UN NETWORKS
ಕೈರಂಗಳ: ಮುಡಿಪು ವಲಯದ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಶಾಲೆಯಿಂದ ಇತ್ತೀಚೆಗೆ ನಡೆದ ದನ ದರೋಡೆ ಪ್ರಕರಣ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭಾನುವಾರ ಬೆಳಗ್ಗೆ ಅಮರಣಾತ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ.
ಅಮೃತಧಾರಾ ಗೋಶಾಲೆ ಸಮಿತಿ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಪರಿಸರದ ಗೋಪ್ರೇಮಿಗಳು ಬೆಂಬಲ ಸೂಚಿಸಿ ಧರಣಿ ಕುಳಿತಿದ್ದಾರೆ. ಸತ್ಯಾಗ್ರಹ ಆರಂಭಕ್ಕೂ ಮುನ್ನ ಸ್ಥಳೀಯ ಪೊಲೀಸ್ ಅಧಿಕಾರಿಗಳು ಧರಣಿ ಕೈಬಿಡುವಂತೆ ಮನವಿ ಮಾಡಿದಾರೂ ಪ್ರತಿಭಟನಾಕಾರರು ನಿರ್ಧಾರ ಬದಲಿಸಲಿಲ್ಲ.
ಗೋಕಳ್ಳರನ್ನು ಬಂಧಿಸಿ, ಅವರು ತಪ್ಪೊಪ್ಪಿಕೊಳ್ಳುವ ತನಕ ಸತ್ಯಾಗ್ರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಧರಣಿ ನಿರತರು ಘೋಷಿಸಿದ್ದಾರೆ. ಈ ಮೂಲಕ ಗೋಕಳ್ಳರಿಗೆ ಎಚ್ಚರಿಕೆ ಸಂದೇಶ ತಲುಪಿಸಲಾಗುವುದು. ಸತ್ಯಾಗ್ರಹಕ್ಕೆ ಸೂಕ್ತ ಸ್ಪಂಧನೆ ವ್ಯಕ್ತವಾಗದಿದ್ದಲ್ಲಿ ನಾಳೆಯಿಂದ ಸರಣಿ ಧರಣಿ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು, ಈ ಹಿಂದೆ ದುಷ್ಕರ್ಮಿಗಳಿಂದ ದನಗಳನ್ನು ಕರೆದುಕೊಂಡ ಸಂತ್ರಸ್ತರನ್ನೂ ಕರೆತಂದು ಹೋರಾಟ ತೀವ್ರಗೊಳಿಸಲಾಗುವುದು ಎಂದು ಧರಣಿ ನಿರತರು ತಿಳಿಸಿದ್ದಾರೆ.
ಇದು ಸಾಮಾಜಿಕ ಆಂದೋಲನ, ಯಾವುದೆ ಜಾತಿ ಧರ್ಮದ ವಿರುದ್ಧ ಅಲ್ಲ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮತಾಂಧರು, ಗಾಂಜಾ ವ್ಯಸನಿಗಳು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಸತ್ಯಾಗ್ರಹ ಆರಂಭದಲ್ಲಿ ರಾಜಾರಾಮ ಭಟ್ ಹೇಳಿದರು.ಅರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು, ಸರ್ಕಾರ ಕಣ್ಣುಮುಚ್ಚಿ ಕೂರಬಾರದು ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಆಗ್ರಹಿಸಿದರು.
ತಾ.ಪಂ.ಸದಸ್ಯ ನವೀನ್ ಪಾದಲ್ಪಾಡಿ, ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಜಯರಾಮ ಶೆಟ್ಟಿ ಕಂಬಳಪದವು, ಪ್ರಮುಖರಾದ ಜಗದೀಶ ಆಳ್ವ ಕುವೆತ್ತಬೈಲು, ಕೊಣಾಜೆ ಶಂಕರ ಭಟ್, ಎಡಂಬಳೆ ಸತ್ಯನಾರಾಯಣ ಭಟ್, ನಿತಿನ್ ಗಟ್ಟಿ, ರಾಮಚಂದ್ರ ಗಟ್ಟಿ, ಕೆ.ಐ.ಕೇಶವ ಭಟ್, ಹೇಮಚಂದ್ರ ಮತ್ತಿತರರ ಪ್ರಮುಖರು ಹಾಜರಿದ್ದರು.
ಅಮೃತಧಾರಾ ಗೋಶಾಲೆಯಿಂದ ಈ ತನಕ ಮೂರು ಬಾರಿ ದುಷ್ಕರ್ಮಿಗಳು ಆಗಮಿಸಿ ಬಕಾತ್ಕಾರವಾಗಿ ಮೂರು ದನಗಳನ್ನು ದರೋಡೆ ಮಾಡಿದ್ದರೂ ಈ ತನಕ ದುಷ್ಕರ್ಮಿಗಳ ಪತ್ತೆಯಾಗಿಲ್ಲ ಎನ್ನುವುದು ಗಮನಾರ್ಹ.


