UN NETWORKS
ಹರೇಕಳ: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಾವೂರು-ಹರೇಕಳ ಇಲ್ಲಿ 2018-19ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಸಿ.ಎಸ್.ಐ.ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಉಡುಪಿ ಇದರ ನಿರ್ದೇಶಕರಾದ ‘ಡಾ| ಸುಶಿಲ್ ಜತ್ತನ್ನ’ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ದಾನ ಪಡೆದ ವಸ್ತುಗಳನ್ನು ಸದುಪಯೋಗ ಪಡಿಸುವಂತೆ ಕರೆಯಿತ್ತರು. ಮುಖ್ಯ ಅತಿಥಿಗಳಾಗಿದ್ದ ಕೆ.ರವೀಂದ್ರ ರೈ ಮುಖ್ಯೋಪಾಧ್ಯಾಯರು, ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪಾವೂರು-ಹರೇಕಳ ಇವರು ಮಕ್ಕಳು ತಮ್ಮಲ್ಲಿ ಶಿಸ್ತು, ಏಕಾಗ್ರತೆಯನ್ನು ಬೆಳೆಸಿಕೊಳ್ಳುವಂತೆ ಕರೆಯಿತ್ತರು. ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಗೀತಾ ಶ್ಯಾನುಭಾಗ್ ಕ್ಷೇತ್ರ ಸಮನ್ವಯಾಧಿಕಾರಿ, ಬಿ.ಆರ್.ಸಿ. ಮಂಗಳೂರು ದಕ್ಷಿಣ ವಲಯ ಇವರು ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಪುಸ್ತಕ, ಸಮವಸ್ತ್ರ, ಬ್ಯಾಗ್ಗಳನ್ನು ದಾನವಾಗಿ ನೀಡಿದವರಿಗೆ ಇಲಾಖಾ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಅತಿಥಿಗಳಾಗಿದ್ದ ಕಲ್ಲಾಯಿ ಬ್ರಹ್ಮಾನಂದ ರೈ ಅವರು ಕನ್ನಡ ಮಾಧ್ಯಮ ಶಾಲೆಗಳು ಉಳಿದು ಬೆಳೆಯುವಲ್ಲಿ ಪೋಷಕರ ಪ್ರೋತ್ಸಾಹ ಬಹಳವಾದುದು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷರಾದ ಪಿ.ಜಯರಾಮ ಆಳ್ವ ಸಂಚಾಲಕರು, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಾವೂರು-ಹರೇಕಳ ಇವರು ಮಕ್ಕಳ ಶಿಕ್ಷಣದಲ್ಲಿ ಪೋಷಕರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ನುಡಿದರು. ಶಾಲಾ ಆಡಳಿತ ಮಂಡಳಿಯಾದ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕಡೆಂಜ ಜಗಜೀವನ್ ಶೆಟ್ಟಿ, ಕೋಶಾಧಿಕಾರಿ ಯಂ.ರಾಜ್ಕುಮಾರ್ ಶೆಟ್ಟಿ, ಹಿರಿಯ ಸದಸ್ಯರಾದ ಸೋಮಶೇಖರ ಚೌಟ, ಕೊಣಾಜೆ ಕ್ಲಸ್ಟರಿನ ಸಿ.ಆರ್.ಪಿ. ಸುಗುಣ, ಪುಸ್ತಕ ದಾನಿಗಳಾದ ಅಬೂಬಕ್ಕರ್ ಮಾಲಕರು, ಸ್ವಾಗತ ಬಝಾರ್, ಕುತ್ತಾರ್, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜನಾರ್ಧನ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
1ನೇ ತರಗತಿಗೆ ದಾಖಲಾದ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಬ್ಯಾಗ್ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಉಳಿದೊಟ್ಟು ಅರುಂಧತಿ ವಿ. ಶೆಟ್ಟಿಯವರ ಮಗ ಅಶಿತ್ ಕುಮಾರ್ ಶೆಟ್ಟಿಯವರು ಸಮವಸ್ತ್ರವನ್ನು, ಸಂಪಿಗೆದಡಿ ರಾಮಣ್ಣ ಭಂಡಾರಿ ಅವರ ಮಗ ಸತೀಶ್ ಭಂಡಾರಿಯವರು ಬ್ಯಾಗ್ಗಳನ್ನು ದಾನವಾಗಿ ನೀಡಿದ್ದರು. ರಾಕೇಶ್ ಕಾರಂತ ಮತ್ತು ಕೃಪಾ ಕಾರಂತ ಇವರು ಧನ ಸಹಾಯವನ್ನು ಮಾಡಿದ್ದರು. ಬ್ರಹ್ಮಾನಂದ ರೈಯವರು 5 ಪ್ರತಿಭಾವಂತ ಬಡ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಅವರಿಗೆ ಒದಗಿಸಿದ ಸಕಲ ಸೌಲಭ್ಯವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ‘ರಿಫಾಯಿ ಗಲ್ಫ್ ಸಮಿತಿ’ ಫರೀದ್ ನಗರ, ಹರೇಕಳ ಈ ಸಂಸ್ಥೆಯು 6 ಪ್ರತಿಭಾವಂತ ಮಕ್ಕಳಿಗೆ ನೀಡಿದ ವಿದ್ಯಾರ್ಥಿವೇತನವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ನಥಾನಿಯಲ್ ಎಡ್ವರ್ಡ್ ಐಮನ್ ಇವರು ಕಾರ್ಯಕ್ರಮದ ಧ್ಯೇಯೋದ್ದೇಶಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಹಶಿಕ್ಷಕಿ ಸುಮಲತ ಎಲ್ಲರನ್ನೂ ಸ್ವಾಗತಿಸಿದರು. ಸಹಶಿಕ್ಷಕಿ ಪಿ.ಎಸ್.ಪ್ರೇಮಲತ ಧನ್ಯವಾದ ಸಲ್ಲಿಸಿದರು. ಸಹಶಿಕ್ಷಕಿ ಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.ಶಾಲಾ ಶಿಕ್ಷಕ ವೃಂದದವರು, ಪೋಷಕರು, ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


