ಉಳ್ಳಾಲ: ಪದವಿ ಪಡೆದ ಪಂಡಿತರು ಮುಂದಿನ ದಿನಗಳಲ್ಲಿ ಧರ್ಮಪ್ರಚಾರಕರಾಗಿ ಸುನ್ನತ್ ಜಮಾಅತ್ನ ಆಶಯ ಆದರ್ಶವನ್ನು ಜಗತ್ತಿನೆಲ್ಲಡೆ ಪಸರಿಸುವ ಜವಬ್ದಾರಿಯನ್ನು ನಿಭಾಯಿಸಬೇಕು ಎಂದು ಉದ್ಯಾವರ ಅತ್ತಾವುಲ್ಲ ತಂಙಳ್ ಅಭಿಪ್ರಾಯಪಟ್ಟರು.

ಅವರು ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ೪೫ನೆಯ ವಾರ್ಷಿಕ ಮತ್ತು ೩೫ನೆಯ ಸನದು ದಾನ ಮತ್ತು ಸಯ್ಯಿದ್ ಮದನಿ ಹಿಫ್ಲುಲ್ ಖುರ್ಆನ್ ಕಾಲೇಜಿನ ಪ್ರಥಮ ಸನದುದಾನ ಮಹಾ ಸಮ್ಮೇಳನದಲ್ಲಿ ಸನದುದಾನ ಮಾಡಿ ಮಾತನಾಡಿದರು.
ಧರ್ಮ ಗುರುಗಳು ಕಲಿಸಿದ ಧಾರ್ಮಿಕ ಶಿಕ್ಷಣಕ್ಕಿರುವ ಶ್ರೇಷ್ಠತೆ ಇತರರು ಕಲಿಸಿದ ಶಿಕ್ಷಣಕ್ಕೆ ಇರಲಾರದು. ಪದವಿ ಪಡೆದಾಕ್ಷಣ ಪಂಡಿತನಾಗಲು ಸಾಧ್ಯವಿಲ್ಲ. ಯಾಕೆಂದರೆ ನಾವು ಪಡೆದ ಪದವಿಯ ಹಿಂದೆ ಗುರುಗಳ ಆಶೀರ್ವಾದ ಅತಿ ಮುಖ್ಯ. ಗುರುಗಳ ಮೂಲಕ ಪಡೆದ ಶಿಕ್ಷಣದ ಮೌಲ್ಯ ಶ್ರೇಷ್ಠವಾದದ್ದು. ಧರ್ಮಗುರುಗಳನ್ನು ಉಲ್ಲಂಘಿಸಿ ಅವರ ಮಾತುಗಳನ್ನು ಧಿಕ್ಕರಿಸಿ ಮುನ್ನಡೆದವರು ಸಮಾಜದಲ್ಲಿ ಎಂದೂ ಗೌರವದ ಬದುಕು ಬಾಳಲು ಸಾಧ್ಯವಾಗಿಲ್ಲ ಎಂದು ಮಹಾ ಸಮ್ಮೇಳನ ಉದ್ಘಾಟಿಸಿದ ಉಡುಪಿ ಸಂಯುಕ್ತ ಖಾಝಿ ಬೇಕಲ ಅಬ್ದುಲ್ ಮುಸ್ಲಿಯಾರ್ ಏನುಡಿದರು.
ಪ್ರವಾದಿಯವರು ಧಾರ್ಮಿಕ ಶಿಕ್ಷಣಕ್ಕೆ ಪ್ರತ್ಯೇಕ ಸ್ಥಾನ ಕಲ್ಪಿಸಿದ್ದರು. ಇಸ್ಲಾಂ ಧರ್ಮ ಸಂಬಂಧಿಸಿದ ವಿಚಾರಗಳನ್ನು ಗುರುಗಳ ಮೂಲಕ ಕಲಿತು ಪದವಿ ಪಡೆಯುವವರಿಗೆ ಪ್ರತ್ಯೇಕ ಗೌರವವಿದೆ. ಪ್ರವಾದಿಯವರ ಕಾಲದಲ್ಲಿ ಉನ್ನತ ಶಿಕ್ಷಣ ಪಡೆದವರಿಗೆ ಪದವಿ ನೀಡಲಾಗುತ್ತಿತ್ತು. ಪದವಿ ಪಡಕೊಂಡವರಿಗೆ ಪ್ರತ್ಯೇಕ ಗೌರವ ಕೂಡಾ ಇತ್ತು ಎಂದು ನುಡಿದರು.
ಸನದು ದಾನ ಮಹಾ ಸಮ್ಮೇಳನದಲ್ಲಿ ಪದವಿ ಪಡೆಯಲು ಅರ್ಹರಾದವರು ಮಹಾಭಾಗ್ಯವಂತರು. ಆದರೆ ಶಿಕ್ಷಣ ಇಲ್ಲಿಗೆ ಮುಗಿಯಿತು ಎಂದು ಭಾವಿಸಬೇಡಿ. ಧರ್ಮದ ಬಗ್ಗೆ ಅರ್ಥಮಾಡಿಕೊಳ್ಳಲು ಬೇಕಾದ ವಿಚಾರಗಳನ್ನು ಕಲಿಯಲು ಇನ್ನೂ ಅವಕಾಶವಿದ್ದು, ಅದನ್ನು ಕಲಿಯಲು ಮುಂದಾಗಬೇಕು ಎಂದರು.
ಪದವಿ ಪ್ರದಾನ ಭಾಷಣ ಮಾಡಿದ ಕೋಡಂಬಲ ಬಾವಾ ಮುಸ್ಲಿಯಾರ್, ಶಿಕ್ಷಣ ಪಡೆಯುವುದು ಉತ್ತಮ ಕಾರ್ಯ. ಗೊತ್ತಿಲ್ಲದನ್ನು ಕೇಳಿ ತಿಳಿದುಕೊಳ್ಳಬಹುದು. ವಿಚಾರಗಳನ್ನು ಕಲಿಯಲು ನಾಚಿಕೆಬೇಕಿಲ್ಲ. ಪ್ರಾಚೀನ ಕಾಲದಲ್ಲಿ ಶಿಕ್ಷಣ ಇದ್ದರೂ ಕೆಲವೊಂದು ಕೊರತೆಗಳಿಂದ ಶಿಕ್ಷಣ ಎಲ್ಲರಿಗೂ ತಲುಪಿಲ್ಲ. ಪ್ರಸಕ್ತ ಶಿಕ್ಷಣ ಪಡೆಯಲು ಬೇಕಾದಷ್ಟು ಸೌಕರ್ಯಗಳಿವೆ. ಉತ್ತಮ ಶಿಕ್ಷಣ ಪಡಕೊಂಡಲ್ಲಿ ಪರಲೋಕ ಜೀವನಕ್ಕೆ ಆಸ್ತಿಯಾಗುತ್ತದೆ ಎಂದು ತಿಳಿಸಿದರು.
ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ದುಆ ನೆರವೇರಿಸಿದರು. ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡಿದರು.
ಉಳ್ಳಾಲ ಖಾಝಿ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಜನಾಡಿ ಉಸ್ತಾದ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್, ಸಮಸ್ತ ಮುಶಾವರ ಅಧ್ಯಕ್ಷ ಆಲಿಕುಂಞಿ ಮುಸ್ಲಿಯಾರ್ ಶಿರಿಯ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್, ಯುವಜನ ಸೇವೆ ಮತ್ತು ಕ್ರೀಡೆ ಸಚಿವ ಅಭಯಚಂದ್ರ ಜೈನ್, ವಕ್ಪ್ ಬೋರ್ಡ್ನ ಜಿಲ್ಲಾಧ್ಯಕ್ಷ ರಶೀದ್ ಹಾಜಿ, ಆತೂರು ಅಶ್ರಫ್ ತಂಙಳ್, ಸಿ.ಟಿ.ಎಂ. ಸಲೀಂ ತಂಙಳ್, ಮನ್ಶರ್ ಅಸಖಾಫ್ ತಂಙಳ್, ಅಬೂಬಕ್ಕರ್ ಚೆರುಕುಂಞಿ ತಂಙಳ್, ದಅವ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಕಾಲಂ ಸಖಾಫಿ, ಇಫುಲ್ ಕಾಲೇಜಿನ ಪ್ರಾಂಶುಪಾಲ ಹಾಫಿಲ್ ಅಬ್ದುಲ್ ರಹ್ಮಾನ್ ಸಖಾಫಿ, ಅಬ್ದುಲ್ ರಶೀದ್ ಮದನಿ ಆಲಪುಝ, ಅಬ್ದುಲ್ ರಶೀದ್ ಝೈನಿ, ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎ.ಎ. ಹೈದರ್ ಪರ್ತಿಪ್ಪಾಡಿ, ಮಜೀದ್ ಹಾಜಿ ಉಚ್ಚಿಲ, ಎಸ್.ಕೆ.ಖಾದರ್ ಹಾಜಿ ಮುಡಿಪು, ಸಿದ್ದೀಕ್ ಮೋಂಟುಗೋಳಿ, ಸುಲೈಮಾನ್ ಹಾಜಿ ಕಲ್ಲಡ್ಕ, ಉಳ್ಳಾಲ ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಉಪಾಧ್ಯಕ್ಷ ಅಶ್ರಫ್ ಆಹ್ಮದ್ ರೈಟ್ವೇ ಹಾಗೂ ನಾಜಿಮ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು.
ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಅತಿಥಿಗಳನ್ನು ಸ್ವಾಗತಿಸಿದರು. ಶೈಖುನಾ ಅಹ್ಮದ್ ಬಾವಾ ಮುಸ್ಲಿಯಾರ್, ಶೈಖುನಾ ತಾಯಕ್ಕೋಡ್ ಅಬ್ದುಲ್ಲಾ ಮುಸ್ಲಿಯಾರ್ ಸನದು ದಾನ ಮಾಡಿದರು.
ಅರೆಬಿಕ್ ಕಾಲೇಜಿನ ೬೫ಹಾಗೂ ಇಫುಲ್ ಕಾಲೇಜಿನ ೧೮ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಯ್ಯಿದ್ ಮದನಿ ಮೋರಲ್ ಕಾಲೇಜಿನ ಪ್ರತಿಕೃತಿ ಅನಾವರಣ ಮಾಡಲಾಯಿತು. ಆರ್.ಕೆ.ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು. ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಝಿಯಾ ತಂಙಳ್ ವಂದಿಸಿದರು.




