UN NETWORKS
ಉಳ್ಳಾಲ : ಮುಗ್ದ ಬಾಲಕಿ ಮೇಲೆ ನಡೆದಂತಹ ಕ್ರೂರ ಕೃತ್ಯ ಮುಂದಿನ ದಿನಗಳಲ್ಲಿ ಯಾವುದೇ ಹೆಣ್ಮಕ್ಕಳಿಗೂ ನಡೆಯದಿರಲಿ ಎನ್ನುವ ಪ್ರಾರ್ಥನೆ ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.

ದರ್ಗಾ ವತಿಯಿಂದ ಶುಕ್ರವಾರ ದರ್ಗಾ ವಠಾರದಲ್ಲಿ ಜರಗಿದ ಉತ್ತರಭಾರತದಲ್ಲಿ ಅಪ್ರಾಪ್ತ ಬಾಲಕಿ ಮೇಲಾದ ಅತ್ಯಾಚಾರ, ಕೊಲೆ ಕೃತ್ಯ ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ನಡೆದ ಸಾಮೂಹಿಕ ಪ್ರಾರ್ಥನೆ ಹಾಗೂ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು.
ಕೃತ್ಯ ಅಂತಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಕಪ್ಪು ಚುಕ್ಕೆಯಾಗಿದೆ. ಆದರೂ ಪ್ರಧಾನಿ ಈ ವಿಚಾರದಲ್ಲಿ ಮೌನವಾಗಿರುವುದು ಸರಿಯಲ್ಲ. ಹೇಯ ಕೃತ್ಯ ಎಷ್ಟೊಂದು ಪರಿಣಾಮ ಬೀರಿದೆ ಎಂದರೆ ಮಕ್ಕಳೂ ಬೀದಿಗಿಳಿಯುತ್ತಿರುವುದನ್ನು ಗಮನಿಸಿದಾಗ ಅರಿವಿಗೆ ಬರುತ್ತದೆ. ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ದರ್ಗಾ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಿಯವರಿಗೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದರು.
ದರ್ಗಾ ಉಪಾಧ್ಯಕ್ಷ ಯು.ಕೆ.ಇಸ್ಮಾಯಿಲ್ ಮೋನು, ಬಾವಾ ಮುಹಮ್ಮದ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಜತೆ ಕಾರ್ಯದರ್ಶಿ ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಟ್ರಸ್ಟ್ ಸದಸ್ಯ ಅಯೂಬ್ ಮಂಚಿಲ ಮುಸ್ತಫಾ ಎವರೆಸ್ಟ್, ಪದಾಧಿಕಾರಿಗಳು, ಜಮಾತ್ ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ವಂದಿಸಿದರು.


