UN NETWORKS
ಸೋಮೇಶ್ವರ: ಪ್ರಮುಖ ಇಲಾಖೆ ಅಧಿಕಾರಿಗಳ ಗೈರು, ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯಿತಿಗೆ ನೇಮಕವಾಗದ ಶಾಶ್ವತ ಪಿಡಿಓ, ಕಾರ್ಯದರ್ಶಿ. ಸ್ಪೋಟಗೊಂಡ ಗ್ರಾಮಸ್ಥರ ಆಕೋಶ. ಸತತ ಮೂರು ಗಂಟೆಗಳ ಪ್ರಯತ್ನವೂ ವಿಫಲವಾದ ಹಿನ್ನೆಲೆಯಲ್ಲಿ ಸೋಮೇಶ್ವರ ಗ್ರಾಮಸಭೆ ರದ್ದುಗೊಂಡಿತು!
2017-18ನೇ ಸಾಲಿನ 2ನೇ ಹಂತದ ಗ್ರಾಮಸಭೆ ಮಂಗಳವಾರ ಕೊಲ್ಯ ನಾರಾಯಣ ಗುರು ಸಭಾ ಭವನದಲ್ಲಿ ಆಯೋಜಿಸಲಾಗಿತ್ತು. ಸಭೆ 11 ಗಂಟೆಗೆ ಆರಂಭಗೊಂಡಾಗ ಹಾಜರಿದ್ದುರು ನಾಲ್ಕು ಇಲಾಖೆಯ ಅಧಿಕಾರಿಗಳು ಮಾತ್ರ. ಈ ಬಗ್ಗೆ ಗ್ರಾಮಸ್ಥ ಸಂಶುದ್ದೀನ್ ಉಚ್ಚಿಲ್ ಪ್ರಶ್ನಿಸಿದಾಗ ಗ್ರಾಮಸ್ಥರಾದ ಸೀತಾರಾಮ ಬಂಗೇರ, ರಮೇಶ್ ಕೊಲ್ಯ, ಉಮೇಶ್ ಉಚ್ಚಿಲ್, ದಾಮೋದರ್ ಉಚ್ಚಿಲ್, ಶಾಂತರಾಮ ಸಹಿತ ಹಲವು ಧ್ವನಿಗೂಡಿಸಿದರು. ಮೂಡಾಕ್ಕೆ ಗ್ರಾಮಸ್ಥರ ತೆರಿಗೆ ಕಟ್ಟುತ್ತಾರೆ. ಆದರೆ ಮೂಡಾದ ಅಧಿಕಾರಿಗಳಿಲ್ಲ. ಮೆಸ್ಕಾಂನಿಂದಲೂ ಬಂದಿಲ್ಲ.
ಇನ್ನೂ ಹಲವು ಇಲಾಖೆಯ ಅಧಿಕಾರಿಗಳು ಕಾಣಿಸುತ್ತಿಲ್ಲ. ಅವರಿಲ್ಲದ ಗ್ರಾಮಸಭೆ ಅಗತ್ಯವಿಲ್ಲ ಎಂದು ಎಂದಾಗ ಗ್ರಾಮಸ್ಥರಿಂದಲೂ ಬೆಂಬಲ ವ್ಯಕ್ತವಾಯಿತು. ಅಲ್ಲದೆ ರಾಜ್ಯದ ದೊಡ್ಡ ಗ್ರಾಮ ಸೋಮೇಶ್ವರ ಪಂಚಾಯಿತಿಗೆ ಕಾರ್ಯದರ್ಶಿ, ಪಿಡಿಓ ನೇಮಕವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮಸಭೆ ನಡೆಸುವುದು ನಿಷ್ಪ್ರಯೋಜಕ. ಇದಕ್ಕಿಂತ ಮೊದಲೂ ಇದೇ ರೀತಿಯ ಭರವಸೆಗಳನ್ನು ಮಾತ್ರವೇ ಕೇಳಿಕೊಂಡು ಸಭೆ ನಡೆಸಿದ ಕಾರಣ ಗ್ರಾಮಸ್ಥರ ಬೇಡಿಕೆಗೆ ಫಲ ಸಿಕ್ಕಿಲ್ಲ ಎಂದು ಗ್ರಾಮಸ್ಥರು ದೂರಿದ್ದಲ್ಲದೆ, ಗ್ರಾಮಸಭೆ ರದ್ದುಪಡಿಸುವಂತೆ ಪಟ್ಟು ಹಿಡಿದರು.
ಜಿ.ಪಂ. ಸದಸ್ಯೆಯೂ ಅಸಮಾಧಾನ
ವರ್ಷಕ್ಕೆ ಎರಡು ಬಾರಿ ಮಾತ್ರವೇ ನಡೆಯುವ ಗ್ರಾಮಸಭೆಗಳಲ್ಲಿ ಜನರು ಭಾಗವಹಿಸಿ ಸಮಸ್ಯೆಗಳನ್ನು ಹೇಳುತ್ತಾರೆ. ಇಂತಹ ಸಭೆಗಳಲ್ಲಿ ಗ್ರಾಮ ಮಟ್ಟದ ಅಧಿಕಾರಿಗಳು ಭಾಗವಹಿಸಬೇಕು ಎಂದು ಹಲವು ಬಾರಿ ಸಭೆಯಲ್ಲಿ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಇಲ್ಲ ಎಂದಾದರೆ ಗ್ರಾಮಸಭೆಗಳ ಅಗತ್ಯವೇ ಇಲ್ಲ. ಸೋಮೇಶ್ವರಕ್ಕೆ ಪಿಡಿಓ ಹಾಗೂ ಕಾರ್ಯದರ್ಶಿ ನೇಮಕಗೊಳಿಸುವಂತೆ ಜಿ.ಪಂ. ಸಿ.ಓ ಅವರಲ್ಲಿ ಮನವಿ ಮಾಡಲಾಗಿದ್ದರೂ ಪ್ರಯೋಜನ ಶೂನ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಸೋಮೇಶ್ವರ ನಿರ್ಲಕ್ಷ್ಯ ಏಕೆ?
ಇತರ ಸಣ್ಣ ಗ್ರಾಮ ಪಂಚಾಯಿತಿಗಳಲ್ಲೂ ಪಿಡಿಓ, ಕಾರ್ಯದರ್ಶಿಗಳಿದ್ದಾರೆ. ಆದರೆ ಸೋಮೇಶ್ವರಕ್ಕೆ ಪ್ರಭಾರಿ ಪಿಡಿಓ ಇದ್ದು ಮೂರು ದಿನ ಪಂಚಾಯಿತಿಗೆ ಬರುತ್ತಾರೆ. 91/11 ಸಮಸ್ಯೆ ಹೆಚ್ಚಾಗುತ್ತಿದೆ. ಪಂಚಾಯಿತಿಗೆ ಪ್ರತಿದಿನ 15ರಷ್ಟು 91/11 ಅರ್ಜಿಗಳು ಬರುತ್ತಿದ್ದು, ಆನ್‍ಲೈನ್‍ನನ್ನಲಿ ದಿನಕ್ಕೆ 15ರಿಂದ 20 91/11 ಅರ್ಜಿ ಸ್ವೀಕರಿಸಲು ಸಾಧ್ಯ. ಇದರಿಂದ ವಾರಕ್ಕೆ 60ರಷ್ಟು ಅರ್ಜಿ ಬಾಕಿಯಾಗುತ್ತಿದೆ. ಆದರೂ ಶಾಶ್ವತ ನೆಲೆಯಲ್ಲಿ ಪಿಡಿಓ ನೇಮಕ ಮಾಡದೆ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಆರೋಪಿಸಿದರು.
ಜಾಹೀರಾತು
ಮೂರು ಗಂಟೆಗಳ ಪ್ರಯತ್ನ ವಿಫಲ!
ಸಭೆ ರದ್ದುಪಡಿಸುವಂತೆ ಒಂದೆಡೆ ಒತ್ತಾಯ ಕೇಳಿ ಬಂದರೂ ಬಂದರೂ ಮತ್ತೊಂದೆಡೆ ಒಂದಿಬ್ಬರು ಸಮಸ್ಯೆಗಳನ್ನು ಹೇಳಿಕೊಂಡರು. ಈ ಹಿನ್ನೆಲೆಯಲ್ಲಿ ಗ್ರಾಮಸಭೆ ಮುಂದುವರಿಸಿ ಬಂದ ಬೇಡಿಕೆಗಳ ಬಗ್ಗೆ ನಿರ್ಣಯ ಕೈಗೊಂಡು ಅಧಿಕಾರಿಗಳಿಗೆ ನೀಡಲು ಮುಂದಾದ ನೋಡೆಲ್ ಅಧಿಕಾರಿ ಶ್ಯಾಮಲಾ, ರಾಜೇಶ್ ಉಚ್ಚಿಲ್, ಧನಲಕ್ಷ್ಮೀ ಗಟ್ಟಿ ಅವರು ಹಲವು ರೀತಿಯ ಪ್ರಯತ್ನ ನಡೆಸಿದರು. ಈ ನಡುವೆ ಇನ್ನಿಬ್ಬರು ಅಧಿಕಾರಿಗಳು ಸಭೆಗೆ ಆಗಮಿಸಿದರು. ಆದರೆ ಗ್ರಾಮಸ್ಥರು ಪಟ್ಟು ಸಡಿಲಿಸದ ಕಾರಣ ಮಧ್ಯಾಹ್ನ ಎರಡು ಗಂಟೆಗೆ ಗ್ರಾಮಸಭೆ ರದ್ದುಗೊಳಿಸಿದ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ ಸ್ವಾಗತಿಸಿದರು. ಸಿಬ್ಬಂದಿ ರೂಪಾ ಹಿಂದಿನ ಸಭೆಯ ನಡಾವಳಿ ವಾಚಿಸಿದರು.





