UN NETWORKS
ಉಳ್ಳಾಲ: ಸಾಮಾಜಿಕ ಚಟುವಟಿಕೆ ಸಾಂಘಿಕವಾಗಿ ನಡೆಸಿದಾಗ ಯಶಸ್ವಿಯಾಗಲು ಸಾಧ್ಯ. ಇಂತಹ ಕಾರ್ಯದಲ್ಲಿ ಎಲ್ಲರ ಸಲಹೆ ಸಹಕಾರವಿದ್ದರೆ ಸಾಮಾಜಿಕ ಚಟುವಟಿಕೆಗಳಿಗೆ ಇನ್ನಷ್ಟು ಬಲ ಬರುತ್ತದೆ ಎಂದು ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ ಉಚ್ಚಿಲ್ ಅಭಿಪ್ರಾಯಪಟ್ಟರು.
ಸೋಮೇಶ್ವರ ಪಶ್ಚಿಮ್ ರಿಹಾಬ್‍ನಲ್ಲಿ ಹೊಂಬೆಳಕು ಕೈ ಪಿಡಿ ಬಿಡುಗಡೆ ಹಾಗೂ ಗೌರವ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಗನ್ನಾಥ್, ನಿವೃತ್ತ ಮುಖ್ಯೋಪಾಧ್ಯಾಯರು, ಶಿಕ್ಷಕ ವೃತ್ತಿಯೆಂಬುದು ಬಹಳ ಅತ್ಯನ್ನುತ ಸ್ಥಾನ ಎಂದೇ ನನ್ನ ಭಾವನೆ. ನನ್ನ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ಹುದ್ದೆಗಳಲ್ಲಿದ್ದಾರೆ. ಆದರೆ ಈ ರೀತಿಯ ಸಮಾಜಕ್ಕೆ ಉತ್ತಮ ಕೊಡುಗೆ ಸಲ್ಲಿಸುತ್ತಿರುವವರನ್ನು ಕಂಡಾಗ ಬಹಳ ಸಂತೋಷವಾಗುತ್ತದೆ. ಈ ಸಂಸ್ಥೆಯ ನಿರ್ದೇಶಕ ರೋಹಿತ್ ನನ್ನ ವಿದ್ಯಾರ್ಥಿ, ಅವರನ್ನು ಈ ಸ್ಥಾನದಲ್ಲಿ ನೋಡಲು ನನಗೆ ಹೆಮ್ಮೆಯೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷರು, ಸಂಸ್ಥೆಯ ನಿರ್ದೇಶಕ ರೋಹಿತ್ ಸ್ಯಾಂಕ್ಟಸ್ ಮಾತನಾಡಿ, ಸಂಸ್ಥೆಯ ಕಾರ್ಯಚಟುವಟಿಕೆಗಳು ಹಾಗೂ ವಿಸ್ತಾರದ ಕುರಿತು ತಿಳಿಸಿದರು. ಸೇವೆ ಮಾಡುವವರು ಪ್ರಚಾರ ಬಯಸಬಾರದು, ಆದರೆ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಸಮಾಜಕ್ಕೆ ಅರಿವಿರುವುದು ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಶನಿ ನಿಲಯದ ಸಮಾಜಕಾರ್ಯ ವಿಭಾಗ ಮುಖ್ಯಸ್ಥೆ ಮೀನಾ ಮಾಂತೆರೋ ಪಶ್ಚಿಮ ಸಂಸ್ಥೆಯ ಕೈಪಿಡಿ ಬಿಡುಗಡೆಗೊಳಿಸಿದರು. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಬಿ.ಎಸ್.ಡಬ್ಲೂ ಪದವಿಯಲ್ಲಿ ಪ್ರಥಮ ರ್ಯಾಂಕ್‍ಗಳಿಸಿದ ಕೃಪಾ ಕೈಲಾರ್‍ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಪ್ಪಿನಂಗಡಿ ವಲಯ ಅಧ್ಯಕ್ಷ ಕೈಲಾರ್ ರಾಜಗೋಪಾಲ ಭಟ್, ಪಶ್ಚಿಮ ಸಿಬ್ಬಂದಿ ವರ್ಗ ಹಾಗೂ ನಿವಾಸಿಗಳು ರೋಶನಿ ನಿಲಯ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಬಿಬಿನಾ ಸ್ವಾಗತಿಸಿ, ಹರ್ಷಿತ್ ವಂದಿಸಿದರು. ಸುವರ್ಚಲಾ ಕಾರ್ಯಕ್ರಮ ನಿರೂಪಿಸಿದರು.


