UN NETWORKS
ತೊಕ್ಕೊಟ್ಟು: ಬಡವರ್ಗದ ಮಕ್ಕಳಿಗೆ ಕಲೆಯ ಪ್ರೋತ್ಸಾಹದ ಜೊತೆಗೆ ಶಿಕ್ಷಣ, ಗೋವು ಕಳವಿಗೆ ಸಂಬಂಧಿಸಿದ ಕ್ರಾಂತಿಕಾರಿ ಹೆಜ್ಜೆ ಹಾಗೂ ಕುರ್ನಾಡು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಳೆಸುವ ಕೀರ್ತಿಯನ್ನು ಹೊಂದಿದ ಹಿರಿಯ ರಾಜಾರಾಂ ಭಟ್ ಅವರಿಗೆ ಗುರುವಂದನೆ ನಡೆಸುತ್ತಿರುವ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಕಾರ್ಯ ಅರ್ಥಪೂರ್ಣ ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.
ಅವರು ತೊಕ್ಕೊಟ್ಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ವ್ಯಾಸ ಪೂರ್ಣಿಮೆಯಂದು ನಡೆಸುತ್ತಿರುವ 11 ನೇ ವರ್ಷದ ಗುರುವಂದನೆಯನ್ನು ಗೋಪ್ರೇಮಿ ಮುಡಿಪು ರಾಜರಾಮ್ ಭಟ್ ಅವರಿಗೆ ಅವರ ಮುಡಿಪುವಿನ ಸ್ವಗೃಹದಲ್ಲಿ ಶುಕ್ರವಾರ ನೆರವೇರಿಸಿ ಮಾತನಾಡಿದರು.
ಭಗತ್ ಸಿಂಗ್ ಹೆಸರಿನಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆಂಬ ಉದ್ದೇಶದೊಂದಿಗೆ ಸ್ಥಾಪನೆಗೊಂಡಿರುವ ಪ್ರತಿಷ್ಠಾನ ಸಂಘಟಿತವಾಗಿ ಹೋರಾಡುವ ಶಕ್ತಿಯನ್ನು ಹೊಂದಿದೆ. ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಾನದ ಸದಸ್ಯರು ನಿರಂತರವಾಗಿ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಇಡೀ ಕುರ್ನಾಡು ಪ್ರದೇಶಕ್ಕೆ ಸಹಕಾರಿ ಸಂಘ ಸ್ಥಾಪನೆ, ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ಕಲೆಯ ಜೊತೆಗೆ ಶಿಕ್ಷಣವನ್ನು ನೀಡುವ ಕಾಯಕ, ಕುರ್ನಾಡು ಭಾಗದಲ್ಲಿ ಬಿಜೆಪಿಯನ್ನು ಬೆಳೆಸಿದ ಕೀರ್ತಿ, ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಆಯಾಯ ಕ್ಷೇತ್ರದಲ್ಲಿ ಉದ್ಯೋಗವನ್ನು ದೊರಕಿಸಿ ಕೊಡುವಂತಹ ಮನೋಭಾವನೆಯ ರಾಜಾರಾಂ ಭಟ್, ಇತ್ತೀಚೆಗೆ ಗೋವು ಕಳವಿಗೆ ಸಂಬಂಧಿಸಿದಂತೆ ನಿರಂತರವಾಗಿ ಉಪವಾಸ ಸತ್ಯಾಗ್ರಹ ನಡೆಸಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ನ್ಯಾಯ ಒದಗಿಸಿಕೊಟ್ಟಿದ್ದಾರೆ. ಇಂತಹ ಹಿರಿಯ ಸಾಧಕರಿಗೆ ಗುರುವಿನ ಸ್ಥಾನವನ್ನು ನೀಡಿ ಗೌರವಿಸುವ ಕಾರ್ಯ ನಡೆಸಿರುವುದು ಊರಿಗೆ ಸಂದ ಗೌರವವಾಗಿದೆ ಎಂದರು.
ಗುರುವಂದನೆ ಸ್ವೀಕರಿಸಿದ ರಾಜಾರಾಂ ಭಟ್ ಮಾತನಾಡಿ ಹೊಗಳಿದಷ್ಟು ಕೆಲಸಗಳನ್ನು ಮಾಡಿದವನು ಅಲ್ಲ. ಮನೆಮಂದಿಯ ಪ್ರೋತ್ಸಾಹದಿಂದ ಕೆಲ ಸಮಾಜಕ್ಕೆ ಪೂರಕವಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರತಿಷ್ಠಾನ ಒದಗಿಸಿರುವ ಸನ್ಮಾನದಿಂದ ಇನ್ನಷ್ಟು ಸಮಾಜಕ್ಕೆ ಪೂರಕವಾದಂತಹ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಉತ್ತೇಜನ ನೀಡಿದಂತಾಗಿದೆ ಎಂದರು.
ಸೋಮೇಶ್ವರ ಜಿ.ಪಂ.ಸದಸ್ಯೆ ಧನಲಕ್ಷ್ಮಿ ಗಟ್ಟಿ, ತೊಕ್ಕೋಟ್ಟು ಜೈ ವೀರ ಮಾರುತಿ ವ್ಯಾಯಾಮ ಶಾಲಾ ಅದ್ಯಕ್ಷ ದೇವದಾಸ್ ಶ್ರೀಯಾನ್ ಮುಖ್ಯ ಅತಿಥಿಗಳಾಗಿದ್ದರು.
ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಸ್ಥಾಪಕಾದ್ಯಕ್ಷ ಜೀವನ್ ಕುಮಾರ್ ತೊಕ್ಕೋಟ್ಟು, ಪ್ರತಿಷ್ಟಾನದ ಅದ್ಯಕ್ಷ ರಾಕೇಶ್ ಬೈಪಾಸ್, ನ್ಯಾಯವಾದಿ ಅಸ್ಗರ್ ಮುಡಿಪು, ಗೌರವ ಸಲಹೆಗಾರರಾದ ಆನಂದ.ಕೆ.ಅಸೈಗೋಳಿ, ತಾಲೂಕ್ ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಪ್ರತಿಷ್ಠಾನದ ಉಪಾದ್ಯಕ್ಷರುಗಳಾದ ಗೋಪಿನಾಥ್ ಬಗಂಬಿಲ, ವಿಶ್ವನಾಥ್.ಶೆಟ್ಟಿ, ನವೀನ್.ಎ.ಕೆ, ಗುರುವಂದನಾ ಸಂಚಾಲಕ ಪ್ರವೀಣ್ ಬಸ್ತಿ, ಪದಾಧಿಕಾರಿಗಳಾದ ಹರೀಶ್ ಅಂಬ್ಲಮೊಗರು, ಪುರುಷೋತ್ತಮ ಕಲ್ಲಾಪು, ದಾಮೋದರ್ ನಡಾರ್, ಪ್ರವೀಣ್ ಕೊಲ್ಯ, ನಾರಾಯಣ.ಬಿ, ಚೇತನ್ ಬೈಪಾಸ್, ಗಂಗಾಧರ ಅಂಬ್ಲಮೊಗರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಸಂ.ಕಾರ್ಯದರ್ಶಿ ಕಿರಣ್ ಕೊಲ್ಯ ವಂದಿಸಿದರು. ಮಾಧ್ಯಮ ಸಂಚಾಲಕ ಪ್ರವೀಣ್.ಎಸ್.ಕುಂಪಲ ನಿರೂಪಿಸಿದರು.


