UN NETWORKS
ಉಳ್ಳಾಲ: ನಕಲಿ ಅಂಕ ಪಟ್ಟಿ ಜಾಲ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಈತನಿಗೆ ಸಹಕರಿಸಿದ್ದ ಸಹೋದರನನ್ನು ಕೂಡಾ ಬಂಧಿಸಲಾಗಿದೆ. ಪ್ರಕರಣದಲ್ಲಿ ಈವರೆಗೆ ಒಟ್ಟು ಮೂವರನ್ನು ಸಿಸಿಬಿ ತಂಡ ಬಂಧಿಸಿದೆ.
ಚೆಂಬುಗುಡ್ಡೆ ನಿವಾಸಿ ಗಳಾದ ಅಸ್ಖಾನ್ ಶೇಖ್ (25) ಮತ್ತು ಅಸ್ರಾರುದ್ದೀನ್ (26) ಬಂಧಿತರು. ತೊಕ್ಕೊಟ್ಟು ಟಿ.ಸಿ ರೋಡಿನಲ್ಲಿ Mangalore institute of management engineering ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಆರೋಪಿ ಅಸ್ಖಾನ್ ಶೇಖ್ ಪ್ರಕರಣದ ಪ್ರಮುಖ ಅರೋಪಿಯಾಗಿದ್ದಾನೆ. ಎರಡು ದಿನಗಳ ಹಿಂದೆ ಅಂಕಪಟ್ಟಿ ತಯಾರಿಸುತ್ತಿದ್ದ ಪ್ರಿಂಟರ್ ಸೊತ್ತುಗಳ ಸಹಿತ ಸಂಸ್ಥೆ ಸಿಬ್ಬಂದಿ ಗಾಡ್ವಿನ್ ಡಿಸೋಜ ಎಂಬಾತ ನನ್ನು ಬಂಧಿಸಲಾಗಿತ್ತು.
ಆರೋಪಿಗಳು ಪಿಯುಸಿ, ಡಿಪ್ಲೊಮಾ, ಪದವಿ ಸರ್ಟಿಫಿಕೇಟನ್ನು ನಕಲಿ ತಯಾರಿಸಿ ರೂ.10,000 , ರೂ.45,000 ಕ್ಕೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡ ದಾಳಿ ನಡೆಸಿ ಬಂಧಿಸಿತ್ತು.
ರೂ.16,000 ಕ್ಕೆ ಡಿಸ್ಟಿಂಕ್ಷನ್ ಮಾರ್ಕು ಕೊಟ್ಟಿದ್ದ !
8 ನೇ ತರಗತಿ ಕಲಿತ ವ್ಯಕ್ತಿಯೋರ್ವರು ಪಾಸ್ ಪೋರ್ಟ್ ಗಾಗಿ ಎಸ್ಎಸ್ಎಲ್ಸಿ ನಕಲಿ ಸರ್ಟಿಫಿಕೇಟ್ ಮಾಡಲು ಮುಂದಾಗಿದ್ದರು. ಅದರಂತೆ ಅಸ್ಖಾನ್ ಶೇಖ್ ಪರಿಚಯವಾಗಿ ಅಂಕ ಪಟ್ಟಿ ತಯಾರಿಸಲು ಆತನ ಮೊರೆ ಹೋಗಿದ್ದರು. ರೂ.16,000 ನೀಡಿದಲ್ಲಿ ಒರಿಜಿನಲ್ ಹೋಲುವ ಎಸ್ ಎಸ್ ಎಲ್ ಸಿ ಮಾಕ್ 9 ಕಾರ್ಡನ್ನು ನೀಡುವ ಭರವಸೆಯಿಟ್ಟಿದ್ದ.
ಜಾಹೀರಾತು
ಹಣವನ್ನು ನೀಡಿದ ವ್ಯಕ್ತಿಗೆ ಒಂದೇ ವಾರದಲ್ಲಿ ನಕಲಿ ಸರ್ಟಿಫಿಕೇಟು ಕೈಗೆ ಸಿಕ್ಕಿತ್ತು. ಆದರೆ ಅಸಾಮಿ ವ್ಯಕ್ತಿಯ ಸರ್ಟಿಫಿಕೇಟಿನಲ್ಲಿ ವಿಜ್ಞಾನ , ಗಣಿತ ಸೇರಿದಂತೆ ಎಲ್ಲದರಲ್ಲೂ ಶೇ.80 ಕ್ಕಿಂತ ಜಾಸ್ತಿಯೇ ಮಾರ್ಕುಗಳನ್ನು ನೀಡಿ ಡಿಸ್ಟಿಂಕ್ಷನ್ನಿನಲ್ಲೇ ಪಾಸ್ ಮಾಡಿಸಿದ್ದ. ಆದರೆ ಸರಿಯಾಗಿ ಗಣಿತ, ವಿಜ್ಞಾನ ಬಾರದಿದ್ದರೂ ಇಷ್ಟೊಂದು ಅಂಕದ ಮಾರ್ಕ್ ಕಾರ್ಡನ್ನು ಪಾಸ್ ಪೋರ್ಟ್ ಕಚೇರಿಗೆ ನೀಡುವ ವೇಳೆ ಸಿಬ್ಬಂದಿಯೂ ಒಮ್ಮೆ ಮುಖವನ್ನು ನೋಡಿದಾಗ ಮುಜುಗರ ಉಂಟಾಗಿತ್ತು ಅನ್ನುತ್ತಾರೆ ವ್ಯಕ್ತಿ. ಆದರೆ ಪುಣ್ಯಕ್ಕೆ ಪಾಸ್ ಪೋರ್ಟ್ ಕೈ ಸೇರಿದ್ದರೂ ವಿದೇಶಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹೋದರೂ ಎಲ್ಲಿ ಮಾರ್ಕ್ ನೋಡಿ ಮುಖ ನೋಡಿ ಹಿಡಿಯುವರೋ ಅನ್ನುವ ಭಯ ಕೂಡ ಹಿಂದಿತ್ತು ಎಂಬ ಆತಂಕವೂ ಅವರದ್ದಾಗಿತ್ತು.



