UN NETWORKS
ಪಾವೂರು: ಹಲವು ವರ್ಷಗಳಿಂದ ಸಮರ್ಪಕ ರಸ್ತೆ ಇಲ್ಲದೆ, ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ರಾಜಕೀಯ ಅಮಿಷಗಳಿಗೆ ಬಲಿಬೀಳದೆ ತಾಳ್ಮೆಯಿಂದ ಒಗ್ಗಟ್ಟು ಕಾಪಾಡಿದ ಸ್ಥಳೀಯ ಸರ್ವ ಧರ್ಮೀಯರೂ ಅಭಿನಂದನೆಗೆ ಅರ್ಹರು ಎಂದು ತಾಲೂಕು ಪಂಚಾಯತಿ ಸದಸ್ಯ ಮಹಮ್ಮದ್ ಮೋನು ಮಲಾರ್ ಹೇಳಿದರು.
ಪಾವೂರು ಗ್ರಾಮದ ಒಂದನೇ ವಾರ್ಡ್ ಪೋಡಾರ್ ಸೈಟ್ ರಸ್ತೆಗೆ ಕಾಂಕ್ರೀಟ್, ಕುಡಿಯುವ ನೀರಿನ ತೆರೆದ ಬಾವಿ ಹಾಗೂ ಪೈಪ್‍ಲೈನ್ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ಸಮಾರಂಭದಲ್ಲಿ ಮಾತನಾಡಿದರು.
ಸ್ಥಳೀಯ ರಸ್ತೆ ದುವರಸ್ತೆ ಬಗ್ಗೆ ಅರಿತು ಸಚಿವ ಯು.ಟಿ.ಖಾದರ್ ಅವರು ಪರಿಶೀಲನೆ ನಡೆಸಿ 25 ಲಕ್ಷ ಅನುದಾನ ನೀಡಿದ್ದಾರೆ. ಇದರಲ್ಲಿ 9 ಲಕ್ಷ ರೂಪಾಯಿ ನೀರಿನ ವ್ಯವಸ್ಥೆಗೆ ಬಳಕೆಯಾಗಲಿದ್ದು, ಅಗತ್ಯವಿದ್ದರೆ ಹೆಚ್ಚಿನ ಅನುದಾನ ದೊರಕಿಸಲು ಪ್ರಯತ್ನಿಸಲಾಗುವುದು, ಗ್ರಾಮದ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಮನೆಯಿಲ್ಲದವರಿಗೆ ಜಮೀನು ಗುರುತಿಸಲಾಗುವುದು ಎಂದರು.
ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಫಿರೋಜ್ ಮಲಾರ್ ಮಾತನಾಡಿ, ಹಲವು ವರ್ಷಗಳ ಬೇಡಿಕೆಯಾಗಿದ್ದ ರಸ್ತೆ, ನೀರಿನ ಸಮಸ್ಯೆ ಪರಿಹಾರಕ್ಕೆ ಸಚಿವರು ಅನುದಾನ ನೀಡಿದ್ದಾರೆ. ಸ್ಥಳೀಯರು ಗ್ರಾಮಸಭೆಗಳಲ್ಲೂ ಯಾವುದೇ ಗದ್ದಲ ನಿರ್ಮಿಸದೆ ಬೇಡಿಕೆ ಈಡೇರಿಕೆಗೆ ಮನವಿ ಮಾಡುತ್ತಾ ತಾಳ್ಮೆ ಕಾಪಾಡಿದ್ದರ ಫಲ ಸಿಕ್ಕಿದಂತಾಗಿದೆ ಎಂದರು.ಸ್ಥಳೀಯ ಹಿರಿಯರಾದ ಮಂಜಯ್ಯ ಭಂಡಾರಿ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸಗೈದರು.
ಈ ಸಂದರ್ಭ ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜ, ಉಪಾಧ್ಯಕ್ಷ ಮಹಾಬಲ ಹೆಗ್ಡೆ, ಸದಸ್ಯ ಎಂ.ಪಿ.ಮಜೀದ್ ಆಲಡ್ಕ, ಪಾವೂರು ಗ್ರಾಮ ಪಂಚಾಯಿತಿ ಸದಸ್ಯರಾದ ಮಜೀದ್ ಸಾತ್ಕೋ, ವಾಮನ್‍ರಾಜ್, ವಿವೇಕ್ ರೈ, ಎಂ.ಪಿ.ಹಸನ್, ಸ್ಥಳೀಯರಾದ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.
`ಪೋಡಾರ್ ಸೈಟ್ ತೀರಾ ಹಿಂದುಳಿದ ಪ್ರದೇಶವಾಗಿದ್ದು, ಕಳೆದ 12 ವರ್ಷಗಳಿಂದ ರಸ್ತೆ ಅಭಿವೃದ್ಧಿ, ನೀರಿನ ವ್ಯವಸ್ಥೆಗೆ ಬೇಡಿಕೆ ಇಡಲಾಗುತ್ತಾ ಬರಲಾಗಿದೆ. ಇದೀಗ ಸ್ಥಳೀಯತರ ಬೇಡಿಕೆ ಈಡೇರುವ ಹಂತ ತಲುಪಿದ್ದು, ಇದಕ್ಕಾಗಿ ಸಹಕರಿಸಿದವರಿಗೆ ಅಭಿನಂದನೆಗಳು’
ವಾಮನ್‍ರಾಜ್ ಪಾವೂರು, ಗ್ರಾ.ಪಂ. ಸದಸ್ಯ


