UN NETWORKS
ಉಳ್ಳಾಲ: ಬಿಜೆಪಿ ಪಕ್ಷಕ್ಕಿಂತ ಕಾಂಗ್ರೆಸ್ ದೊಡ್ಡ ಕೋಮುವಾದಿ ಪಕ್ಷವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮಹಾನ್ ನಾಯಕರೇ ಕಾಂಗ್ರೆಸ್ಸನ್ನು ಸೋಲಿಸಲಿದ್ದಾರೆ ಎಂದು ಜಾತ್ಯಾತೀತ ಜನತಾ ದಳದ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕುಂಞ ಹೇಳಿದರು.
ಅವರು ಕೆ.ಸಿ ರೋಡಿನಲ್ಲಿ ಸೋಮವಾರ ಜರಗಿದ ಜಾತ್ಯಾತೀತ ಜನತಾದಳದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಚಿವ ಖಾದರ್ ಅವರ ದುರಹಂಕಾರದ ನಡೆಯಿಂದ ಜನಸಾಮಾನ್ಯರ ನಾಯಕ ಅಶ್ರಫ್ ಉಳ್ಳಾಲ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಾಗಿದೆ. ಜನಸಮಾನ್ಯರಿಗೆ ಸಿಗುವ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಲ್ಲಿ ಮಾತ್ರ ಜನಸಾಮಾನ್ಯರಿಗೆ ರಾಜ್ಯದಲ್ಲಿ ಉಳಿಗಾಲವಿದೆ.
ಕಾನೂನು ಸುವ್ಯವಸ್ಥೆ ನೆಲೆಯಾಗಲು ರಾಜ್ಯದಲ್ಲಿ ಜೆಡಿಎಸ್ ಬರಬೇಕಿದೆ. ಉಳ್ಳಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ತಮ್ಮ ಲಾಭಕ್ಕಾಗಿ ಬ್ಯಾಟಿಂಗ್ ನಡೆಸುತ್ತಿರುವ ವೈದ್ಯಕೀಯ ಕಾಲೇಜಿನ ಚೇರ್‍ಮೆನ್ ಸಹಿತ ಹಣವಂತರು ಜೆಡಿಎಸ್ ಅಭ್ಯರ್ಥಿಗೆ ಎಚ್ಚರಿಕೆ ನೀಡುವುದನ್ನು ಬಿಟ್ಟುಬಿಡಿ. ಅಮಾಯಕ ಯುವಕರನ್ನು ಜೈಲಿಗೆ ಹಾಕುವ ಕಾಂಗ್ರೆಸ್ಸಿನವರಿಗೆ ಜಿಲ್ಲೆಗೆ ಬೆಂಕಿ ಹಚ್ಚಲು ಮುಂದಾದ ಸಂಸದರ ವಿರುದ್ಧ ಪೆಟ್ಟಿ ಕೇಸು ಹಾಕಲು ಸಾಧ್ಯವಾಗಿಲ್ಲ. ಪಂಚಾಯತ್ ಅಧ್ಯಕ್ಷನನ್ನು ಹಾಡಹಗಲೇ ಕೊಂದವರನ್ನು ಆಡಳಿತ ನಡೆಸುವವರೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ಇದನ್ನು ಗಮನಿಸುವಾಗ ಬಿಜೆಪಿ ಪಕ್ಷಕ್ಕಿಂತ ಕಾಂಗ್ರೆಸ್ ದೊಡ್ಡ ಕೋಮುವಾದಿ ಪಕ್ಷವಾಗಿದೆ ಎಂದರು.
ಅಭ್ಯರ್ಥಿ ಅಶ್ರಫ್ ಮಾತನಾಡಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಡೆಪಾಸಿಟ್ ಇಲ್ಲದೇ ಓಡಿಬಂದವರು ಖಾದರ್. ಸೋಲು-ಗೆಲುವು ಜೀವನದಲ್ಲಿ ಎಲ್ಲರಿಗೂ ಬರುತ್ತದೆ. ಅದನ್ನು ಹಿಯ್ಯಾಳಿಸುವುದು ಸರಿಯಲ್ಲ. ಉಳ್ಳಾಲಕ್ಕೆ ಮಹಿಳಾ ಕಾಲೇಜುಗಳಿಲ್ಲ, ಸರಿಯಾದ ಆಟದ ಮೈದಾನವಿಲ್ಲ. ಆದರೂ ಅಭಿವೃದ್ಧಿ ಎಂದು ಸುಳ್ಳು ಹೇಳುವ ಪರಿಪಾಠವನ್ನು ಮುಂದುವರಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ಫಾಕ್ ಕೆ.ಸಿ.ರೋಡ್ ವಹಿಸಿದ್ದರು. ಮುಖಂಡರುಗಳಾದ ಹೈದರ್ ಪರ್ತಿಪ್ಪಾಡಿ, ಅಝೀಝ್ ಮಲಾರ್, ಹಿದಾಯತ್ ಮಾರಿಪಲ್ಲ, ಕಬೀರ್ ಉಳ್ಳಾಲ್ ಟಿ.ವೈ.ಎಫ್ ಸಂಚಾಲಕ ಮೊಯ್ದೀನ್ ತಲಪಾಡಿ, ಯು.ಹೆಚ್.ಫಾರುಕ್, ಅಲ್ಫ್ರೆಡ್ ಡಿಸೋಜ, ಭರತ್ ಶೆಟ್ಟಿ , ಸೂಫಿ ಕುಂಞ, ಹುಸೈನ್ ತಲಪಾಡಿ ಉಪಸ್ಥಿತರಿದ್ದರು.
ತಾಕತ್ ಇದ್ದರೆ ಓಡಿಸಿ, ನಾವು ನೋಡುತ್ತೇವೆ ?
ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಖ್ ತಲಪಾಡಿ ಮಾತನಾಡಿ ದೇರಳಕಟ್ಟೆ ಯುವಕಾಂಗ್ರೆಸ್ಸಿಗರ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡ ಕಣಚೂರು ಮೋನು ಅವರ ಮಾತುಗಳಿಗೆ ಪ್ರತಿಕ್ರಿಯಿಸಿ ` ತಾನು ಆಕಾಂಕ್ಷಿಯಾಗಿದ್ದ ಸಂದರ್ಭ ಕಣಚೂರು ಮೋನು ಕಾಂಗ್ರೆಸ್ ಸೋಲಿಸಲು ಹಿಂದೆ ಮುಂದಾಗಿದ್ದರು. ಇದೀಗ ದುಡ್ಡಿನ ಬಲದಿಂದ , ತಮ್ಮ ಸ್ವಾರ್ಥಕ್ಕಾಗಿ ಅಶ್ರಫ್ ಅವರನ್ನು ಓಡಿಸುವ ಮಾತನಾಡುತ್ತಿದ್ದಾರೆ. ತಾಕತ್ ಇದ್ದರೆ ಯುವಕಾಂಗ್ರೆಸ್ಸಿಗರು ಹಾಗೂ ಕಣಚೂರು ಮೋನು ಬಂದು ಅಭ್ಯರ್ಥಿ ಅಶ್ರಫ್ ಅವರನ್ನು ಓಡಿಸಿ ನೋಡಲಿ ಎಂದು ಎಚ್ಚರಿಸಿದರು.


