UN NETWORKS
ಕೈರಂಗಳ: ಗೋವಿನ ಪರವಾಗಿ ಸತ್ಯಾಗ್ರಹ ನಡೆಸುತ್ತಿರುವ ರಾಜಾರಾಮ್ ಭಟ್ ಅವರು ಅನಾರೋಗ್ಯಕ್ಕೆ ಒಳಗಾದರೆ ಜಿಲ್ಲಾಡಳಿತ ಮತ್ತು ಸರ್ಕಾರವೇ ಹೊಣೆಯಾಗುತ್ತೆ. ಮುಂದಿನ ಎರಡು ದಿನಗಳಲ್ಲಿ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಎಲ್ಲಾ ಸಂತರು ಕಾಲ್ನಡಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಆದರೆ ಇದಕ್ಕೂ ಸ್ಪಂದನೆ ಸಿಗದೇ ಇದ್ದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿ ಬೀಳುವ ರೀತಿಯಲ್ಲಿ ಹೋರಾಟ ನಡೆಯಲಿದೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಿಂದ ಗೋಕಳ್ಳತನ ಮಾಡಿದ ಗೋಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಭಾನುವಾರ ಗೋಶಾಲೆ ಆವರಣದಲ್ಲಿ ಗೋಶಾಲೆ ಸಮಿತಿ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಆರಂಭಿಸಿರುವ ಆಮರಣಾಂತ ಉಪವಾಸ ಸತ್ಯಾಗ್ರಹದ ನಾಲ್ಕನೇ ದಿನವಾದ ಬುಧವಾರ ದಂದು ಹಮ್ಮಿಕೊಂಡಿದ್ದ ಸಾಧು-ಸಂತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿಯೊಂದು ಧರ್ಮದವರ ಪರವಾಗಿ ರಾಜರಾಮ್ ಭಟ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮುಂದಿನ ದಿನಗಳಲ್ಲಿ ಅಂದೋಲನವಾಗಬೇಕು. ಈ ಪ್ರದೇಶದ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದ ಹಬ್ ಆಗಿ ಬೆಳೆಯುತ್ತಿದೆ. ಆದರೆ ಇದರ ಹಿಂದೆಯೇ ಗೋಕಳ್ಳರ ಸೋಗಿನಲ್ಲೇ ಡ್ರಗ್ ಮಾಫಿಯಾ ಜಾಲವೂ ಬೆಳೆದು ನಿಂತಿದೆ ಎಂದು ಸ್ವಾಮೀಜಿ ಆರೋಪಿಸಿದರು. ಈ ಗೋಹತ್ಯೆ ಎನ್ನುವುದು ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾದ ನೋವಲ್ಲ. ಸದ್ಯ ಎಲ್ಲಾ ಧರ್ಮಗಳೂ ಈ ನೋವಿನಿಂದ ಬಳಲುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಂ ಹೆಗ್ಡೆಯನ್ನು ಒಂದು ಪೋಸ್ಟ್ ಶೇರ್ ಮಾಡಿದ ಕಾರಣಕ್ಕೆ ಬಂಧಿಸಿದ ಸರ್ಕಾರಕ್ಕೆ ಗೋಕಳ್ಳರ ಬಂಧಿಸಲು ಸಾಧ್ಯವಾಗದೇ ಇರುವುದು ನಾಚಿಕೆಗೇಡು ಎಂದು ಖೇದ ವ್ಯಕ್ತಪಡಿಸಿದರು.
ಕಾಶ್ಮೀರದ ಪರಿಸ್ಥಿತಿ ಇಲ್ಲೂ ನಿರ್ಮಾಣವಾಗುತ್ತಿದೆ: ಮಾಣಿಲ ಶ್ರೀ
ಗೋ ರಕ್ಷಣೆಗಾಗಿ ರಾಜಾರಾಂ ಭಟ್ ಅವರು ನಡೆಸುತ್ತಿರುವ ಹೋರಾಟದ ಸಂದೇಶದ ಎಲ್ಲಾ ದೇವಾಲಯ, ಮಠ-ಮಂದಿರ ಹಾಗೂ ಪ್ರತೀ ಮನೆಮನೆಗೂ ತಲುಪಲಿ. ಗೋವು ಜೀವನದ ಭವಿಷ್ಯ, ಗೋವಿನ ಹಿಂಸೆಯ ರೋಧನದಿಂದ ಸಮಾಜದಲ್ಲಿ ಋಣಾತ್ಮಕ ಅಂಶಗಳು ನಿರ್ಮಾಣವಾಗುತ್ತಿದೆ. ಹೀಗಾಗಿ ಗೋಹತ್ಯೆಯ ವಿರುದ್ದ ಎಲ್ಲರೂ ಒಟ್ಟಾಗಿ ಹೋರಾಟಬೇಕಿದೆ ಎಂದು ಶ್ರೀಧಾಮ ಮಾಣಿಲದ ಮೋಹನ್ ದಾಸ್ ಸ್ವಾಮೀಜಿ ನುಡಿದರು.
ಗೋವು ವಿದ್ಯೆ-ಸಂಸ್ಕೃತಿಯ ಕೇಂದ್ರ ಬಿಂದು- ಕೇಮಾರು ಶ್ರೀ
ಗೋವು ಹಿಂದೂ ಸಂಸ್ಕೃತಿ ಹಾಗೂ ವಿಧ್ಯೆಯ ಕೇಂದ್ರ ಬಿಂದು. ಅಂತಹ ಪವಿತ್ರ ಗೋವಿನ ರಕ್ತ ಭೂಮಿಗೆ ಬೀಳುತ್ತಿರುವ ಪರಿಣಾಮ ಯಜ್ಷ-ಯಾಗಾದಿಗಳಂತ ಸೇವೆಗಳ ಫಲ ಲಭಿಸುತ್ತಿಲ್ಲ ಎಂದು ಕೇಮಾರು ಶ್ರೀಈಶವಿಠಲದಾಸ ಸ್ವಾಮೀಜಿ ನುಡಿದರು.
ಸರ್ಕಾರ ಬಲವಂತವಾಗಿ ಎಬ್ಬಿಸಿದರೆ ಕೇಸು ದಾಖಲಿಸುತ್ತೇನೆ: ರಾಜಾರಾಂ ಭಟ್
ಆರೋಗ್ಯ ತಪಾಸಣೆ ನೆಪದಲ್ಲಿ ಸರ್ಕಾರಿ ವೈದ್ಯರು ನನ್ನ ಬಳಿಗೆ ಬರುತ್ತಿದ್ದಾರೆ. ಈ ಮೂಲಕ ಅನಾರೋಗ್ಯದ ನೆಪವೊಡ್ಡಿ ನನ್ನನ್ನು ಇಲ್ಲಿಂದ ಎಬ್ಬಿಸುವ ಕೆಲಸ ನಡೆಯುತ್ತಿದೆ. ಆದರೆ ಸರ್ಕಾರ ನನ್ನನ್ನು ಬಲವಂತವಾಗಿ ಸತ್ಯಾಗ್ರಹದ ಜಾಗದಿಂಧ ಎಬ್ಬಿಸಲು ಯತ್ನಿಸಿದರೆ ನಾನು ಕೇಸು ದಾಖಲಿಸಿ ಹೋರಾಟ ಮುಂದುವರೆಸುತ್ತೇನೆ. ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ಹೀಗಾಗಿ ನನ್ನನ್ನು ಹೋರಾಟದಲ್ಲಿ ಏಕಾಂಗಿಯಾಗಿಸದೇ ಸರ್ವರೂ ನನ್ನ ಹೋರಾಟವನ್ನು ಬೆಂಬಲಿಸಿ ಎಂದು ಸಹಾಯ ಭಿಕ್ಷೆ ಯಾಚಿಸುತ್ತಿದ್ದೇನೆ ಎಂದು ಆಮರಣಾಂತ ಉಪವಾಸ ನಿರತ ರಾಜಾರಾಂ ಭಟ್ ಬೇಡಿಕೊಂಡರು.
ಈ ಸಮಾವೇಶದಲ್ಲಿ ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ, ಕನ್ಯಾನ ಬಾಳೆಕೋಡಿ ಮಠದ ಶಶಿಕಾಂತಮಣಿ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಎಂ.ಬಿ.ಪುರಾಣಿಕ್, ವಿಶ್ವಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಹವ್ಯಾಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ, ರಾಜ್ಯ ಗೋ ಪರಿವಾರ ಕಾರ್ಯದರ್ಶಿ ಕೃಷ್ಣ ಮೂರ್ತಿ, ಸತೀಶ್ ಕುಂಪಲ, ರಾಧಾಕೃಷ್ಣ ಅಡ್ಯಂತಾಯ ಪ್ರವೀಣ್ ಕುತ್ತಾರ್ ಉಪಸ್ಥಿತರಿದ್ದರು.ಮಾತ್ರವಲ್ಲದೆ ಬುಧವಾರ ನಡೆದ ಸಾಧುಸಂತರ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.
ಖಾದರ್ ಭೇಟಿ ನೀಡಿದ ದೇವಸ್ಥಾನದ ಬ್ರಹ್ಮಕಲಶವಾಗಲಿ: ಕಲ್ಲಡ್ಕ ಭಟ್
ಈ ಕ್ಷೇತ್ರದಲ್ಲಿ ಯು.ಟಿ.ಖಾದರ್ ಎಂಬ ಒಬ್ಬ ಶಾಸಕರಿದ್ದಾರೆ. ಆದರೆ ಅವರ ನೆರಳಲ್ಲೇ ಇಂತಹ ಕೆಲಸಗಳು ನಡೆಯುತ್ತಿದೆ. ಆದರೆ ಆ ವ್ಯಕ್ತಿ ದೇವಸ್ಥಾನ, ಕೊರಗಜ್ಜನ ಕಟ್ಟೆ ಎಂದು ಭೇಟಿ ನೀಡಿ ವಂಚಿಸುತ್ತಿದ್ದಾರೆ. ಆದರೆ ಅಂತಹ ಕೊಳಕು ಮನುಷ್ಯನಿಗೆ ಪ್ರಸಾದ ಕೊಡುವವರು ಒಮ್ಮೆ ಯೋಚಿಸಬೇಕು. ದೈವ-ದೇವರು ಎಂದು ಭೂತ ಕೋಲಗಳಿಗೆ ಹೋಗುವ ಸಚಿವ ಖಾದರ್ ಭೇಟಿ ನೀಡಿದ ದೇವಸ್ಥಾನಗಳಿಗೆ ಮತ್ತೆ ಬ್ರಹ್ಮಕಲಶ ನಡೆಸಬೇಕು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕಿಡಿ ಕಾರಿದರು.
ಸ್ವಾತಂತ್ರ್ಯ ಸಿಕ್ಕಿದ ನಂತರ ಕಾನೂನು ರಚಿಸುವ ಅವಕಾಶ ಸಿಕ್ಕರೆ ಎರಡು ಕಾನೂನು ರಚಿಸುವುದಾಗಿ ಗಾಂಧೀಜಿ ಹೇಳಿದರು. ಅದರಲ್ಲಿ ಒಂದು ಗೋ ಹತ್ಯೆ ನಿಷೇಧ ಮತ್ತು ಇನ್ನೊಂದು ಮತಾಂತರ ನಿಷೇಧ. ಆದರೆ ಈ ಡೋಂಗಿ ಗಾಂಧಿಗಳು ಅದನ್ನು ವಿರೋಧಿಸುತ್ತಿರುವುದು ಆಶ್ಚರ್ಯವಾಗುತ್ತಿದೆ. ಇನ್ನು ಈ ಕ್ಷೇತ್ರದ ಶಾಸಕ ಖಾದರ್ ಜೊತೆಗಿರುವ ಎಲ್ಲರೂ ನಿಜವಾದ ಗೋ ಕಳ್ಳರು ಎಂದು ಟೀಕಿಸಿದ ಅವರು, ಪ್ರತಿಯೊಂದು ಸಂದರ್ಭದಲ್ಲಿ ಧರ್ಮ ಮತ್ತು ಗೋವಿನ ಬಗ್ಗೆ ಮಾತನಾಡುವ ಉಳಿದ ಸನ್ಯಾಸಿಗಳು ಎಲ್ಲಿದ್ದಾರೆ? ಎಲ್ಲಾ ಆರಾಮವಾಗಿದ್ದಾರೆ ಎಂದು ಹೋರಾಟಕ್ಕೆ ಬೆಂಬಲ ಸೂಚಿಸದ ಕೆಲ ಸ್ವಾಮೀಜಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೊನ್ನೆ ಇಲ್ಲಿದೆ ಬಂದಿದ್ದ ಗೋಕಳ್ಳ ಮತ್ತೆ ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಆದರೆ ಅವನು ಮತ್ತೆ ಬಂದರೆ ಇಲ್ಲಿಯೇ ಗೋರಿ ತೆಗೆಯುವ ಕೆಲಸ ಮಾಡುತ್ತೇವೆ. ಒಂದು ವೇಳೆ ರಾಜಾರಾಂ ಭಟ್ ರಿಗೆ ತೊಂದರೆಯಾದರೆ ಇಲ್ಲಿನ ಶಾಸಕ ಖಾದರ್ ರನ್ನು ಸುಮ್ಮನೆ ಬಿಡುವುದಿಲ್ಲ. ಈ ಹೋರಾಟ ಮುಂದಿನ ದಿನಗಳಲ್ಲಿ ಬೆಂಕಿಯಾಗಿ ಹಬ್ಬುತ್ತದೆ ಎಂದು ಪ್ರಭಾಕರ ಭಟ್ ಎಚ್ಚರಿಕೆ ನೀಡಿದರು.
ಖಾದರ್ ಬಂದು ಕ್ಷಮೆ ಕೇಳಲಿ
ರಾಜಾರಾಂ ಭಟ್ ಅವರು ನಡೆಸುತ್ತಿರುವ ಹೋರಾಟವನ್ನು ಈವರೆಗೆ ಸರ್ಕಾರ ಆಲಿಸಿಲ್ಲ. ಚುನಾವಣಾ ಆಯೋಗವೇ ಬಂದು ನಮ್ಮ ದೂರನ್ನು ಕೇಳಲಿ, ಈ ವಿಚಾರದಲ್ಲಿ ಯಾರೂ ಭಯಪಡಬೇಕಿಲ್ಲ. ಈ ಸರ್ಕಾರ ಗೋ ಹತ್ಯೆಗಾಗಿ ಸಿದ್ದ ಸರ್ಕಾರವೇ ಹೊರತು ಗೋ ಹತ್ಯೆ ನಿಷೇಧಕಲ್ಲ. ಇಷ್ಟು ದಿನ ಈ ಜಾಗಕ್ಕೆ ಬಾರದ ಆಹಾರ ಸಚಿವ ಖಾದರ್ ಮುಂದಿನ ಎರಡು ದಿನಗಳಲ್ಲಿ ರಾಜಾರಾಂ ಭಟ್ ಅವರ ಬಳಿ ಬಂದು ಕ್ಷಮೆ ಕೇಳಲಿ
ಶ್ರೀರಾಜಶೇಖರಾನಂದ ಸ್ವಾಮೀಜಿ, ವಜ್ರದೇಹಿ ಮಠ, ಗುರುಪುರ


