UN NETWORKS
ಉಳ್ಳಾಲ: ಉಳ್ಳಾಲ ಭಾಗದ ಎಲ್ಲಾ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳಲ್ಲಿ ಎ.6 ರಂದು ಗೋ ಸಂರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಹೇಳಿದ್ದಾರೆ.
ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಗುರುವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ದೇಶದಲ್ಲಿ ಬಹುಸಂಖ್ಯಾತರ ಹಕ್ಕಿಗಾಗಿ ಹೋರಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಗೋ ಉತ್ಪನ್ನಗಳ ಕೊರತೆಯಾದಲ್ಲಿ ಮನುಷ್ಯ ಜೀವಿಸಲು ಕಷ್ಟಕರವಾಗಬಹುದು. ರಾಜ್ಯ ಸರಕಾರ ಪ್ರಮಾಣ ವಚನ ಸ್ವೀಕರಿಸಿದ ಮರುದಿನದಂದೇ ಉಳ್ಳಾಲ ಭಾಗದಲ್ಲಿ ಗೂವು ಕಳವು ನಡೆಸಿ ತುಳಸೀಕಟ್ಟೆಯಲ್ಲಿ ಗೋವಿನ ಗೊರಸು ಇಟ್ಟಿರುವಂತಹ ಹೇಯ ಕೃತ್ಯ ನಡೆದಿದೆ, ತದನಂತರ ಬೆನ್ನಲ್ಲೇ ಜಾನುವಾರು ಕಳವು ಪ್ರಕರಣ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಆದರೆ ಸರಕಾರದ ಮಂತ್ರಿಗಳು, ಶಾಸಕರು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.
ಶಾಸನವನ್ನು ವಾಪಸ್ಸು ಪಡೆಯುವ ಮೂಲಕ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅತಂತ್ರದಲ್ಲಿರುವ ಹಾಗೂ ನಶಿಸಿ ಹೋಗುತ್ತಲಿರುವ ಗೋ ಸಂಪತ್ತನ್ನು ಉಳಿಸುವ ಉದ್ದೇಶದಿಂದ ವಿ.ಹಿಂಪ, ಹಿಂದು ಜಾಗರಣಾ ವೇದಿಕೆ, ಬಜರಂಗದಳ, ದುರ್ಗಾವಾಹಿನಿ ಸಂಘಟನೆಗಳ ನೇತೃತ್ವದಲ್ಲಿ ಉಳ್ಳಾಲ ಭಾಗದ 27 ಭಾಗಗಳಲ್ಲಿನ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ ಎಂದರು.
ಈ ವೇಳೆ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್, ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ್ ಕುತ್ತಾರ್, ಉಳ್ಳಾಲ ಪ್ರಖಂಡ ಕಾರ್ಯದರ್ಶಿ ರವಿ ಅಸೈಗೋಳಿ ಉಪಸ್ಥಿತರಿದ್ದರು.



