UN NETWORKS
ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಿಂದ ಮಧ್ಯಾಹ್ನ ತನಕ ನೀರಸ ಪ್ರಕ್ರಿಯೆ ಆದರೂ ಸಂಜೆಯಾಗುತ್ತಲೇ ಐವತ್ತು ಶೇ. ಮತ ಚಲಾವಣೆ ಆಗಿದೆ.
ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಯು.ಟಿ ಖಾದರ್ ಅವರು ತಾಲೂಕು ಪಂಚಾಯಿತಿ ಸದಸ್ಯ ಜಬ್ಬಾರ್ ಬೋಳಿಯಾರ್ ಸೇರಿದಂತೆ ಕಾರ್ಯಕರ್ತರೊಂದಿಗೆ ಆಗಮಿಸಿ ಬೋಳಿಯಾರಿನ ರಂತಡ್ಕ ಕರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7.30ಕ್ಕೆ ಮತ ಚಲಾಯಿಸಿದರು. ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳು ಹಾಗೂ ಮಂಗಳೂರು ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳು ಜನತೆ ಮತ್ತೆ ಮತ್ತೆ ಶಾಸಕನನ್ನಾಗಿ ಆರಿಸುವ ಪೂರ್ಣ ವಿಶ್ವಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರು ಅವರು ಸರಿಯಾಗಿ 7.00ಗಂಟೆಗೆ ಪಜೀರು ಪಾನೆಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಧುಗಳ ಜೊತೆಗೂಡಿ ಆಗಮಿಸಿ ಮತ ಚಾಲಯಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಡಳಿತ ವೈಫಲ್ಯ, ಕೇಂದ್ರದಲ್ಲಿ ಮೋದಿ ಸರಕಾರದ ಜನಪರ ಯೋಜನೆಗಳು ಮಂಗಳೂರು ಕ್ಷೇತ್ರ ಬಿಜೆಪಿ ಶಾಸಕನನ್ನು ವಿಧಾನ ಸಭೆ ಕಳುಹಿಸುವ ನಂಬಿಕೆ ಇದೆ. ಧರ್ಮ ಬೇಧವಿಲ್ಲದೆ ಸಮಾಜ ಸೌಕನಾಗಿ ಹೋರಾಟಗಾರನಾಗಿ ದುಡಿದ ಸೇವೆಯನ್ನು ಜನತೆ ಮರೆಯಲಾರರು ಎಂದರು.
ಸಿಪಿಎಂ ಅಭ್ಯರ್ಥಿ ಯುವ ನಾಯಕ, ನ್ಯಾಯವಾದಿ ಹೋರಾಟಗಾರ ನಿತಿನ್ ಕುತ್ತಾರು ಅವರು ಮುನ್ನೂರು ಗ್ರಾಮದ ಕುತ್ತಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 8.30ಕ್ಕೆ ಮತ ಚಲಾಯಿಸಿದರು.
*ಪಜೀರು ಪಾನೆಲ ಹಿರಿಯ ಪ್ರಾಥಮಿಕ ಶಾಲಾ ಮತದಾನ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ತನ್ನ ಜೊತೆಗಿದ್ದ ಯುವಕನ ಕೈಬೆರಳಿಗೆ ಹಾಕಿದ ಶಾಯಿ(ಇಂಕ್) ಮಾಸಿದಂತಿದ್ದು ಯುವಕರು ದೂರಿಕೊಂಡಾಗ ಸ್ವತಃ ಅಭ್ಯರ್ಥಿ ಬೋಳಿಯಾರ್ ಅವರ ಕೈಬೆರಳಿಗೆ ಹಾಕಿದ ಶಾಯಿ ಅದೇ ಸ್ಥಿತಿಯಲ್ಲಿದ್ದುದರಿಂದ ಮತ್ತೆ ಶಾಯಿ ಬಾಟಲಿ ಬದಲಿಸಲಾಯಿತು.
*ಬಬ್ಬುಕಟ್ಟೆ ಹಾಗೂ ಕುತ್ತಾರು ಪ್ರದೇಶದ ಮತಗಟ್ಟೆ ಪ್ರದೇಶದಲ್ಲಿ ಶಾಮಿಯಾನ ಹಾಕುವ ಕುರಿತಾಗಿ ಉಭಯ ಪಕ್ಷದ ಕಾರ್ಯಕರ್ತರ ನಡುವೆ ಚರ್ಚೆ ಉದ್ಭವಿಸಿ ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಯಿತು. ಬಳಿಕ ದೊಡ್ಡ ಗಾತ್ರದ ಛತ್ರಿ ಬಳಸಿದರು.
ಕೆಲವು ಬೂತ್‍ಗಳಲ್ಲಿ ಕ್ಯಾಂಪೇನ್ ನಡೆಯುವುದನ್ನು ಪ್ಯಾರಾ ಮಿಲಿಟರಿ ಪಡೆ ತಡೆದಿದೆ.
*ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಕೀಂ ಹೆಸರಿನ ಕಾರ್ಯಕರ್ತನೊಬ್ಬ ಬಿಜೆಪಿಗೆ ಮತ ಹಾಕುವುದನ್ನು ತೆಯುವ ಸಲುವಾಗಿ ಬಿಜೆಪಿ ಮತ ಹಾಕಿದರೆ ಪಕ್ಷದ ವರಿಷ್ಠರಿಗೆ ಹಾಗೂ ಅಧಿಕಾರಿಗಳಿಗೆ ಗೊತ್ತಾಗುತ್ತದೆ. ಅದರಿಂದ ತಿಂಗಳಿಗೆ ಸಿಗುವ ಐನೂರು ರೂ. ಪಿಂಚಣಿ ಹಾಗೂ ರೇಶನ್ ಕಾರ್ಡ್ ಸೌಲಭ್ಯ ಇಲ್ಲದಾಗುತ್ತದೆ ಎಂದು ಹಿಂದು ಮಹಿಳೆಯರನ್ನು ಹೆದರಿಸಿದ್ದು ಅದಕ್ಕೆ ಬಿಜೆಪಿ ಕಾರ್ಯಕರ್ತ ರಿತೇಶ್ ನೀವು ಕುರಾನ್ ಮುಟ್ಟಿ ಹೇಳಿ ನೀವು ಹಾಗೆ ಹೇಳೀಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತನನ್ನು ಚೆನ್ನಾಗಿ ತರಾಟೆಗೆ ತೆಗದುಕೊಂಡಿದ್ದು, ಬಳಿಕ ಕಾಂಗ್ರೆಸ್ ಕಾರ್ಯಕರ್ತ ತಪ್ಪೊಪ್ಪಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
*ಜಿಲ್ಲೆಯಾದ್ಯಂತ ಸುಮಾರು ಎಂಟು ನೂರು ಹೋಂ ಗಾರ್ಡ್‍ಗಳ ಪೈಕಿ ಮಂಗಳೂರು ಕ್ಷೇತ್ರದ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೋಂಗಾರ್ಡ್‍ಗಳ ಕಾರ್ಯವೈಖರಿಯನ್ನು ಜಿಲ್ಲಾ ಸಮಾದೇಷ್ಟ ಡಾ. ಮರಲೀ ಮೋಹನ್ ಚೂಂತಾರು ವೀಕ್ಷಿಸಿದರು.
*ಕ್ಷೇತ್ರವ್ಯಾಪಿ ನಾಲ್ಕು ಕಡೆಗಳಲ್ಲಿ ಪಿಂಕ್ ಪೋಲಿಂಗ್ ಸ್ಟೇಶನ್(ಮಹಿಳಾ ಸ್ನೇಹಿ ಮತದಾನ ಕೇಂದ್ರ) ಕಾರ್ಯಾಚರಿಸಿತು. ಕರ್ನಾಟಕ ವಿಧಾನಸಭಾ ಚುನಾವಣೆಗೆ ಉಳ್ಳಾಲದಾದ್ಯಂತ ಮತದಾರರು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸರತಿ ಸಾಲಿನಲ್ಲಿ ನಿಂತು ಮತದಾನದಲ್ಲಿ ಪಾಲ್ಗೊಂಡಿದ್ದು, ಮಧ್ಯಾಹ್ನ ನಂತರ ಮತದಾರರ ಸಂಖ್ಯೆ ಬೂತ್ ಗಳಲ್ಲಿ ಕಡಿಮೆಯಿದ್ದು ಶೇ.70 ರಷ್ಟು ಮತ ಎಲ್ಲಾ ಬೂತುಗಳಲ್ಲಿ ಶಾಂತಿಯುತವಾಗಿ ನಡೆಯಿತು.
ತಲಪಾಡಿ ಗ್ರಾಮದಲ್ಲಿ -9, ಸೋಮೇಶ್ವರ – 24 , ಅಂಬ್ಲಮೊಗರು -5 , ಉಳ್ಳಾಲ-41 , ಬೆಳ್ಮ- 5 , ಮುನ್ನೂರು -9, ಕೋಟೆಕಾರು -15 , ಕಿನ್ಯ – 4 ಬೂತುಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.
ವಿಳಂಬದ ಆರಂಭ: ಮುನ್ನೂರು ಗ್ರಾಮದ ಕುತ್ತಾರು ಶಾಲೆಯ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಅರ್ಧ ಗಂಟೆ ವಿಳಂಬವಾಗಿ ಆರಂಭಗೊಂಡಿತು. ತಾಂತ್ರಿಕ ಅಡಚಣೆಯಿಂದಾಗಿ ಮತದಾನ ಪ್ರಕ್ರಿಯೆ ವಿಳಂಬವಾಗಿದೆ . ವಿಳಂಬದ ಆರಂಭ ನಂತರವೂ ಕೆಲಕಾಲ ನಿಧಾನವಾಗಿ ಮತದಾನ ಪ್ರಕ್ರಿಯೆ ನಡೆದುದರಿಂದ ಸರತಿ ಸಾಲಿನಲ್ಲಿ ಮತದಾರರು ಹೆಚ್ಚು ಸಮಯ ನಿಲ್ಲಬೇಕಾಯಿತು.
ಶಾಮಿಯಾನ ತೆರವು : ಮುನ್ನೂರು ಮತಗಟ್ಟೆಗಳಲ್ಲಿ ವಿವಿದೆಡೆ ಪಕ್ಷದ ಕಾರ್ಯಕರ್ತರು ಹಾಕಲಾಗಿದ್ದ ಬೂತುಗಳನ್ನು ಪೊಲೀಸರು ತೆರವುಗೊಳಿಸಿದರು. ಚುನಾವಣೆ ಆರಂಭದ ಸಂದರ್ಭ ಶ್ಯಾಮಿಯಾನ ಹಾಕದಂತೆ ಸೂಚಿಸಿದ್ದರೂ, ಎಲ್ಲಾ ಪಕ್ಷದವರು ಶ್ಯಾಮಿಯಾನ ಹಾಕಿ ಕುಳಿತಿದ್ದರು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಚುನಾವಣೆ ವೀಕ್ಷಕರು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ತೆರವುಗೊಳಿಸಿದರು. ಬಿಸಿಲನ್ನು ತಡೆಯಲು ದೊಡ್ಡ ಗಾತ್ರದ ಛತ್ರಿಯನ್ನು ಅಳವಡಿಸಿ ಕಾರ್ಯಕರ್ತರು ಬೂತುಗಳಲ್ಲಿ ಕುಳಿತರು.
ಶಾಂತಿಯುತ ಮತದಾನ : ಕುತ್ತಾರು, ಉಳ್ಳಾಲ, ಬಬ್ಬುಕಟ್ಟೆ ಭಾಗಗಳಲ್ಲಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಅರೆಸೇನಾ ಸಿಬ್ಬಂದಿ ಹಾಗೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಬಬ್ಬುಕಟ್ಟೆ ಮತಗಟ್ಟೆಯ ಸಮೀಪ ಎರಡು ಪಕ್ಷದ ಮುಖಂಡರು ಗೇಟಿನವರೆಗೆ ಹೋಗುತ್ತಿರುವುದನ್ನು ಎರಡು ಪಕ್ಷದವರು ವಿರೋಧಿಸಿ, ಆನಂತರ ಪೊಲೀಸರು ಸುಣ್ಣದ ಮೂಲಕ ಮತಗಟ್ಟೆಯ 100 ಮೀ ಅಂತರದ ಎರಡೂ ಭಾಗದಲ್ಲಿ ಗೆರೆ ಹಾಕಿ ಅದರೊಳಗೆ ವಾಹನಗಳು ಮತ್ತು ಪಕ್ಷದ ಮುಖಂಡರು ಪ್ರವೇಶಿಸದಂತೆ ನೋಡಿಕೊಂಡರು.
ಬಬ್ಬುಕಟ್ಟೆ ಮತಗಟ್ಟೆಯಲ್ಲಿ 97ರ ಹರೆಯದ ರಾಧಾ ಮೂಲ್ಯ ಅವರನ್ನು ಪುತ್ರ ಮತಗಟ್ಟೆಗೆ ಹೊತ್ತು ಕರೆದುಕೊಂಡು ಮತ ಚಲಾಯಿಸಿದರು. ಅಂಬ್ಲಮೊಗರು, ಕುಂಪಲ, ಮಡ್ಯಾರು ಭಾಗದಲ್ಲಿಯೂ ಹಿರಿಯರು ಹಾಗೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ವಿಕಲಚೇತನ ಮತದಾರರು ಸಂಬಂಧಿಕರ ಆಶ್ರಯದೊಂದಿಗೆ ಮತಗಟ್ಟೆಗೆ ಆಗಮಿಸಿ ಹಕ್ಕನ್ನು ಚಲಾಯಿಸಿದರು.
ಮಹಿಳೆಯರಿಗೆ ಸಹಕಾರಿಯಾದ ಮಹಿಳಾ ಸ್ನೇಹಿ ಮತದಾನ ಕೇಂದ್ರ : ಉಳ್ಳಾಲ ಭಾಗದ ಬಿ.ಎಂ ಶಾಲೆ ಮತ್ತು ಮೊಗವೀರಪಟ್ನ ಶಾಲೆಯಲ್ಲಿ ಇದ್ದಂತಹ ಮಹಿಳಾ ಸ್ನೇಹಿ ಮತದಾನ ಕೇಂದ್ರ ಮಹಿಳೆಯರಿಗೆ ಸಹಕಾರಿಯಾಯಿತು. ಸಿಬ್ಬಂದಿಯೆಲ್ಲಾ ಮಹಿಳೆಯರೇ ಇದ್ದ ಪರಿಣಾಮ ಮತ ಚಲಾಯಿಸುವುದರ ಸರಿಯಾಗಿ ಮಾಹಿತಿ ಪಡೆದು ಹಕ್ಕು ಚಲಾಯಿಸುವಂತಾಗಿದೆ. ಪುರಷರು ಇರುವ ಮತಗಟ್ಟೆಗಳಲ್ಲಿ ಪ್ರಶ್ನೆ ಕೇಳಲು ಹಿಂಜರಿಕೆಯಾಗುತಿತ್ತು. ಆದರೆ ಚುನಾವಣಾ ಆಯೋಗದ ನೂತನ ಪ್ರಯೋಗ ತುಂಬಾ ಸಹಕಾರಿಯಾಗಿದೆ ಎಂದು ಉಳ್ಳಾಲದ ಮಹಿಳಾ ಮತದಾರರೊಬ್ಬರು ಅಭಿಪ್ರಾಯ ಹಂಚಿಕೊಂಡರು.
`ಒಂದರಲ್ಲಿ ಶಬ್ದ ಬರಲಿಲ್ಲ, ಇನ್ನೊಂದು ಒತ್ತಿದೆ’ : ಮತಯಂತ್ರದ ಮಾಹಿತಿಯ ಕೊರತೆಯಿಂದ ಮಹಿಳೆಯೊಬ್ಬರು ಗೊಂದಲಕ್ಕೀಡಾಗಿ ಮತಚಲಾವಣೆ ನಡೆಸಿದ ಪ್ರಸಂಗ ಸೋಮೇಶ್ವರ ವ್ಯಾಪ್ತಿಯ ಮತಗಟ್ಟೆಯಲ್ಲಿ ನಡೆಯಿತು. ಬಟನ್ ಒತ್ತಿದಲ್ಲಿ ಶಬ್ದ ಬರುತ್ತದೆ ಅನ್ನುವುದನ್ನು ಕೇಳಿ ತಿಳಿದಿದ್ದೆ. ಮತಗಟ್ಟೆಯಲ್ಲೂ ಒತ್ತಿದ ನಂತರ ಶಬ್ದ ಕೇಳಿದಲ್ಲಿ ಮಾತ್ರ ಮತ ಚಲಾವಣೆ ಆಗುತ್ತದೆ ಅನ್ನುವ ಸೂಚನೆ ನೀಡಿದ್ದರು. ಆದರೆ ತಾನು ಒತ್ತಿದ ಮೊದಲ ಬಟನ್ ನಲ್ಲಿ ಶಬ್ದ ಕೇಳಲಿಲ್ಲ. ಅದಕ್ಕಾಗಿ ಇನ್ನೊಂದು ಬಟನ್ ಒತ್ತಿದೆ. ಆ ವೇಳೆ ಶಬ್ದ ಕೇಳಿತು. ಯಾವ ಚಿಹ್ನೆಗೆ ಮತ ಚಲಾಯಿಸಿದ್ದೇನೆ ಅನ್ನುವುದು ಕೊನೆಗೂ ಗೊತ್ತಾಗಲಿಲ್ಲ ಎಂದವರು ತಿಳಿಸಿದರು.
ಬೆರಳೆಣಿಕೆಯ ಬೂತ್‍ಗಳು : ಜಾತ್ಯಾತೀತ ಜನತಾ ದಳ ಹಾಗೂ ಸಿಪಿಎಂ ಪಕ್ಷಗಳ ಬೂತ್ ಗಳು ಎಲ್ಲಾ ಮತಕೇಂದ್ರಗಳಲ್ಲಿ ಇರಲಿಲ್ಲ. ಕೆಲ ಕಡೆ ಸಿಪಿಎಂ ಬೂತುಗಳಿದ್ದರೆ, ಕೆಲ ಕಡೆ ಜೆಡಿಎಸ್ ಮತಗಟ್ಟೆಗಳು ಇದ್ದವು.


