UN NETWORKS
ಉಳ್ಳಾಲ: ಬಂಟರ ಭವನ ನಿರ್ಮಾಣವಾದರೆ ಸಾಲದು ಆರ್ಥಿಕವಾಗಿ ಹಿಂದುಳಿದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅದರ ಪ್ರಯೋಜನ ಮುಟ್ಟಿದರೆ ಮಾತ್ರ ನಾವು ನಿರ್ಮಿಸಿದ ಈ ಭವನ ಸಾರ್ಥಕವಾಗಲು ಸಾಧ್ಯ ಎಂದು ಉಳ್ಳಾಲ ವಲಯ ಬಂಟರ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಮುಂಬೈಯ ಉದ್ಯಮಿ ಬಿ. ವಿವೇಕ್ ಶೆಟ್ಟಿ ಬೊಲ್ಯಗುತ್ತು ಅಭಿಪ್ರಾಯಪಟ್ಟರು.
ಅವರು ಬಂಟರ ಸಂಘ ಉಳ್ಳಾಲ ವಲಯದ ಆಶ್ರಯದಲ್ಲಿ ರವಿವಾರ ನಡೆದ ಉಳ್ಳಾಲ ಬಂಟೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಅನೇಕ ಮಂದಿ ಆರ್ಥಿಕವಾಗಿ ನೊಂದವರು ಇದ್ದಾರೆ. ಆದರೆ ಅವರು ಸಮಾಜದ ಬಳಿ ಸಹಾಯ ಕೇಳಿಕೊಂಡು ಬರುವುದಿಲ್ಲ. ನಾವು ಅಂತವರನ್ನು ಗುರುತಿಸಿ ಅವರ ಆರೋಗ್ಯ, ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದರೆ ಮಾತ್ರ ಇಂತಹ ಸಮಾಜಕ್ಕೆ ನೀಡಿದ ಕೊಡುಗೆ ಸಾರ್ಥಕ್ಯವನ್ನು ಪಡೆಯಲು ಸಾಧ್ಯ ಎಂದ ಅವರು ಜೀವನದಲ್ಲಿ ನಿವೃತ್ತಿ ಎಂಬುದು ಇರಬಾರದು. ಅದೇ ರೀತಿ ಬಂಟರ ಭವನದ ಈ ಕಾರ್ಯಕ್ರಮ ಸಮಾರೋಪವಾಗದೆ ಇದು ಪ್ರಾರಂಭವಾಗಿದ್ದು, ಈ ಕಟ್ಟಡದ ಮೂಲಕ ಸಾಮಾಜಿಕ ಚಿಂತನೆಯ ಉತ್ತಮ ಕಾರ್ಯಗಳು ಆಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಎಂಆರ್ಜಿ ಗ್ರೂಪ್ ಬೆಂಗಳೂರಿನ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮಾತನಾಡಿ ಬಂಟರು ಯಾವ ಕ್ಷೇತ್ರದಲ್ಲಿ ಇದ್ದಾರೆ ಎನ್ನುವುದಕ್ಕಿಂತ ಯಾವ ಕ್ಷೇತ್ರದಲ್ಲಿ ಇಲ್ಲ ಎಂದು ಕೇಳಬೇಕಾಗಿದ್ದು ದೇಶ ವಿದೇಶಗಳಲ್ಲಿರುವ ಸಮಾಜದ ಬಾಂಧವರು ಸಮಾಜದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಿದ್ದು, ನೂತನವಾಗಿ ಪ್ರಾರಂಭಗೊಂಡಿರುವ ಈ ಭವನದ ಮೂಲಕ ಸಮಾಜಕ್ಕೆ ಕೊಡುಗೆಯಾಗಲಿ ಎಂದರು. ಬಂಟರ ಸಂಘ ಬೆಂಗಳೂರು ಇದರ ಅಧ್ಯಕ್ಷ ಚಂದ್ರಹಾಸ ರೈ ಮಾತನಾಡಿ ನಾವು ಬಂಟರು ಕೇವಲ ಬಂಟರಿಗಾಗಿ ಮಾತ್ರ ಬದುಕದೆ ಇತರ ನಮ್ಮ ಸಮಾಜದ ಅಭಿವೃದ್ಧಿಯೊಂದಿಗೆ ಇತರ ಸಮಾಜದ ಅಭಿವೃದ್ಧಿಗೂ ಮಾದರಿ ಕಾರ್ಯಕ್ರಮ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಜಯರಾಮ ಸಾಂತ ಬೋಳ್ಯಾರುಗುತ್ತು, ಡಾ| ಜಯಪಾಲ ಶೆಟ್ಟಿ ತಲಪಾಡಿ ದೊಡ್ಡಮನೆ, ಚಂದ್ರಹಾಸ ಅಡ್ಯಂತಾಯ ಕುತ್ತಾರುಗುತ್ತು, ರವೀಂದ್ರ ಶೆಟ್ಟಿ ಉಳಿದೊಟ್ಟು , ಕಟ್ಟಡ ಸಮಿತಿ ಗೌರವಾಧ್ಯಕ್ಷ ರಘುರಾಮ ಕಾಜವ ಪಟ್ಟೋರಿ, ಪ್ರ, ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಕೋಶಾಧಿಕಾರಿ ಸಂಜೀವ ಶೆಟ್ಟಿ ಪಡ್ಯಾರಮನೆ, ಬಂಟರ ಸಂಘದ ಪ್ರ. ಕಾರ್ಯದರ್ಶಿ ಮೋಹನದಾಸ ಗಾಂಭೀರ ಬೋಳ್ಯಾರು ಗುತ್ತು, ಉಪಾಧ್ಯಕ್ಷೆ ಚಿತ್ರಾ ಜಿ. ಅಡ್ಯಂತಾಯ, ಸಂಘಟನಾ ಕಾರ್ಯದರ್ಶಿ ಜಗದೀಶ್ ರೈ ಬೆಳ್ಮ, ಜೊತೆ ಕಾರ್ಯದರ್ಶಿ ನಾರಾಯಣ ರೈ, ಯುವ ವಿಭಾಗದ ಅಧ್ಯಕ್ಷ ಅಶೋಕ್ ರೈ ಮಡ್ಯಾರ್, ಸಿರಿ ಒಕ್ಕೂಟದ ಅಧ್ಯಕ್ಷ ನಿಶಾ ಎನ್. ಶೆಟ್ಟಿ ಉಪಸ್ಥಿತರಿದ್ದರು.
ಬಂಟರ ಕಲೋತ್ಸವದಲ್ಲಿ ಪ್ರಥಮ ಸ್ಥಾನವನ್ನು ಬಂಟರ ಸಂಘ ಮಾಣಿ, ದ್ವಿತೀಯ ಸ್ಥಾನವನ್ನು ಕಾರ್ಕಳ ವಲಯ ಬಂಟರ ಸಂಘ ಪಡೆದುಕೊಂಡರೆ.ತೃತೀಯ ಸ್ಥಾನವನ್ನು ಜಪ್ಪಿನಮೊಗರು ಬಂಟರ ಸಂಘ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಬಂಟರ ಭವನ ನಿರ್ಮಾಣಕ್ಕೆ ಶ್ರಮಿಸಿದವರನ್ನು ಗೌರವಿಸಲಾಯಿತು. ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಸ್ವಾಗತಿಸಿ ಪ್ರಸ್ತಾವನೆಗೈದರು. ಸುಖೇಶ್ ಚೌಟ ಉಳ್ಳಾಲಗುತ್ತು ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ಕಾರ್ಯದರ್ಶಿ ಸುರೇಶ್ ಶೆಟ್ಟಿ ಪಡ್ಯಾರಮನೆ ವಂದಿಸಿದರು.
ಬಂಟರ ಭವನದ ನಿರ್ಮಾಣದಲ್ಲಿ ಉಳ್ಳಾಲ ವಲಯದ ಸಮಾಜದ ಬಾಂಧವರು ಸೇರಿದಂತೆ ದೇಶ ವಿದೇಶಗಳ ಬಂಟ ಸಮಾಜದ ಬಾಂಧವರ ಶ್ರಮದೊಂದಿಗೆ ಅವರ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಲೋಪ ಬಾರದ ರೀತಿಯಲ್ಲಿ ಈ ಭವನದಲ್ಲಿ ಬಂದ ಪ್ರತೀ ಹಣಕ್ಕೂ ನ್ಯಾಯ ಒದಗಿಸುವ ಕಾರ್ಯವನ್ನು ಬಂಟರ ಸಂಘ ಉಳ್ಳಾಲ ವಲಯ ನಡೆಸಲಿದೆ.
ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು
ಅಧ್ಯಕ್ಷರು, ಬಂಟರ ಸಂಘ ಉಳ್ಳಾಲ ವಲಯ


