UN NETWORKS
ಉಳ್ಳಾಲ: ಉಳ್ಳಾಲದಲ್ಲಿ ಕಡಲ್ಕೊರೆತ ಮಂಗಳವಾರವೂ ಮುಂದುವರಿದಿದ್ದು, ಕಡಲ್ಕೊರೆತದಿಂದ ಅಪಾಯದಂಚಿನಲ್ಲಿರುವ ಮನೆಗಳಿಂದ ಸ್ಥಳಾಂತರಗೊಳ್ಳದ ಮನೆಮಂದಿಗೆ ಉಳ್ಳಾಲ ನಗರಸಭೆ ವತಿಯಿಂದ ಎಚ್ಚರಿಕೆ ನೋಟೀಸು ಜಾರಿ ಮಾಡಲಾಗಿದೆ.

ಕೈಕೋ, ಹಿಲೆರಿಯಾನಗರ, ಮುಕ್ಕಚ್ಚೇರಿ, ಭಾಗಗಳಲ್ಲಿ 150 ಮನೆಗಳಿದ್ದು, ಈ ಪೈಕಿ 35 ಮನೆಗಳಿಗೆ ಸೋಮವಾರದಿಂದ ಸಮುದ್ರದ ಅಲೆಗಳು ಹೊಡೆಯಲು ಆರಂಭಿಸಿತ್ತು. ಆಲಿಯಬ್ಬ , ಬೀಫಾತಿಮ್ಮ, ಮಹಮ್ಮದ್ ಎಂಬವರಿಗೆ ಸೇರಿದ ಮನೆಗಳು ಸಂಪೂರ್ಣ ಸಮುದ್ರ ಪಾಲಾಗಿದ್ದರೆ, ಉಳಿದ 35 ಮನೆಗಳಿಗೆ ಅಲೆಗಳು ಇಂದು ಕೂಡಾ ಅಪ್ಪಳಿಸುತ್ತಲಿವೆ. ಮನೆ ಅಂಗಳದಲ್ಲಿ ಸಮುದ್ರದ ನೀರು ಇಕ್ಕಟ್ಟಾಗಿ ಮನೆಯೊಳಗೂ ಹೊಕ್ಕಿದೆ. ಮನೆಗಳಲ್ಲಿ ವಾಸಿಸಲು ಯೋಗ್ಯವಿಲ್ಲದಿದ್ದರೂ, ತಹಶೀಲ್ದಾರ್ ಸೂಚಿಸಿದಂತೆ ಗಂಜಿಕೇಂದ್ರಕ್ಕೂ ಹಲವರು ಸ್ಥಳಾಂತರಗೊಂಡಿಲ್ಲ. ಈ ನಿಟ್ಟಿನಲ್ಲಿ ಅಪಾಯದಂಚಿನಲ್ಲಿದ್ದರೂ, ಸ್ಥಳಾಂತರಗೊಳ್ಳದ ಮನೆಮಂದಿಗೆ ಕೂಡಲೇ ಸ್ಥಳಾಂತರವಾಗುವಂತೆ ನಗರಸಭೆಯಿಂದ ಎಚ್ಚರಿಕೆ ನೋಟೀಸು ನೀಡಲಾಗುವುದು ಎಂದು ಉಳ್ಳಾಲದ ಗ್ರಾಮಕರಣಿಕ ಪ್ರಮೋದ್ ಹೇಳಿದ್ದಾರೆ.
ಮನೆಯಲ್ಲಿ ಕುಳಿತುಕೊಳ್ಳಲು ಹೆದರಿಕೆಯಾಗುತ್ತದೆ. ಮನೆಯೊಳಗಡೆ ನೀರು ಬರುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬರುತ್ತಾರೆ ನೋಡಿ ಹೋಗುತ್ತಾರೆ. ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ. ಸೋಮವಾರ ಭೇಟಿ ನೀಡಿರುವ ತಹಶೀಲ್ದಾರ್ ಸೂಕ್ತ ಸ್ಥಳ ನೀಡುವ ಭರವಸೆ ನೀಡಿದ್ದಾರೆ. ಅದರ ವಿಶ್ವಾಸದಲ್ಲಿ ನಾವಿದ್ದೇವೆ. ಬೇರೆ ಗ್ರಾಮದಲ್ಲಿ ನಿವೇಶನ ನೀಡುವ ಭರವಸೆ ಕೊಟ್ಟರೂ, ಅಲ್ಲಿಗೆ ಹೋಗಲು ಸ್ಥಳೀಯರು ಒಪ್ಪುವುದಿಲ್ಲ. ಉಳ್ಳಾಲ ಗ್ರಾಮದಲ್ಲೇ ಸ್ಥಳೀಯವಾಗಿ ನೀಡಿದಲ್ಲಿ ಹೋಗಲು ತಯಾರಿದ್ದೇವೆ.
ಸಮೀರ್
ಸ್ಥಳೀಯ
ಬಡವರಿಗೆ ಕೇಳುವ ಜನರಿಲ್ಲ. ಬ್ರೇಕ್ ವಾಟರ್ ಕಾಮಗಾರಿ ಬಡವರಿರುವ ಪ್ರದೇಶದಲ್ಲಿ ಈವರೆಗೂ ಆಗಿಲ್ಲ. 35 ವರ್ಷಗಳಿಂದ ಇದ್ದರೂ ವಾಸದ ಸೂಕ್ತ ದಾಖಲೆಯೇ ಇಲ್ಲ. ಮನೆಗೆ ನೀರು ಅಪ್ಪಳಿಸಿದಾಗ ಹತ್ತಿರದ ಸರಕಾರಿ ಜಾಗದಲ್ಲಿ ಟೆಂಟ್ ಹಾಕಿ ಕುಳಿತಿದ್ದೆವು. ಅದನ್ನು ಕೂಡಲೇ ನಗರಸಭೆ ಅಧಿಕಾರಿಗಳು ತೆರವುಗೊಳಿಸಿ, ತನ್ನ ವಿರುದ್ಧ ದೂರು ಕೂಡಾ ದಾಖಲಿಸಿದ್ದಾರೆ.
ಇಸ್ಮಾಯಿಲ್
ಸಂತ್ರಸ್ತ
ಸ್ಥಳೀಯ













