UN NETWORKS
ಉಳ್ಳಾಲ: ಉಳ್ಳಾಲ ದರ್ಗಾ ನನಗೆ ಹೊಸತೇನಲ್ಲ. ಕಳೆದ 35 ವರ್ಷಗಳಿಂದ ನಾನು ಕುಟುಂಬ ಸಮೇತವಾಗಿ ದರ್ಗಾಕ್ಕೆ ಪ್ರಾರ್ಥನೆಗೆ ಬರುತ್ತಿದ್ದೆವು. ಬನಾತ್ ಕಾಲೇಜಿಗೆ ಸರಕಾರ ಮಂಜೂರು ಮಾಡಲಾಗಿರುವ 2ಕೋಟಿ ರೂ. ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಅಲ್ಲದೇ ಭಕ್ತಾದಿಗಳಿಗೆ ಅನ್ನಾಹಾರ ಒದಗಿಸುವ ಪಾಕಶಾಲೆಗೆ ನನ್ನ ವೈಯ್ಯಕ್ತಿಕವಾಗಿ 10 ಲಕ್ಷ ರೂ ನೀಡುತ್ತೇನೆ ಎಂದು ವಕ್ಫ್ ಖಾತೆ ಸಚಿವ ಝಮೀರ್ ಅಹ್ಮದ್ ಹೇಳಿದರು.
ಅವರು ಶುಕ್ರವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ ಸಂದರ್ಭ ಪಾಕ ಶಾಲೆಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಉಳ್ಳಾಲ ದರ್ಗಾದಲ್ಲಿ ಭಕ್ತಾದಿಗಳ ಸಂಖ್ಯೆ ಬಹಳಷ್ಟಿದೆ. ಭಕ್ತಾದಿಗಳಿಗೆ ಅನ್ನಾಹಾರ ನೀಡುವುದು ಉತ್ತಮ ಯೋಜನೆ. ಪಾಕ ಶಾಲೆ ನಿರ್ಮಾಣಕ್ಕೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸಚಿವ ಖಾದರ್ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆಮಾಡುತ್ತೇವೆ ಎಂದು ಭರವಸೆ ನೀಡಿದರು.
ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಸರಕಾರಕ್ಕೆ ದರ್ಗಾ ಸಮಿತಿ ರೂ.1.48 ಕೋಟಿ ಪಾವತಿಸುವಂತೆ ವಕ್ಫ್ ಬೋರ್ಡ್ ಬೇಡಿ ಇಟ್ಟಿದೆ. ಈ ಹಿಂದಿನ ಸಚಿವರುಗಳು ಅದನ್ನು ಮನ್ನಾ ಮಾಡಿ ಮುಂದುವರಿಸುತ್ತಿದ್ದಾರೆ. ಪ್ರಸ್ತುತ ಸಚಿವರು ಸೆಸ್ ಮನ್ನಾ ಪದ್ಧತಿಯನ್ನು ಮುಂದುವರಿಸಬೇಕಿದೆ. ಅದಕ್ಕಾಗಿ ಬೆಂಗಳೂರಿಗೆ ಸಮಿತಿ ಸದಸ್ಯರು ಅಲೆದಾಡುವುದನ್ನು ಸಚಿವರು ತಪ್ಪಿಸಬೇಕಿದೆ. ದರ್ಗಾ ಹೆಸರಲ್ಲಿ ಬೆಂಗಳೂರಿನಲ್ಲಿ 1 ಎಕರೆ 20 ಸೆಂಟ್ಸ್ ಜಾಗ ಸಚಿವ ಖಾದರ್ ಅವರ ಮುಂದಾಳತ್ವದಲ್ಲಿ ಮಂಜೂರಾಗಿದೆ. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಸಂದರ್ಭ ಸಚಿವರು ಸಹಕರಿಸಬೇಕು ಅನ್ನುವ ಬೇಡಿಕೆಯನ್ನು ಮುಂದಿಟ್ಟರು.
ಈ ಸಂದರ್ಭದಲ್ಲಿ ವಕ್ಫ್ ಸಚಿವರಾದ ಝಮೀರ್ ಅಹ್ಮದ್ರವರನ್ನು ಅಧ್ಯಕ್ಷರಾದ ಅಬ್ದುಲ್ ರಶೀದ್ ರವರು ಸ್ವಾಗತಿಸಿ ಶಾಲು ಹೊದಿಸಿ ಸನ್ಮಾನಿಸಿದರು.
ದ.ಕ ಜಿಲ್ಲಾ ವಕ್ಫ್ ಅಧ್ಯಕ್ಶರಾದ ಯು.ಕೆ ಮೋನು ಕನಚೂರು, ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಯು.ಟಿ ಇಫ್ತಿಕಾರ್, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಸದಸ್ಯ ಎನ್.ಎಸ್.ಕರೀಂ, ನಗರಸಭೆ ಸದಸ್ಯ ಬಾಝಿಲ್ ಡಿಸೋಜ, ಬಾವ ಮುಹಮ್ಮದ್, ಅಡಿಟರ್ ಇಲ್ಯಾಸ್ ತೋಟ, ಜತೆ ಕಾರ್ಯದರ್ಶಿಗಳಾದ ನೌಷಾದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಕೋಶಾಧಿಕಾರಿ ಅಬ್ಬಾಸ್ ಹಾಜಿ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಯು.ಕೆ ಇಬ್ರಾಹಿಂ ಹಾಜಿ, ಕಾರ್ಯದರ್ಶಿ ಎ.ಕೆ ಮೊಹಿಯದ್ದೀನ್ ಹಾಜಿ, ಕೋಶಾಧಿಕಾರಿ ಜೆ.ಅಬ್ದುಲ್ ಹಮೀದ್, ದರ್ಗಾ ಮತ್ತು ಟ್ರಸ್ಟ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


