UN NETWORKS
ತಲಪಾಡಿ: ತಂಡವೊಂದು ಅಕ್ರಮವಾಗಿ ಬಾರಿನ ಕ್ಯಾಷ್ ಕೌಂಟರಿಗೆ ನುಗ್ಗಿ ದಾಂಧಲೆಗೈದು, ಇಬ್ಬರ ಮೇಲೆ ಹಲ್ಲೆ ನಡೆಸಿ ನಗದು , ಮದ್ಯದ ಬಾಟಲಿ ಲೂಟಿಗೈದು ಸೊತ್ತುಗಳಿಗೆ ಹಾನಿ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ದೇವಿಪುರ ರಸ್ತೆಯಲ್ಲಿ ಬುಧವಾರ ನಡೆದಿದೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಲಪಾಡಿ ದೇವಿಪುರ ರಸ್ತೆಯಲ್ಲಿರುವ ಅತಿಥಿ ಬಾರ್ ನಲ್ಲಿ ದಾಂಧಲೆ ನಡೆದಿದೆ. ಸ್ಥಳೀಯ ನಿವಾಸಿಗಳಾದ ನಿಚ್ಚು , ಸಂದೇಶ, ಗಣೇಶ, ರಾಹುಲ್, ರಮಾನಂದ, ಕಿರಣ್, ಶಿವ, ಹಾಗೂ ಇತರೆ 12 ಮಂದಿಯ ತಂಡ ಅಕ್ರಮವಾಗಿ ನುಗ್ಗಿ ದಾಂಧಲೆ ನಡೆಸಿದೆ. ಮಧ್ಯಾಹ್ನ ವೇಳೆ ಬಾರಿನ ಕ್ಯಾಷ್ ಕೌಂಟರಿನೊಳಕ್ಕೆ ನುಗ್ಗಿದ ತಂಡ ಕಂಪ್ಯೂಟರ್, ಪ್ರಿಂಟರ್ ಪುಡಿಗೈದು, ಕ್ಯಾಷಿನಲ್ಲಿರಿಸಲಾಗಿದ್ದ ರೂ. 1 ಲಕ್ಷ ನಗದು , ಮೊಬೈಲ್ ಕಳವುಗೈದು , ಮದ್ಯದ ಬಾಟಲಿಯಿಂದ ಬಾರ್ ಸಿಬ್ಬಂದಿ ತಲೆಗೆ, ಕೈಗೆ ಹೊಡೆದಿದ್ದಾರೆ. ಜತೆಗೆ ಬಾಟಲಿಗಳನ್ನು ಕಳವು ನಡೆಸಿದ್ದಾರೆ . ಘಟನೆಯಲ್ಲಿ ಸಿಬ್ಬಂದಿ ಪ್ರವೀಣ್ ಮತ್ತು ಸುಜಿತ್ ಎಂಬವರು ಗಾಯಗೊಂಡಿದ್ದಾರೆ.
ಸಮಯ ಕಳೆದರೂ ಮದ್ಯ ಕೇಳಿದ್ದರು : ಎ.10 ರ ತಡರಾತ್ರಿ ಬಂದಿದ್ದ ಇಬ್ಬರ ತಂಡ ಮದ್ಯ ಕೊಡುವಂತೆ ಕೇಳಿತ್ತು. ಆದರೆ ಸಮಯ 11 ಕಳೆದಿದ್ದು, ಕೊಡುವುದಿಲ್ಲ ಎಂದು ಸಿಬ್ಬಂದಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಆಕ್ರೋಶಗೊಂಡ ತಂಡ ಬಾರ್ ನ ಕಿಟಕಿ ಗಾಜನ್ನು ಪುಡಿಗೈದಿತ್ತು. ಬಳಿಕ ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಇಳಿದಾಗ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಓರ್ವ ಪರಾರಿಯಾಗಿದ್ದರೆ, ಸೋಮ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೇ ವೇಳೆ ಸ್ಥಳದಲ್ಲಿದ್ದ ನಿಚ್ಚು ಎಂಬಾತನಿಗೆ ಸೇರಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದರು. ಇದರ ಪ್ರತೀಕಾರ ತೀರಿಸುವ ಸಲುವಾಗಿ 19 ಮಂದಿಯ ತಂಡ ಬುಧವಾರ ಏಕಾಏಕಿ ಬಾರಿನೊಳಕ್ಕೆ ನುಗ್ಗಿ ದಾಂಧಲೆ ನಡೆಸಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರ್ ಗೆ ಸ್ಥಳ ನಿಗದಿಯಾದ ಸಮಯದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ವಸತಿ ಪ್ರದೇಶದಲ್ಲಿ ಬಾರ್ ನಿರ್ಮಿಸದಂತೆ ಒತ್ತಾಯಿಸಿದ್ದರು. ಆದರೆ ಕೆಲ ತಿಂಗಳ ಬಳಿಕ ಬಾರ್ ತೆರೆದುಕೊಂಡಿತ್ತು. ತಂಡ ದಾಳಿ ನಡೆಸಿರುವ ದೃಶ್ಯ ಕ್ಯಾಷಿನೊಳಕ್ಕೆ ಇರಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರಲ್ಲಿ ಕೆಲವರು ಹೆಲ್ಮೆಟ್ ಮತ್ತು ಮುಖಕ್ಕೆ ಬಟ್ಟೆ ಕಟ್ಟಿದ್ದರೆ ಇನ್ನು ಹಲವರು ಹಾಗೆಯೇ ದಾಂಧಲೆ ನಡೆಸಿರುವುದು ಕಂಡುಬರುತ್ತದೆ.





