್ಳಾಲ: ಆಡಳಿತ ಪಕ್ಷದ ಕೌನ್ಸಿಲರುಗಳ ದಬ್ಬಾಳಿಕೆ ಹಾಗೂ ಭ್ರಷ್ಟಾಚಾರ, ವಾರ್ಡುಗಳ ಅಭಿವೃದ್ಧಿಯಲ್ಲಿ ತಾರತಮ್ಯದಿಂದ ಉಳ್ಳಾಲ ನಗರಸಭೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು ಉಳ್ಳಾಲ ನಗರಸಭೆಯ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಕರ್ನಾಟಕ ಪ್ರದೇಶ ಜನತಾದಳದ (ಜಾತ್ಯತೀತ) ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಉಳ್ಳಾಲ್ ಖೇದ ವ್ಯಕ್ತಪಡಿಸಿದರು.
ಉಳ್ಳಾಲ ನಗರಸಭೆಯ ದುರಾಡಳಿತದ ವಿರುದ್ಧ ಉಳ್ಳಾಲ ನಗರ ಜಾತ್ಯತೀತ ಜನತಾದಳದ ವತಿಯಿಂದ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಉಳ್ಳಾಲ ನಗರ ಸಭೆಯು ನಾಗರೀಕರಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್, ಒಳಚರಂಡಿ, ವಸತಿ, ಖಾತೆ ಬದಲಾವಣೆ, ಸಿಂಗಲ್ ಸೈಟ್, ಕಸ ವಿಲೇವಾರಿ ವಿಳಂಬ, ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಉಳ್ಳಾಲಕ್ಕೆ ಬೇಡಿಕೆಯಾಗಿರುವ ಉದ್ಯಾನವನ, ಕ್ರೀಡಾ ಮೈದಾನ, ಈಜುಕೊಳ ನಿರ್ಮಾಣಕ್ಕೆ ಇನ್ನೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ ಅವರು ಭ್ರಷ್ಟಾಚಾರದಲ್ಲಿ ಇಲ್ಲಿನ ಆಡಳಿತ ಪಕ್ಷದ ಕೌನ್ಸಿಲರ್ಗಳು ಮುಂದಿದ್ದಾರೆ ಎಂದ ಅವರು ಈ ಆಡಳಿತ ಪಕ್ಷವನ್ನು ಕಿತ್ತೊಗೆದು ಈ ಬಾರಿ ಜನತಾದಳವನ್ನು (ಜಾತ್ಯತೀತ) ಅಧಿಕಾರಕ್ಕೆ ತರುವಂತೆ ಕರೆ ನೀಡಿದರು.
ಉಳ್ಳಾಲ ನಗರಸಭಾ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಫಾರೂಕ್ ಯು.ಎಚ್. ಮಾತನಾಡಿ ಆಡಳಿತ ಪಕ್ಷದ ಕೌನ್ಸಿಲರ್ಗಳು ಕಮಿಷನ್ ದಂಧೆಯಲ್ಲಿ ತೊಡಗಿಸಿಕೊಂಡಿರುವುದರಿಮದ ಜನರ ಸಮಸ್ಯೆಗೆ ಸ್ಪಂದನೆ ದೊರಕುತ್ತಿಲ್ಲ ಎಂದು ಆರೋಪಿಸಿದರು. ಈ ಸಭೆಯಲ್ಲಿ ಜನತಾದಳದ ರಾಜ್ಯ ಮುಖಂಡರಾದ ನಝೀರ್ ಉಳ್ಳಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಉಳ್ಳಾಲ್, ಜನತಾದಳ ನಗರ ಅಧ್ಯಕ್ಷರಾದ ಪುತ್ತುಮೋನು ಹುಸೈನ್, ಮುರುಗೇಶ್ ಉಳ್ಳಾಲ್, ಇಬ್ರಾಹಿಂ ತವಕ್ಕಲ್, ಅಲ್ಪ್ರೇಡ್ ಡಿಸೋಜ, ಮುಸ್ತಾಫ ಹುಸೈನ್ ಮೋನು, ಜಬ್ಬಾರ್ ಮೇಲಂಗಡಿ, ಖಲೀಲ್ ಕಡಪರ, ಅಹ್ಮದ್ ಅಲೇಕಳ, ತ್ಯಾಗರಾಜ್ ಮುಂತಾದವರು ಉಪಸ್ಥಿತರಿದ್ದರು.


