UN NETWORKS
ಉಳ್ಳಾಲ: ನಾಯಕತ್ವ ಗುಣದೊಂದಿಗೆ ಸಂಘಟನಾ ಚಾತುರ್ಯವಿದ್ದರೆ ಸಂಘ ಅಭಿವೃದ್ಧಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಉಳ್ಳಾಲ ವಲಯ ಬಂಟರ ಸಂಘದ ಪ್ರಾರಂಭದಿಂದ ಈಗಿನವರೆಗೆ ಸಂಘಟನೆಯಲ್ಲಿ ನಾಯಕತ್ವ ವಹಿಸಿದವರು ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿದ ಕಾರಣ ಭಟಮರ ಸಂಘಕ್ಕೆ ತನ್ನದೇ ಆದ ಮಹತ್ವ ಬಂದಿದೆ ಎಂದು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಪೇರ್ ಅಸೋಸಿಯೇಶನ್ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಭಿಪ್ರಾಯಪಟ್ಟರು.
ಕೊಣಾಜೆ ಅಸೈಗೋಳಿಯ ಬಂಟರ ಭವನದಲ್ಲಿ ಬಂಟರ ಸಂಘ ಉಳ್ಳಾಲ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಮಾತನಾಡಿ ಕಳೆದ ಎರಡು ವರ್ಷದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಸಾಥ್ರ್ಯಕ್ಯತೆ ಇದೆ. ಸಮಾಜ ನಮಗೆ ಯಾವ ಜವಾಬ್ದಾರಿ ನೀಡಿದೆ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಲಾಭ ಮಾಡುವುದರೊಂದಿಗೆ ಸಮಾಜ ಮೀರಿ ಸಹಾಯ ನೀಡುವ ಕಾರ್ಯ ಈ ಉಳ್ಳಾಲ ವಲಯ ಬಂಟರ ಸಂಘ ಮತ್ತು ಬಂಟರ ಭವನದಿಂದ ಆಗಲಿ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ| ರಾಜಶ್ರೀ ಆರ್. ಶೆಟ್ಟಿ ಮಾತನಾಡಿ ತುಳುವೆರೆ ವಿಶಿಷ್ಟವಾದ ತಿಂಗಳು ಆಟಿ ತಿಂಗಳು. ಸಾಗುವಳಿಗೆ ಪೂರಕವಾಗಿ ಕೃಷಿ ಕಾರ್ಯಕ್ಕೆ ಪೂರಕವಾಗುವ ನಿಟ್ಟಿನಲ್ಲಿ ನಮ್ಮ ಹಿರಿಯರು ಆಚರಣೆಗಳನ್ನು ಈ ತಿಂಗಳಲ್ಲಿ ನಡೆಸುತ್ತಾ ಬಂದಿದ್ದಾರೆ. ಹಿಂದಿನ ಕಾಲದಲ್ಲಿ ಹವಾಮಾನದ ವೈಪರೀತ್ಯ ಈ ತಿಂಗಳಲ್ಲಿ ಕಾಣಲು ಸಿಗುವ ಕಾರಣ ಆ ಹವಾಮಾನಕ್ಕೆ ತಕ್ಕಂತೆ ಆರೋಗ್ಯದಲ್ಲಾಗುವ ಏರುಪೇರುಗಳಿಗೆ ಹಿರಿಯರು ಆಹಾರ ಪದ್ಧತಿಯ ಮೂಲಕವೇ ಔಷಧಿಗಳನ್ನು ಬಳಸುತ್ತಿದ್ದರು ಎಂದ ಅವರು ಮುಂದಿನ ಯುವ ಪೀಳಿಗೆಗೆ ಆಟಿ ತಿಂಗಳ ವಿಶೇಷತೆಯನ್ನು ತಿಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ ಎಂದರು.
ಬಂಟರ ಸಂಘ ಕಾವೂರು ಇದರ ಅಧ್ಯಕ್ಷ ಅಡ್ಯಾರ್ ಆನಂದ ಶೆಟ್ಟಿ , ಬಂಟರ ಸಂಘ ಜಪ್ಪು ಇದರ ಅಧ್ಯಕ್ಷ ಸುನಿಲ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಲಯದ ಉಪಾಧ್ಯಕ್ಷರಾದ ಶ್ರೀಕರ್ ಶೆಟ್ಟಿ ಬೋಳ್ಯಾರು, ಚಿತ್ರಾ ಜಿ. ಅಡ್ಯಂತಾಯ, ಸಂಘಟನಾ ಕಾರ್ಯದರ್ಶಿಯಾಗಿ ಜಗದೀಶ್ ರೈ ಬೆಳ್ಮ ಹೊಸಮನೆ, ಜೊತೆ ಕಾರ್ಯದರ್ಶಿಗಳಾದ ಅಶೋಕ್ ರೈ ಮಡ್ಯಾರ್ ಹಾಗೂ ನಾರಾಯಣ ರೈ ಕಕ್ಕೆಮಜಲ್, ಸಿರಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಾರಾದ ಶೆಟ್ಟಿ ಉಳ್ಳಾಲ, ಮಹಿಳಾ ವಿಭಾಗದ ಅಧ್ಯಕ್ಷೆ ಶಶಿಕಲಾ ಶೆಟ್ಟಿ ಭಟ್ನಗರ , ಯುವ ವಿಭಾಗದ ಅಧ್ಯಕ್ಷ ಪ್ರಶಾಂತ್ ಚೌಟ ಪಂಜಿಮುಂಡೇಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಂಗಕರ್ತ ಹಾಗೂ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಭಿನ್ನಚೇತನ ಸಾಧಕ ರಕ್ಷಿತ್ ಶೆಟ್ಟಿ, ರಾಷ್ಟ್ರಮಟ್ಟದ ಕರಾಟೆ ಪಟು ಸಂಮ್ಯುಕ್ ರೈ ಅವರನ್ನು ಸನ್ಮಾನಿಸಲಾಯಿತು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವ ಸಾಧಕರನ್ನು ಗೌರವಿಸಲಾಯಿತು. ವಿದ್ಯಾರ್ಥಿ ಸಹಾಯ ನಿಧಿಯನ್ನು ಹಸ್ತಾಂತರಿಸಲಾಯಿತು.
ಪ್ರ. ಕಾರ್ಯದರ್ಶಿ ಮೋಹನ್ದಾಸ್ ಗಾಂಭೀರ್ ಬೋಳ್ಯಾರುಗುತ್ತು ಸ್ವಾಗತಿಸಿದರು. ಸುಕೇಶ್ ಚೌಟ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಪುರುಷೋತ್ತಮ ಮಾಣಾೈ ವಂದಿಸಿದರು.


