UN NETWORKS
ಉಳ್ಳಾಲ: ಸರಕಾರದ ಸೌಲಭ್ಯಗಳನ್ನು ಸರಕಾರಿ ಅಧಿಕಾರಿಗಳು ಜನರ ಬಳಿ ಮುಟ್ಟಿಸುವ ಕಾರ್ಯ ಸಾಧಾರಣ ಆದರೆ ಜನಪ್ರತಿನಿಧಿಯಾಗಿದ್ದುಕೊಂಡು ತಮ್ಮ ಕ್ಷೇತ್ರದ ವಿಕಲಚೇತನ, ಹಿರಿಯ ನಾಗರಿಕರ ಆರೋಗ್ಯ ಮತ್ತು ಅವರಿಗೆ ಸಿಗುವ ಸವಲತ್ತುಗಳನ್ನು ಒಂದೆ ಸೂರಿನಡಿ ಭಾವನಾತ್ಮಕವಾಗಿ ಫಲಾನುಭವಿಗಳಿಗೆ ಮುಟ್ಟಿಸುವ ಮೂಲಕ ಸೋಮೇಶ್ವರ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿಗಟ್ಟಿ ಅವರ ಕಾರ್ಯ ಶ್ಲಾಘನೀಯ ಎಂದು ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸೋಮೇಶ್ವರ ಜಿಲ್ಲಾ ಪಂಚಾಯತ್ ಕ್ಷೇತ್ರ, ಸೋಮೇಶ್ವರ, ಮುನ್ನೂರು, ಅಂಬ್ಲಮೊಗರು, ಹರೇಕಳ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲದಲ್ಲಿ ಗುರುವಾರದಂದು ವಿಕಲ ಚೇತನರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸರಕಾರದ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ, ಅರ್ಜಿ ಹಾಗೂ ಗುರುತಿನ ಚೀಟಿ ವಿತರಣೆ, ಹಿರಿಯ ನಾಗರಿಕರಿಗೆ ಊರುಗೋಲು ವಿತರಣೆ, ಸಂಧ್ಯಾ ಸುರಕ್ಷಾ ಅರ್ಜಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಪ್ರತಿನಿಧಿಯಾಗಿದ್ದುಕೊಂಡು ಸಾಮಾಜಿಕ ಕಳಕಳಿಯಿದ್ದರೆ ಮಾತ್ರ ತಮ್ಮ ಕ್ಷೇತ್ರದ ಅಭಿವೃದ್ಧಿ ನಡೆಸಲು ಸಾಧ್ಯ ಹಿರಿಯ ನಾಗರಿಕರಿಗೆ ಅದರಲ್ಲೂ ವಿಕಲಚೇತನರು ತಮಗೆ ಸರಕಾರದಿಂದ ದೊರಕುವ ಸೌಲಭ್ಯಗಳ ಸಹಕಾರ ಅಗತ್ಯವಿರುತ್ತದೆ. ಈ ಕಾರ್ಯವನ್ನು ಜನಪ್ರತಿನಿಧಿಗಳು ನಡೆಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.
ತಾಲೂಕು ಪಂಚಾಯತ್ ಸದಸ್ಯ ಮಹಮ್ಮದ್ ಮೋನು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ, ತಾಲೂಕು ಪಂಚಾಯತ್ ಸದಸ್ಯರಾದ ರವಿಶಂಕರ್ ಸೋಮೇಶ್ವರ, ವಿಲ್ಮ ಆಲ್ಪ್ರೆಡ್ ಡಿ’ಸೋಜಾ, ಶಶಿಪ್ರಭಾ ಅಂಬ್ಲಮೊಗರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಉಮರಬ್ಬ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ್, ಅಂಬ್ಲಮೊಗರು ಗ್ರಾಮಪಂಚಾಯತ್ ಅಧ್ಯಕ್ಷ ಮಹಮ್ಮದ್ ರಫೀಕ್, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ಶೆಟ್ಟಿ, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಯಮುನಾ, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ| ರಾಮಕೃಷ್ಣ ರಾವ್, ಡಾ| ನವೀನ್, ಸಿ.ಡಿ.ಪಿ.ಒ ಶ್ಯಾಮಲಾ, ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷ ವಾಸು ಪೂಜಾರಿ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಂಕರಿ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸುನೀತಾ ವಂದಿಸಿದರು.
254 ಫಲಾನುಭವಿಗಳು : ಸೋಮೇಶ್ವರ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಸೋಮೇಶ್ವರ, ಮುನ್ನೂರು, ಅಂಬ್ಲಮೊಗರು, ಹರೇಕಳ ಗ್ರಾಮದ ಸುಮಾರು 254 ಫಲಾನುಭವಿಗಳು ಶಿಬಿರದಲ್ಲಿ ಭಾಗವಹಿಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಪ್ರಾಯೋಜಕತ್ವದಲ್ಲಿ 25 ಹಿರಿಯ ನಾಗರಿಕರಿಗೆ ಊರುಗೋಲು ವಿತರಿಸಲಾಯಿತು. 87 ಹಿರಿಯ ನಾಗರಿಕರಿಗೆ ಸಂದ್ಯಾ ಸುರಕ್ಷಾ 167 ವಿಕಲಚೇತನರಲ್ಲಿ 19 ಫಲಾನುಭವಿಗಳಿಗೆ ಗಾಲಿ ಕುರ್ಚಿ , 21 ಫಲಾನುಭವಿಗಳಿಗೆ ಗೂಡಂಗಡಿ, 11 ಫಲಾನುಭವಿಗಳಿಗೆ ಶ್ರವಣ ಸಾಧನಕ್ಕೆ ಅರ್ಜಿ ಪಡೆದುಕೊಳ್ಳಲಾಯಿತು. ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆ. ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಸ್ಥಳದಲ್ಲಿದ್ದುಕೊಂಡು ವೈದ್ಯಕೀಯ ತಪಾಸಣೆ ನಡೆಸಿ ಪ್ರಮಾಣ ಪತ್ರ ನೀಡಿದರು.


