UN NETWORKS
ಕೊಣಾಜೆ: ಕೊಣಾಜೆ ಗ್ರಾಮದ ದಾಸರಮೂಲೆ ಎಂಬಲ್ಲಿ ಕಾಂಕ್ರೀಟು ಪಿಲ್ಲರ್ ಹಾಕಿ ನಿರ್ಮಿಸಿದ್ದ ಬೃಹತ್ ಆವರಣಗೋಡೆ ಮಳೆಯಿಂದಾಗಿ ಕುಸಿದು ಹಾನಿಯಾಗಿರುವ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.ಈ ಸಂದರ್ಭದಲ್ಲಿ ಮನೆಯೊಳಗೆ ಮಲಗಿದ್ದ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಣಾಜೆಯ ದಾಸರಮೂಲೆಯ ನಿರ್ಮಲಾ ಎಂಬವರ ಮನೆಗೆ ಪಕ್ಕದ ಮನೆಯ ಏರು ಪ್ರದೇಶದಲ್ಲಿರುವ ದೇವಣ್ಣ ಶೆಟ್ಟಿ ಎಂಬವರ ಮನೆಯ ಆವರಣಗೋಡೆಯು ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ ಕುಸಿದು ಬಿದ್ದಿದೆ. ಕುಸಿತದ ಪರಿಣಾಮ ನಿರ್ಮಲಾ ಅವರ ಮನೆಯ ಮೇಲ್ಚಾವಣಿಗೆ ಹಾನಿಯಾಗಿದ್ದು, ಗೋಡೆಯು ಬಿರುಕುಗೊಂಡು ಹಾನಿಯಾಗಿದೆ.
ಘಟನೆ ಸಂಭವಿಸಿದಾಗ ಮನೆಯೊಳಗೆ ನಿರ್ಮಲಾ ಸೇರಿದಂತೆ ಅವರ ಮಕ್ಕಳಾದ ವಿದ್ಯಾ, ರಮೇಶ ಹಾಗೂ ಅಳಿಯ ಪುಟ್ನಂಜ, ಮೊಮ್ಮಕ್ಕಳು ಸೇರಿ ಒಟ್ಟು ಆರು ಜನ ಮಲಗಿದ್ದರು. ಆವರಣ ಗೋಡೆಯು ಕುಸಿದ ಶಬ್ಧ ಕೇಳಿದಾಗ ಮನೆಯೊಳಗಿದ್ದವರು ಮನೆಯಿಂದ ಹೊರಗೆ ಓಡಿ ಬಂದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಆವರಣ ಗೋಡೆಯ ಬಳಿ ವಿದ್ಯುತ್ ಕಂಬವೂ ಅಪಾಯದಲ್ಲಿದ್ದು, ಮುಂಜಾಗ್ರತವಾಗಿ ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಕೊಣಾಜೆ ಪಂಚಾಯಿತಿ ಗ್ರಾಮ ಲೆಕ್ಕಿಗರಾದ ಪ್ರಸಾದ್,ಪಂಚಾಯಿತಿ ಸದಸ್ಯ ಹರಿಶ್ಚಂದ್ರ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೋಗಿಬೆಟ್ಟು ಬಳಿ ಗುಡ್ಡ ಕುಸಿತ: ಕೊಣಾಜೆ ಗ್ರಾಮದ ಜೋಗಿ ಬೆಟ್ಟುವಿನ ಪದ್ಮಾವತಿ ಎಂಬವರ ಮನೆಯ ಬಳಿ ಸೋಮವಾರ ರಾತ್ರಿ ಮಳೆಯಿಂದಾಗಿ ಗುಡ್ಡವೊಂದು ಕುಸಿದು ಬಿದ್ದಿದೆ.


