UN NETWORKS
ತಲಪಾಡಿ: ತಲಪಾಡಿ ಗ್ರಾಮದ ಒಂದನೇ ವಾರ್ಡ್‍ನಲ್ಲಿ 55 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೊಮರಂಗಳ-ಕೆ.ಸಿ.ನಗರ-ಅಜ್ಜಿನಡ್ಕ ಸಂಪರ್ಕ ರಸ್ತೆಗೆ ಮಂಗಳವಾರ ಆಹಾರ ಸಚಿವ ಯು.ಟಿ.ಖಾದರ್ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕೆ.ಸಿ.ನಗರದಿಂದ ಕೊಮರಂಗಳಕ್ಕೆ 20 ಲಕ್ಷ ಹಾಗೂ ಅಜ್ಜಿನಡ್ಕಕ್ಕೆ ನೇರ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಹಾಗೂ ಸೇತುವೆ 35 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಲಿದೆ. ಇದು ಅಜ್ಜಿನಡ್ಕಕ್ಕೆ ಹತ್ತಿರ ರಸ್ತೆಯಾಗಲಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ ಮಾತನಾಡಿ, ಸ್ಥಳೀಯರ ಬೇಡಿಕೆ ಮೇರೆಗೆ ಸಚಿವರು ಅನುದಾನ ಬಿಡುಗಡೆಗೊಳಿಸಿರುವುದು ಈ ಭಾಗದ ಜನರ ಮೇಲೆ ಅವರಿಗಿರುವ ಕಾಳಜಿ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಇಬ್ರಾಹಿಂ ಮಾತನಾಡಿ, ಸ್ಥಳೀಯ ರಸ್ತೆ ಕೆಲವು ಸಮಯಗಳಿಂದ ನಾದುರಸ್ತಿಯಲ್ಲಿತ್ತು. ಕಾಂಕ್ರೀಟ್ ಮೂಲಕ ಶಾಶ್ವತ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಲಾಗಿತ್ತಾದರೂ ಅಜ್ಜಿನಡ್ಕಕ್ಕೆ ನೇರ ಸಂಪರ್ಕಿಸಲೂ ಸಚಿವರು ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಶ್ರಫ್, ಜೈಬುನ್ನಿಸಾ, ಜಯಂತಿ ಪಕ್ಕಳ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಸಂಘಟನಾ ಕಾರ್ಯದರ್ಶಿ ಸಲೀಂ ಮೇಘಾ ಅಸೈಗೋಳಿ, ವಲಯ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೆಟ್ಟಿ, ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಮೊಯ್ದೀನ್ ಬಾವ, ಸ್ಥಳೀಯ ಮುಖಂಡರಾದ ಇಬ್ರಾಹಿಂ, ಸಲಾಂ, ಯಾಕೂಬ್ ಇನ್ನಿತರರು ಉಪಸ್ಥಿತರಿದ್ದರು.


