UN NETWORKS
ಉಳ್ಳಾಲ: ಬೆಳ್ಮ ಗ್ರಾಮ ಎಲ್ಲ ಬಗೆಯಲ್ಲೂ ಏಕತೆಯಲ್ಲಿ ಮುನ್ನಡೆದುಕೊಂಡು ಹೋಗುತ್ತಿರುವ ಗ್ರಾಮವಾಗಿದ್ದು ಗಾಂಧೀಜಿ ಕಂಡ ಗ್ರಾಮದ ಅಭಿವೃದ್ಧಿ ನಿವಾದ ರಾಮರಾಜ್ಯ ಎಂಬ ಮಾತು ಇಲ್ಲಿ ನಿಜವಾಗುತ್ತಿದೆ ಎಂದು ಆಹಾರ ಹಾಗೂ ನಾಗರೀಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಶುಕ್ರವಾರ ದೇರಳಕಟ್ಟೆಯಲ್ಲಿ ಬೆಳ್ಮ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡ, ಗ್ರೀನ್ ಗ್ರೌಂಡ್ ರಸ್ತೆ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಕಾರ್ಯಕ್ರಮ ಯೋಜನೆ ಅದರಲ್ಲಿ ದೂರದೃಷ್ಟಿ ಇರಲೇಬೇಕು. ತಂದೆ ದಿವಂಗತ ಯು.ಟ. ಫರೀದ್ ಅವರು ಶಾಸಕರಾಗಿದ್ದ ಅವಧಿಯಲ್ಲೂ ಗುಡ್ಡ ಪ್ರದೇಶವಾಗಿದ್ದ ಪಾವೂರಿನಲ್ಲಿ ಪ್ರೌಢಶಾಲೆ, ಕೊಣಾಜೆಯಲ್ಲಿ ಮಂಗಳೂರು ವಿವಿ ನಿರ್ಮಿಸುವಾಗಲೂ ವಿರೋಧ ಇತ್ತು. ಆದರೆ ಈಗ ಅದರ ಅಗತ್ಯತೆ, ಈ ಭಾಗ ಅಭೂತಪೂರ್ವ ಕಂಡಾಗ ಯಾವುದೇ ಯೋಜನೆಯ ಹಿಂದೆ ದೂರದೃಷ್ಟಿ ಇರಬೇಕು ಎಂಬುದಕ್ಕೆ ಸಾಕ್ಷಿಯಾಗಿದ್ದು ಮುಂದಿನ ದಿನಗಳಲ್ಲಿ ಪಂಚಾಯಿತಿ ನೂತನ ಕಟ್ಟಡ ಬೆಳ್ಮ ಗ್ರಾಮದ ಮುಕುಟಕ್ಕೆ ಕಿರೀಟದಂತೆ ಶೋಭಿಸಲಿದೆ . ರಾಜ್ಯ ಸರಕಾರ ಉತ್ತಮ ಆಡಳಿತ ಕೊಡುತ್ತಾ ರಾಜ್ಯದ ಸಂಪತ್ತು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಹಾಗೆಯೇ ಗಳಿಸಿದ ಸಂಪತ್ತನ್ನು ಸಮಾಜದ ಎಲ್ಲರಿಗೂ ಹಂಚುವ ಕೆಲಸ ಮಾಡುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತರು, ರೈತರು ಸೇರಿದಂತೆ ಎಲ್ಲರಿಗೂ ಉತ್ತಮ ಯೋಜನೆ ವೇತನ ಪಡೆಯುವ ಅವಕಾಶ ಕೊಡಲಾಗಿದೆ. ಕಳೆದ ಐದು ವರ್ಷದಲ್ಲಿ ಬಿತ್ತನೆ ಬೀಜ ಸಿಕ್ಕಿಲ್ಲ ಎಂದು ರೈತರು ಪ್ರತಿಭಟಿಸಿಲ್ಲ ಎಂದರು.
ಸರಕಾರ ರಾಜ್ಯದ ಉದ್ದಗಲಕ್ಕೂ ಹರಡಿದ ಧರ್ಮದ ಸಮಾಜದ ವಿವಿಧ ಧರ್ಮದ ಸಮುದಾಯ ಪಂಗಡ ಜಾತಿಯ ಭವನಗಳಿಗೆ ಅನುದಾನ ಮಂಜೂರು ಮಾಡಲಾಗಿದೆ. ಯಾಕೆಂದರೆ ಈ ರಾಜ್ಯದ ಸಂಪತ್ತನ್ನು ಎಲ್ಲರೂ ಅನುಭವಿಸಲಿ ಎಂಬುದೇ ರಾಜ್ಯ ಸರಕಾರದ ಗುರಿ ಆಗಿದೆ ಎಂದು ನುಡಿದರು.
ಪ್ರತಿಪಕ್ಷ ಕಾಂಗ್ರೆಸ್ ಮುಕ್ತ ಕರ್ನಾಟಕ ಎಂದು ಜಪಿಸುತ್ತಿದ್ದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಸಿವು ಮುಕ್ತ ಕರ್ನಾಟಕ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಅದಕ್ಕಾಗಿ ಮಂತ್ರಿಗಳ ಮಕ್ಕಳು ಪಡೆಯುವ ಸೌಲಭ್ಯ ಜನಸಾಮಾನ್ಯರಿಗೂ ಲಭಿಸಬೇಕು ಎಂದು ಸರಕಾರ ಬೇಕಾದಷ್ಟು ದುಡ್ಡು ಖರ್ಚು ಮಾಡುತ್ತಿದೆ. ರಾಜ್ಯದ 1.7ಕೋಟಿ ಮಕ್ಕಳಿಗೆ ಹಾಲು, ಮೊಟ್ಟೆ ಕೊಡುವ ಯೋಜನೆ ಬಳಿಕ ಶೂ ಹಾಗೂ ಸಾಕ್ಸ್ ಕೊಟ್ಟಿದೆ. ಪದವಿಗೆ ಹೋಗುವ ಎಲ್ಲ ವಿದ್ಯಾರ್ಥಿ ಗಳಿಗೆ ಲ್ಯಾಪ್ ಟ್ಯಾಪ್ ವಿತರಿಸುವ ಬಹು ದೊಡ್ಡ ಯೋಜನೆ ಕಳೆದ ತಿಂಗಳಿನಿಂದ ಜಾರಿಗೆ ಬಂದಿದೆ ಎಂದರು.
ಬೈಕ್ ಆಂಬುಲೆನ್ಸ್ , ಇಂದಿರಾ ಕ್ಯಾಂಟಿನ್ ಯೋಜನೆಯ ಹಿಂದೆ ನನ್ನ ಶ್ರಮ ಬಹಳಷ್ಟಿದೆ. ಹಸಿದ ಹೊಟ್ಟೆಯಲ್ಲಿ ದುಡಿಯುವುದು ಬೇಡ ಎಂದು ಕೇವಲ 5 ರೂ. ಗೆ ಉಪಾಹಾರ 10ರೂ. ಗೆ ಊಟ ಮಾಡಲಿ ಎಂದು ಇಂದಿರಾ ಕ್ಯಾಂಟಿನ್ ಅನುಷ್ಠಾನಕ್ಕೆ ತರಲಾಗಿದೆ. ಉಳ್ಳಾಲದಂತಹ ಹೋಬಳಿಯಲ್ಲೂ ಅತ್ಯುತ್ತಮ ಸುಸಜ್ಜಿತ ಆಸ್ಪತ್ರೆ, ಪುರಭವನದಂತೆ ಎಂಟು ಕೋಟಿ ರೂ. ವೆಚ್ಚದ ಅಬ್ಬಕ್ಕ ಭವನ, ಇದೀಗ ಇಂದಿರಾ ಕ್ಯಾಂಟಿನ್ ಮೂಲಕ ಜಿಲ್ಲಾ ಕೇಂದ್ರಕ್ಕೆ ಸಮನಾಗಿ ಉಳ್ಲಾಲ ಅಭಿವೃದ್ಧಿ ಕಂಡಿದೆ ಎಂದರು.
ನಾನು ಯಾವ ನಾಯಕನೂ ಅಲ್ಲ, ನಾನು ಏನಿದ್ದರೂ ನಿಮ್ಮ ಸೇವಕ. ಗ್ರಾಮಸ್ಥರಿಂದ ನೂತನ ಪೊಲೀಸ್ ಠಾಣೆ ನಿರ್ಮಿಸಬೇಕು ಎಂಬ ಬೇಡಿಕೆ ಬಂದಿದ್ದು ಈಗಾಗಲೇ ಎಲ್ಲಿ ಪೊಲೀಸ್ ಠಾಣೆ ಇದೆಯೋ ಅದರ ಒಂದು ಕಿ. ಮೀ. ಸಮೀಪವೇ ಗಲಾಟೆಗಳಾಗುತ್ತಿದ್ದು ದೂರದಲ್ಲಿ ಇರುಔರು ನೆಮ್ಮದಿಯಿಂದ ಇದ್ದಾರೆ. ಹಾಗಾಗಿ ನೂತನ ಠಾಣೆ ನಿರ್ಮಾಣ ಯೋಚನೆ ಸದ್ಯಕ್ಕಿಲ್ಲ ಎಂದರು.
ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, ದೇರಳಕಟ್ಟೆ ಅಭಿವೃದ್ದಿ ಹೊಂದುತ್ತಿರುವ ಪ್ರದೇಶವಾಗಿದೆ, ಇಲ್ಲಿಯ ಗ್ರಾಮಕ್ಕೆ ಸುಂದರ ಕಟ್ಟಡ ಬೇಕೆನ್ನುವ ಕನಸು ಈಡೇರಿದೆ. ಹೊಸ ಕಟ್ಟಟ ಉದ್ಘಾಟನೆಗೊಂಡ ದಿನ ಎಂದಿಗೂ ಮರೆಯಲಾಗದ್ದು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಪಂಚಾಯಿತಿ ಕಟ್ಟಡ ಇರುವುದು ಮೌಲ್ಯ ಹೆಚ್ಚಿಸಿದೆ ಎಂದು ನುಡಿದರು.
ವಕ್ಪ್ ಜಿಲ್ಲಾಧ್ಯಕ್ಷ ಯು. ಕೆ. ಮೋನು , ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಎನ್. ಎಸ್. ಕರೀಂ, ಜಿಲ್ಲಾ ಪಂಚಾಯಿತಿ ಸದಸ್ಯೆ ನೂರ್ ಜಹಾನ್, ಆಹಾರ ಕಾವಲು ಸಮಿತಿ ಸದಸ್ಯ ಟಿ.ಎಸ್. ಅಬ್ದುಲ್ಲ, ತಾಲೂಕು ಪಂಚಾಯಿತಿ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್, ಪಂಚಾಯಿತಿ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಯೂಸುಫ್ ಬಾವ, ಮಾಜಿ ಉಪಾಧ್ಯಕ್ಷ ಹಸನಬ್ಬ, ಪಿಡಿಓ ನವೀನ್ ಹೆಗ್ಡೆ, ಸದಸ್ಯರಾದ ರಝಿಯಾ, ನಝಿಮಾ, ಕೆ.ಎಚ್.ಹಸೈನಾರ್, ಅಬ್ದುಲ್ಲಾ ಎಂ.ಎ, ವಿನೋದ ಶ್ಯಾಂ ಸುಂದರ್, ಸುಂದರಿ, ಮರಿಯಮ್ಮ, ಶರ್ಮಿಳಾ ಜಿ.ಕೆ, ಮಹಮ್ಮದ್ ಕಬೀರ್ ಡಿ, ಸುಹೈಲಾ ಉಸ್ಮಾನ್, ಅಬ್ದುಲ್ ರಝಾಕ್ ಡಿ, ಭವಾನಿ, ಸತೀಶ್ ಕುಮಾರ್, ಕಾರ್ಯದರ್ಶಿ ಬಾಲಕೃಷ್ಣ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸದಾನಂದ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಮಹಮ್ಮದ್ ಅಡ್ಕರೆ, ನಾಗಪ್ಪ ಬರಿಕೆ, ಕೆಡಿಪಿ ಸದಸ್ಯ ಪದ್ಮನಾಭ ನರಿಂಗಾನ, ರವಿರಾಜ್ ಶೆಟ್ಟಿ, ನಿವೃತ್ತ ಸರ್ಕಾರಿ ಅಧಿಕಾರಿ ನಾರಾಯಣ ಶೆಟ್ಟಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಿಡಿಒ , ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳು ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಗುತ್ತಿಗೆದಾರರು ಹಾಗೂ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ಅಬ್ದುಲ್ ಸತ್ತಾರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಯೂಸುಫ್ ಬಾವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಂಚಾಯಿತಿ ಸದಸ್ಯ ಉಸ್ಮಾನ್ ಅಕ್ಸಾ ಕಾರ್ಯಕ್ರಮ ನಿರೂಪಿಸಿದರು.


































