UN NETWORKS
ಹರೇಕಳ: ಸೌಜನ್ಯ ಸ್ಕೌಟ್‍ದಳ, ನೇತ್ರಾವತಿ ಇಕೋಕ್ಲಬ್ ಹರೇಕಳ ವತಿಯಿಂದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗಿಡಕ್ಕೆ ನೀರು ಹಾಕುವ ಮುಖೇನ ಉದ್ಘಾಟಿಸಿದ ಮಂಗಳೂರಿನ ಉಪವಲಯ ಅರಣ್ಯಾಧಿಕಾರಿ ರವಿ ಕುಮಾರ್ ರವರು ದಿನಾಚರಣೆಯ ಮಹತ್ವವನ್ನು ತಿಳಿಯ ಪಡಿಸುವುದರೊಂದಿಗೆ “ಕಾಡು ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತದೆ. ನಾವು ಬದುಕಲು ಸಸಿನೆಟ್ಟು ಪೋಷಿಸುವಂತಹ ಅರಣೀಕರಣ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಂಡು ಕಾರ್ಯಗತವಾಗಬೇಕು. ಈ ನಿಟ್ಟಿನಲ್ಲಿ ಅರಣ್ಯ ವಿಭಾಗದಿಂದ ಎಲ್ಲಾ ಸಲಹೆ-ಸಹಕಾರಗಳನ್ನು ನೀಡಲು ಸಿದ್ಧ” ಎಂದರು.
ಸಭಾಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ವಹಿಸಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರದ ಬಸ್ ನಿಲ್ದಾಣಗಳನ್ನು ಸ್ಕೌಟ್ಸ್, ಗೈಡ್ಸ್ ಮಕ್ಕಳು ಗುಡಿಸಿ, ಸ್ವಚ್ಛಗೊಳಿಸಿದರು. ತದ ನಂತರ ಶಾಲೆಯ ಸುತ್ತಮುತ್ತ ಅರಣ್ಯ ಇಲಾಖೆಯಿಂದ ನೀಡಿದ ಸುಮಾರು 20 ಸಸಿಗಳನ್ನು ನೆಡಲಾಯಿತು. ನಿರೀಕ್ಷಾ ಮತ್ತು ಬಳಗ ಪರಿಸರ ಗೀತೆಯನ್ನು ಹಾಡಿದರು. ವಿಜ್ಞಾನ ಶಿಕ್ಷಕರಾದ ಕೃಷ್ಣಶಾಸ್ತ್ರಿ ನಿರೂಪಿಸಿದರು. ರವಿಶಂಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಧನ್ಯವಾದವಿತ್ತರು.