UN NETWORKS
ಉಳ್ಳಾಲ: ಮಾ. 3ರಿಂದ 6ರ ತನಕ ನಡೆಯಲಿರುವ ಮಂಗಳೂರು ಚಲೋ ನಾಡಜನರ ರಕ್ಷಣೆಗಾಗಿ ಜನಸುರಕ್ಷಾ ಯಾತ್ರೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸುಮಾರು 10,000 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಹೇಳಿದರು.
ತೊಕ್ಕೊಟ್ಟಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಒಂದು ಕಡೆಯಿಂದ ಅಭಿವೃದ್ಧಿ ಮಂತ್ರ ಪಠಿಸುತ್ತಿದ್ದುಇನ್ನೊಂದೆಡೆ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ನಿರಂತರ ನಡೆಯುತ್ತಿದ್ದರೂ ಕೈಕಟ್ಟಿ ಕುಳಿತಿದೆ. ಕೇವಲ ಮಂಗಳೂರು ಕ್ಷೇತ್ರದಲ್ಲಿಈಗಾಗಲೇ ರಾಜೀವ ಕೋಟ್ಯಾನ್, ಝುಬೈರ್ ಅವರಂತಹ ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆದಿದೆ. ಕಾಂಗ್ರೆಸ್ ಸರಕಾರ ಆಡಳಿತ ಎಲ್ಲ ವಿಧದಲ್ಲಿ ವೈಫಲ್ಯ ಕಂಡಿದ್ದು ಆಡಳಿತವನ್ನು ವಿರೋಧಿಸಿ ಮಂಗಳೂರು ಚಲೋ ನಡೆಯಲಿದೆ.
ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಮುನ್ನ ಬೋಳಿಯಾರಿನಲ್ಲಿ ಕಾರ್ಯಕರ್ತರಿಗಾಗಿ ಮಾ. 2ರಂದು ಬೆಳಗ್ಗೆ 9.00ಗಂಟೆಗೆ ನವಶಕ್ತಿ ಕಾರ್ಯಕ್ರಮ ನಡೆಯಲಿದ್ದು ಸಂಸದ ನಳಿನ್ ಕುಮಾರ್ ಕಟೀಲು ಭಾಗವಹಿಸಲಿದ್ದಾರೆ. ಹಾಗೆಯೇ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಮಾಹಿತಿ ನೀಡಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಜಿತೇಂದ್ರ ಕೊಟ್ಟಾರಿ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯಿಂದ ಅಶಾಂತಿ ಸೃಷ್ಟಿಗೆ ಕಾರಣ ಕರ್ತರಾಗಿದ್ದಾರೆ. ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಹಿಂದೂ ಕಾರ್ಯಕರ್ತರನ್ನು ಕೇವಲ ಸಂಘಟನೆಯಲ್ಲಿ ಗುರುತಿಸಕೊಂಡ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾನೂನನ್ನು ಹಿಂದೆ ತೆಗೆಯಲಾಗಿದೆ. ರಾಜ್ಯದಲ್ಲಿ ಆಡಳಿತದ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ಬೃಹತ್ ಹೋರಾಟ ನಡೆಯಲಿದೆ. ಹಾಗೆಯೇ ಕಾನೂನು ಸುವ್ಯವಸ್ಥೆ ಹದೆಗಟ್ಟಿದ್ದು ಮತ್ತೆ ಸುವ್ಯವಸ್ಥೆಗಾಗಿ ಹೋರಾಟ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ,
ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ರವಿಚಂದ್ರ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಹಾಗೂ ಮನೋಜ್ ಆಚಾರ್ಯ ಉಪಸ್ಥಿತರಿದ್ದರು. ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಯಶವಂತ ಅಮೀನ್ ವಂದಿಸಿದರು.


