UN NETWORKS
ಹರೇಕಳ: ಸೌಜನ್ಯ ಸ್ಕೌಟ್ದಳ, ನೇತ್ರಾವತಿ ಇಕೋಕ್ಲಬ್ ಹರೇಕಳ ವತಿಯಿಂದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗಿಡಕ್ಕೆ ನೀರು ಹಾಕುವ ಮುಖೇನ ಉದ್ಘಾಟಿಸಿದ ಮಂಗಳೂರಿನ ಉಪವಲಯ ಅರಣ್ಯಾಧಿಕಾರಿ ರವಿ ಕುಮಾರ್ ರವರು ದಿನಾಚರಣೆಯ ಮಹತ್ವವನ್ನು ತಿಳಿಯ ಪಡಿಸುವುದರೊಂದಿಗೆ “ಕಾಡು ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತದೆ. ನಾವು ಬದುಕಲು ಸಸಿನೆಟ್ಟು ಪೋಷಿಸುವಂತಹ ಅರಣೀಕರಣ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಂಡು ಕಾರ್ಯಗತವಾಗಬೇಕು. ಈ ನಿಟ್ಟಿನಲ್ಲಿ ಅರಣ್ಯ ವಿಭಾಗದಿಂದ ಎಲ್ಲಾ ಸಲಹೆ-ಸಹಕಾರಗಳನ್ನು ನೀಡಲು ಸಿದ್ಧ” ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ಪ್ರಶಾಂತ್ ನಾೈಕ್ರವರು ಇಂದು ಕ್ಯಾನ್ಸರ್ ಪೀಡಿತರ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. ಇದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಪ್ಲಾಸ್ಟಿಕ್ ಮಾಲಿನ್ಯ. ಪ್ಲಾಸ್ಟಿಕ್ನಲ್ಲಿ ಇರುವ ಪುರಾನ್, ಒನ್ಫಿನಾಲ್, ಡೈಯಾಕ್ಲಿನ್, ಕ್ಯಾನ್ಸರ್ ಕಾರಕಗಳಾಗಿವೆ. ನಾವು ಬಳಸಿ ಎಸೆಯುವ ಪ್ಲಾಸ್ಟಿಕ್ನಿಂದ ಪರಿಸರದಲ್ಲಿ ನಾನಾ ಸಮಸ್ಯೆಗಳ ಜೊತೆಗೆ ತೀವ್ರತರವಾದ ಆರೋಗ್ಯ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಆದುದರಿಂದ ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ “ಪ್ಲಾಸ್ಟಿಕ್ ಬಳಕೆ ಹತ್ತಿಕ್ಕಿ” ಇದು ತುಂಬ ಪ್ರಸ್ತುತವಾಗಿದ್ದು, ಅದನ್ನು ನಾವೆಲ್ಲರೂ ಸೇರಿ ಕಾರ್ಯಗತಗೊಳಿಸಬೇಕು ಎಂದರು.
ಸಭಾಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ವಹಿಸಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರದ ಬಸ್ ನಿಲ್ದಾಣಗಳನ್ನು ಸ್ಕೌಟ್ಸ್, ಗೈಡ್ಸ್ ಮಕ್ಕಳು ಗುಡಿಸಿ, ಸ್ವಚ್ಛಗೊಳಿಸಿದರು. ತದ ನಂತರ ಶಾಲೆಯ ಸುತ್ತಮುತ್ತ ಅರಣ್ಯ ಇಲಾಖೆಯಿಂದ ನೀಡಿದ ಸುಮಾರು 20 ಸಸಿಗಳನ್ನು ನೆಡಲಾಯಿತು. ನಿರೀಕ್ಷಾ ಮತ್ತು ಬಳಗ ಪರಿಸರ ಗೀತೆಯನ್ನು ಹಾಡಿದರು. ವಿಜ್ಞಾನ ಶಿಕ್ಷಕರಾದ ಕೃಷ್ಣಶಾಸ್ತ್ರಿ ನಿರೂಪಿಸಿದರು. ರವಿಶಂಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಧನ್ಯವಾದವಿತ್ತರು.


