UN NETWORKS
ಉಳ್ಳಾಲ: ಕೊಲೆ ಯತ್ನ ಮತ್ತು ಗಾಂಜಾ ಮಾರಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುಳ್ಳುಗುಡ್ಡೆ ಇಮ್ತಿಯಾಜ್ ಎಂಬಾತನನ್ನು ಕೊಟೆಕಾರು ಗ್ರಾಮದ ಅಜೀನಡ್ಕ ಎಂಬಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಾಮ ರಾವ್ ರವರ ನೇತೃತ್ವದ ರೌಡಿ ನಿಗ್ರಹ ದಳದ ಸಿಬ್ಬಂದಿಗಳು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ.
ಈತ ಹಿಂದೆ ಕೊಣಾಜೆ ಠಾಣಾ ವ್ಯಾಪ್ತಿಯ ಕೇರಳ ಗಡಿ ಪ್ರದೇಶವಾದ ನೆತ್ತಿಲಪದವು ಎಂಬಲ್ಲಿ ಸ್ಕೂಟರ್ ನಲ್ಲಿ ತಿರುಗಾಡುತ್ತಾ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಮಹಮ್ಮದ್ ಅಜೀಜ್ ಯಾನೆ ಅಬ್ದುಲ್ ಅಜೀಜ್ ಮತ್ತು ಇಮ್ತಿಯಾಜ್ ಇಬ್ಬರನ್ನು ರೌಡಿನಿಗ್ರಹದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ನೆತ್ತಿಲ ಪದವು ಕಲ್ಲರಕೋಡಿ ಎಂಬಲ್ಲಿ ಸುಮಾರು 10.250 ಕೆ.ಜಿ. ಗಾಂಜಾ ಮತ್ತು ಸ್ಕೂಟರನ್ನು ವಶಪಡಿಸಿಕೊಂಡಿದ್ದರು. ಸ್ಥಳದಲ್ಲಿ ಗಾಂಜಾ ಪೊಟ್ಟಣಗಳೊಂದಿಗೆ ಕಾಯುತ್ತಿದ್ದಾಗ ದಾಳಿ ಮಾಡಿದಾಗ ಇಮ್ತಿಯಾಝ್ ತಲೆಮರೆಸಿಕೊಂಡಿದ್ದ. ಇದರಲ್ಲಿ ಅಜೀಜ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಈಗಾಗಲೇ ಜೈಲಿನಲ್ಲಿದ್ದಾನೆ.
ಈತ ಈ ಹಿಂದೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಳ್ಳುಗುಡ್ಡೆ ಎಂಬಲ್ಲಿ ಪಚ್ಚಿಲ ಅಜೀಜ್ ಎಂಬಾತನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿ ತಲೆಮರೆಸಿಕೊಂಡಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನ ವಿರುದ್ದ ಈ ಹಿಂದೆ ಉಳ್ಳಾಲ ಠಾಣೆ, ಕೊಣಾಜೆ ಠಾಣೆ ಹಾಗೂ ಕಾವೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.ಬಂಧಿತನನ್ನು ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಮಂಗಳೂರು ದಕ್ಷಿಣ ಉಪ ವಿಭಾಗದ ಎ.ಸಿ.ಪಿ. ನೇತೃತ್ವದ ರೌಡಿ ನಿಗ್ರಹ ದಳದ ಸಿಬ್ಬಂದಿಗಳು ಮತ್ತು ಪಿ.ಎಸ್.ಐ ಅಪರಾಧ ಪತ್ತೆ ಕೊಣಾಜೆ ಠಾಣೆ ಯವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.


