UN NETWORKS
ಉಳ್ಳಾಲ: ವಾರದಲ್ಲಿ ಹಲವು ವಾಹನಗಳು ರಸ್ತೆಯಲ್ಲೇ ಬಾಕಿಯಾಗುತ್ತಿದೆ. ತಾಂತ್ರಿಕ ದೋಷವೆಂದು ಗ್ಯಾರೇಜಿಗೆ ಕೊಂಡೊಯ್ದಲ್ಲಿ ಅಲ್ಲಿ ವಾಹನ ಸವಾರರಿಗೆ ಬೆಚ್ಚಿ ಬೀಳಿಸುವ ಅಂಶ ಬೆಳಕಿಗೆ ಬಂದಿದೆ.
ಹೌದು ಜಿಲ್ಲೆಯಾದ್ಯಂತ ಕೆಲವು ಪೆಟ್ರೋಲ್ ಪಂಪ್ ಗಳಲ್ಲಿ ಹಾಕುವ ಪೆಟ್ರೋಲಿನಲ್ಲಿ ನೀರು ಮಿಶ್ರಣವಾಗುತ್ತಿದೆ. ಮಂಗಳೂರು, ಬಂಟ್ವಾಳ, ಉಳ್ಳಾಲ, ತೊಕ್ಕೊಟ್ಟು ವ್ಯಾಪ್ತಿಗಳಲ್ಲಿ ಹಲವು ವಾಹನಗಳು ನೀರು ಮಿಶ್ರಿತ ಪೆಟ್ರೋಲಿನಿಂದ ಅರ್ಧದಲ್ಲೇ ನಿಂತು ವಾಹನ ಸವಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಹಲವು ವರ್ಷಗಳಿಂದ ಸಮಸ್ಯೆಯಿದ್ದರೂ, ಇತ್ತೀಚೆಗೆ ಕೆಲ ದಿನಗಳಿಂದ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಟ್ಯಾಂಕ್ ಫುಲ್ ಮಾಡುವ ವಾಹನ ಸವಾರರಲ್ಲೇ ಇಂತಹ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಎರಡು ಲೀ ಬಾಟಲಿಯಲ್ಲಿ ಕಾಲು ಭಾಗದಲ್ಲಿ ಮಾತ್ರ ಪೆಟ್ರೋಲ್ ಇದ್ದು, ಮಿಕ್ಕ ಎಲ್ಲವೂ ನೀರು ಇರುತ್ತದೆ. ಇದು ವಾಹನವನ್ನು ಅರ್ಧದಲ್ಲೇ ನಿಲ್ಲಿಸುವುದು ಮಾತ್ರವಲ್ಲ, ಇಂಜಿನ್‍ಗಳ ಸಮಸ್ಯೆಗೂ ಕಾರಣವಾಗುತ್ತಿದೆ. ಹೊಸತಾಗಿ ಖರೀದಿಸಿದ ಬೈಕುಗಳಲ್ಲಿಯೂ ಇಂತಹ ಸಮಸ್ಯೆ ಹಲವು ಬಾರಿ ಕಂಡುಬಂದಿದೆ ಅನ್ನುತ್ತಾರೆ ಗ್ಯಾರೇಜ್ ಮಾಲೀಕರು.
ಬಾಟಲಿಯಲ್ಲಿ ಖರೀದಿಸಿದರೆ ಸಿಗುವುದಿಲ್ಲ : ಬಹುತೇಕ ಪೆಟ್ರೋಲ್ ಪಂಪುಗಳಲ್ಲಿ ಟ್ಯಾಂಕ್‍ಗಳು ನೀರಿನ ಒಸರು ಇರುವ ಜಾಗದಲ್ಲಿ ಇರುತ್ತದೆ, ಟ್ಯಾಂಕ್ ಗಳು ನಿಗದಿತ ಕಾಲಕ್ಕಿಂತಲೂ ಅಧಿಕ ಸಮಯ ಉಪಯೋಗಿಸುವುದರಿಂದ ತೂತಾಗಿ ನೀರು ಒಳನುಗ್ಗುತ್ತಿರುತ್ತದೆ. ಇದರಿಂದ ನೀರು ಮಿಶ್ರಿತ ಪೆಟ್ರೋಲ್ ಪಂಪ್ ಗಳಲ್ಲಿ ಬರುತ್ತಿವೆ. ಆದರೆ ಪಂಪಿನಲ್ಲಿರುವ ಕೆಲವು ಗನ್ ಗಳಲ್ಲಿ ಮಾತ್ರ ಇಂತಹ ಸಮಸ್ಯೆ ಇರುವುದರಿಂದ ಗ್ರಾಹಕರು ಬಾಟಲಿ ಹಿಡಿದುಕೊಂಡು ಬಂದಾಗ ನೀರು ಬಾರದ ಟ್ಯಾಂಕಿನಿಂದ ಪೆಟ್ರೋಲ್ ಹಾಕಲಾಗುತ್ತಿದೆ.
ನಿಗೂಢ ನೀರು : ಪೆಟ್ರೋಲ್ ಪಂಪಿನಲ್ಲಿ ಪೆಟ್ರೋಲ್ ಜತೆಗೆ ಮಿಶ್ರಣವಾಗುತ್ತಿರುವುದು ನೀರೋ ಅಥವಾ ಬೇರೆ ತೈಲವೋ ಅನ್ನುವುದು ಸ್ಪಷ್ಟವಾಗಿಲ್ಲ. ನೀರಿನಂತೆ ಕಂಡುಬಂದರೂ ಲಾಭಕ್ಕಾಗಿ ಬೇರೆ ತೈಲವನ್ನು ಉಪಯೋಗಿಸುತ್ತಿದ್ದಾರೋ ಅನ್ನುವ ಅನುಮಾನಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಸಮಸ್ಯೆ ಗಂಭೀರವಾಗುವ ಮುನ್ನ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ಇಂತಹ ಪೆಟ್ರೋಲ್ ಪಂಪಿನವರ ವಿರುದ್ಧ ಕ್ರಮಕೈಗೊಳ್ಳಬೇಕು ಅನ್ನುವ ಆಗ್ರಹ ನೊಂದ ವಾಹನ ಸವಾರರಿಂದ ವ್ಯಕ್ತವಾಗಿದೆ.


