UN NETWORKS
ಕೊಣಾಜೆ: ಗೋವಿನ ಸೇವೆ ಎಂಬುದು ಅದೊಂದು ಪುಣ್ಯದ ಕಾರ್ಯ. ಇಂದಿನ ಕಾಲದಲ್ಲಿ ಎಲ್ಲರೂ ಗೋವು ಸಾಕಲು ಕಷ್ಟವಾಗಬಹುದಾದರೂ ನಿರಂತರ ಗೋ ಸೇವೆ ಮಾಡುತ್ತಿರುವಂತಹ ಗೋವನಿತಾಶ್ರಯ ಟ್ರಸ್ಟ್ ನಂತಹ ಸಂಸ್ಥೆಗಳಿಗೆ ನಾವು ಪ್ರೋತ್ಸಾಹಿಸಿ ಸಹಕಾರ ನೀಡಬೇಕಾಗಿದೆ. ಗೋವುಗಳ ದತ್ತುಸ್ವೀಕಾರ ಕಾರ್ಯಕ್ರಮ ಉತ್ತಮ ಯೋಜನೆಯಾಗಿದ್ದು ಪ್ರತಿಯೊಬ್ಬರು ಈ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯೋಣ ಎಂದು ಕರ್ನಾಟಕ ಬ್ಯಾಂಕ್ ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಮಹಾಬಲೇಶ್ವರ ಎಂ.ಎಸ್ ಅವರು ಹೇಳಿದರು.
ಅವರು ಪಜೀರು ಗೋವನಿತಾಶ್ರಯ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ನಡೆದ ಬನಶಂಕರಿಯ ಆರಾಧನೆ ಮತ್ತು ಗೋವುಗಳ ದತ್ತುಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪಜೀರು ಗೋಶಾಲೆ ಯಾವುದೇ ಕಮರ್ಷಿಯಲ್ ಉದ್ದೇಶದಿಂದ ನಿರ್ಮಾಣವಾಗದೆ ಗೋಸೇವೆಯ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡುತ್ತಿದೆ. ಯಾವುದೇ ಗೋವುಗಳ ಸಂರಕ್ಷಣೆಗಾಗಿ ಆರ್ಥಿಕವಾಗಿ ಸಂಸ್ಥೆಗೆ ಬಲತುಂಬಬೇಕಾಗಿದ್ದು ಈ ನಿಟ್ಟಿನಲ್ಲಿ ಮಂಗಳೂರಿನ ಜನತೆ ಗೋಗ್ರಾಸದ ಮೂಲಕ ಗೋವನ್ನು ದತ್ತು ತೆಗೆದುಕೊಂಡು ನಮ್ಮಿಂದಾದ ಸಹಕಾರವನ್ನು ನೀಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಅವರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ನಾಲ್ಕು ಗೋವುಗಳನ್ನು ದತ್ತು ಸ್ವೀಕರಿಸಿ ಒಂದುಬ ವರ್ಷದ ಖರ್ಚಿನ ಹಣವನ್ನು ಅವರು ಟ್ರಸ್ಟ್ಗೆ ಇದೇ ಸಂದರ್ಭದಲ್ಲಿ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರಿನ ಕೆಐಒಸಿಎಲ್ ಇದರ ಮ್ಯಾನೇಜರ್ ಗೋವಿಂದರಾಜ್ ಭಟ್ ಅವರು, ಕೃಷಿ ಪದ್ದತಿಯಲ್ಲಿ ಬದಲಾವಣೆಗಳಾಗಿರುವಂತೆ ಕೃಷಿಯಲ್ಲಿ ಗೋವಿನ ಬಳಕೆ ಕೂಡಾ ಕಡಿಮೆಯಾಗಿದೆ. ಇದರಿಂದಾಗಿ ಗೋವು ಸಂತತಿ ಕೂಡಾ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗೋವಿನ ಸಂರಕ್ಷಣೆಗಾಗಿ ನಾವು ಪಣತೊಡಬೇಕಾಗಿದೆ. ಗೋವಿವನಿತಾಶ್ರಯ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಗೋಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು ಇಂತಹ ಸಂಘ ಸಂಸ್ಥೆಗಳಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಾಬಲೇಶ್ವರ ಎಂ.ಎಸ್.ಅವರ ಪತ್ನಿ ಅನ್ನಪೂರ್ಣ ಭಾಗವಹಿಸಿದ್ದರು. ಗೋವನಿತಾಶ್ರಯ ಟ್ರಸ್ಟ್ ನ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಅನಂತಕೃಷ್ಣ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ನ ತುಳಜಾರಾಂ ಅವರು ವಂದಿಸಿದರು. ರವಿ ಅಸೈಗೋಳಿ ಅವರು ಕಾರ್ಯಕ್ರಮ ನಿರೂಪಿಸಿದರು.


