UN NETWORKS
ಉಳ್ಳಾಲ: ಬಿಜೆಪಿಗಿಂತ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ಸೇ ದೊಡ್ಡ ಶತ್ರುವಾಗಿದೆ. ಜಿಲ್ಲೆಯಾದ್ಯಂತ ಪಕ್ಷದ ಮುಖಂಡರನ್ನು ದೂರ ಇಡುವ ಮೂಲಕ ಜೆಡಿಎಸ್ ಅನ್ನು ಮುಗಿಸುವ ಪ್ರಯತ್ನ ಕಾಂಗ್ರೆಸ್ಸಿಗರಿಂದ ಆಗುತ್ತಿದೆ ಎಂದು ಜಿಲ್ಲಾ ಜಾತ್ಯಾತೀತ ಜನತಾದಳದ ಅಧ್ಯಕ್ಷ ಮುಹಮ್ಮದ್ ಕುಂಞ ಹೇಳಿದ್ದಾರೆ.
ಅವರು ಉಳ್ಳಾಲ ನಗರ ಜಾತ್ಯಾತೀತ ಜನತಾದಳದ ಉಳ್ಳಾಲ ಸಮುದಾಯ ಭವನದಲ್ಲಿ ಜರಗಿದ ಕಾರ್ಯಕರ್ತರ, ಅಭಿಮಾನಿಗಳ, ಹಿತೈಷಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯ ಪ್ರತಿಯೊಂದು ಸರಕಾರದ ಕಾರ್ಯಕ್ರಮಗಳಲ್ಲಿ ಜನತಾದಳದ ಮುಖಂಡರನ್ನು ದೂರ ಇಡುವ ಪ್ರಯತ್ನ ಕಾಂಗ್ರೆಸ್ಸಿನಿಂದ ಆಘುತ್ತಿದೆ. ಪಕ್ಷದ ನಾಯಕರನ್ನು ಅನುಮಾನ ಮೂಡಿಸುವ ರೀತಿಯಲ್ಲಿ ನೋಡಲಾಘುತ್ತಿದೆ. ಉಳ್ಳಾಲದಲ್ಲಿಯೂ ಜೆಡಿಎಸ್ ಅನ್ನು ಮುಗಿಸುವ ಪ್ರಯತ್ನಗಳು ಮುಂದುವರಿದಿದೆ. ಇದಕ್ಕೆ ವೇದಿಕೆಯಲ್ಲಿ ಕುಳಿತುಕೊಳ್ಳುವ ಮುಖಂಡರು ಒಗ್ಗಟ್ಟಾಗಬೇಕಿದೆ. ಜಿಲ್ಲೆಯಲ್ಲಿರುವ ನಾಯಕರು ಸರಿಯಾಗಿ ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಸ್ತಿತ್ವಕ್ಕೆ ಬರುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿಧಾನಸಭಾ ಚುನಾವಣೆ ವೇಳೆ ಅಭ್ಯರ್ಥಿಗಳ ಆಯ್ಕೆ ಮಾಡದ ರೀತಿಯಲ್ಲಿ, ಸೂಕ್ತ, ಸಮಾಜಮುಖಿ, ಪ್ರಾಮಾಣಿಕರಾಗಿ, ಜನಬೆಂಬಲಿಸುವ ಅಭ್ಯರ್ಥಿಗಳನ್ನು ಗುರುತಿಸಿ ಉಳ್ಳಾಲ ನಗರಸಭೆಯ 31 ಸ್ಥಾನಗಳಿಗೂ ನಿಲ್ಲಿಸುವ ಪ್ರಯತ್ನ ಕಾರ್ಯಕರ್ತರಿಂದ ಆಗಬೇಕಿದೆ. ಅದಕ್ಕಾಗಿ ಜಿಲ್ಲೆ ಮತ್ತು ರಾಜ್ಯದಿಂದ ಬೇಕಾದ ಸವಲತ್ತುಗಳನ್ನು ನೀಡಲು ಬದ್ಧ ಎಂದ ಅವರು ಬಿಜೆಪಿಯವರು ತಾವೇ ಕೊಳ್ಳೆ ಹೊಡೆದು ಅಪಪ್ರಚಾರದ ಮೂಲಕ ಸ್ಥಾನ ಗಳಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಬಿಜೆಪಿಗಿಂತ ಕಾಂಗ್ರೆಸ್ಸೇ ಜೆಡಿಎಸ್ ಪಕ್ಷಕ್ಕೆ ದೊಡ್ಡ ಶತ್ರು ಎಂದಿದ್ದಾರೆ.
ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಗೂ ಕಾರ್ಪೊರೇಟರ್ ಅಝೀಝ್ ಕುದ್ರೋಳಿ ಮಾತನಾಡಿ ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸಿದಾಗ, ಪಕ್ಷ ಅಸ್ತಿತ್ವಕ್ಕೆ ಬರಲು ಸಆಧ್ಯ ಸರಕಾರದಿಂದ ಸಿಗುವ ಯೋಜನೆಗಳನ್ನು ಜನರಿಗೆ ಒದಗಿಸಿದಾಗ ಜನ ಬೆಂಬಲಿಸುತ್ತಾರೆ. ಅಲ್ಪಸಂಖ್ಯತರ ಮತ ಪಡೆಯುವ ಉದ್ದೇಶದಿಂದ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಕಾಂಗ್ರೆಸ್ ಮತ ಪಡೆಯುತ್ತಿದೆ. ರಾಜ್ಯ ಸರಕಾರವೂ ಪಕ್ಷದಲ್ಲೇ ಹಲವು ವರ್ಷಗಳಿಂದ ದುಡಿದ ಕಾರ್ಯಕರ್ತರಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷ ರಾಮ್ ಗಣೇಶ್, ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ, ಎಸ್ ಸಿ /ಎಸ್ ಟಿ ವಿಭಾಗದ ಕನಕದಾಸ್ ಕೂಳೂರು, ಹಿಂದುಳಿದ ವಿಭಾಗದ ಅಧ್ಯಕ್ಷ ಹರೀಶ್ ಕೊಟ್ಟಾರಿ, ಮಂಗಳೂರು ಕ್ಷೇತ್ರ ಅಧ್ಯಕ್ಷ ಮೋಹನದಾಸ ಶೆಟ್ಟಿ, ಜೆಡಿಎಸ್ ಉಳ್ಳಾಲ ನಗರ ಚುನಾವಣಾ ಸಮಿತಿಯ ನಝೀರ್ ಉಳ್ಳಾಲ್, ಗಂಗಾಧರ್ ಉಳ್ಳಾಲ, ಪುತ್ತುಮೋನು ಹುಸೈನ್, ದಿನಕರ ಉಳ್ಳಾಲ್, ಯು.ಹೆಚ್.ಫಾರೂಕ್, ಹುಸೈನ್ ಮೋನು, ಬಾಬು ನರಿಂಗಾನ, ಆಲ್ಫ್ರೆಡ್ ಡಿಸೋಜ, ಇಬ್ರಾಹಿಂ ತವಕ್ಕಲ್, ಡೋಲ್ಫಿ ಡಿಸೋಜ ಉಪಸ್ಥಿತರಿದ್ದರು.ಜೆಡಿಎಸ್ ಮುಖಂಡ ನಝೀರ್ ಉಳ್ಳಾಲ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಬೇರೆ ಪಕ್ಷದಲ್ಲಿದ್ದ ನಾಲ್ವರು ಮುಖಂಡರು ಜೆಡಿಎಸ್ ಗೆ ಸೇರ್ಪಡೆಗೊಂಡರು.
ಶೇ.20 ಕಾಮಗಾರಿಗೆ, ಶೇ.20 ಕಮೀಷನ್ !
ಉಳ್ಳಾಲ ನಗರಸಭೆಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಧ್ವನಿ ಎತ್ತಬೇಕಾದ ವಿರೋಧ ಪಕ್ಷದವರು ಸುಮ್ಮನ್ನಿರುವುದು ಸಂಶಯಾಸ್ಪದ. ಶೇ.20 ರಷ್ಟು ಕಾಮಗಾರಿ ನಡೆದರೆ ಶೇ.20 ಕಮೀಷನ್ ಪಡೆಯಲಾಗುತ್ತಿದೆ ಎಂದು ಉಳ್ಳಾಲ ಪುರಸಭೆಯ ಮಾಜಿ ಸದಸ್ಯ ದಿನಕರ್ ಉಳ್ಳಾಲ್ ಆರೋಪಿಸಿದರು.


