UN NETWORKS
ಉಳ್ಳಾಲ: ಅಲ್ಲಿ ವಿದ್ಯಾರ್ಥಿಗಳಿಗೆ ಹಾಡುವ ಅವಕಾಶವಿತ್ತು. ದೃಶ್ಯ ಮಾಧ್ಯಮಗಳಲ್ಲಿ ನಡೆಯುವ ರಿಯಾಲಿಟಿ ಷೋ ನಂತೆ ನಡೆದ ಕಾರ್ಯಕ್ರಮದಲ್ಲಿ, ಪ್ರತಿಭೆಯಿದ್ದು ಲಾಭಿಯಿಲ್ಲದ ವೇದಿಕೆಯನ್ನು ಕಡ್ಡಾಯವಾಗಿ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಸಂಘಟಕರು ಕಲ್ಪಿಸಿದ್ದರು.
ಅವಕಾಶ ವಂಚಿತ, ಆರ್ಥಿಕವಾಗಿ ಹಿಂದುಳಿದ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಗುರುತಿಸಿ ಕೊಲ್ಯ ದ್ವಾರಕಾನಗರದ ಸಾಮಗಾನ ಸಾಂಸ್ಕೃತಿಕ ಕಲಾಕೇಂದ್ರ ವತಿಯಿಂದ ಶ್ರೀ ಕೃಷ್ಣ ಭಜನಾ ಮಂದಿರ ಆಶ್ರಯದಲ್ಲಿ ದ್ವಾರಕಾನಗರದಲ್ಲಿ ಗುರುವಾರ ನಡೆದ ವಿಭಿನ್ನ ರೀತಿಯ ಹಾಡುವ ಸ್ಪರ್ಧೆಗೆ ರಿಯಾಲಿಟಿ ಷೋ ನ ಮೆರುಗು ನೀಡಲಾಯಿತು.
ಒಂದು ವಾರದಿಂದ ನಡೆದ ಸ್ಪರ್ಧಾಳುಗಳ ಆಯ್ಕೆಗೆ ಸಾಮಗಾನ ಕಲಾಕೇಂದ್ರದ ಮುಖ್ಯಸ್ಥ ಹಾಗೂ ಗೋರಿಗುಡ್ಡೆ ಕಿಟೆಲ್ ಮೆಮೋರಿಯಲ್ ಪಿಯು ಕಾಲೇಜು ಪ್ರಾಂಶುಪಾಲ ವಿಠಲ್ ಅಬೂರ ಅವರ ಮನೆಯಲ್ಲಿ ಆಡಿಷನ್ ನಡೆದಿತ್ತು. 35 ಮಂದಿ ಮೂರು ಬಾರಿ ನಡೆದ ಆಡಿಷನ್ನಿನಲ್ಲಿ ತೀರ್ಪುಗಾರರ ತೀರ್ಪಿನಂತೆ ಕೊನೆಯ ಸುತ್ತಿಗೆ ಏಳು ಮಂದಿ ಪ್ರತಿಭೆಗಳನ್ನು ಆಯ್ಕೆ ನಡೆಸಿದ್ದರು. ಆಯ್ಕೆಯಾದ ಏಳು ಮಂದಿ ವಿದ್ಯಾರ್ಥಿಗಳಿಗೆ ಗುರುವಾರ ದ್ವಾರಕಾನಗರದಲ್ಲಿ ವೇದಿಕೆಯನ್ನು ಕಲ್ಪಿಸಲಾಯಿತು. ಪ್ರತಿಭೆಯಿದ್ದರೂ ಶಾಲಾ ಕಾರ್ಯಕ್ರಮಗಳನ್ನು ಹೊರತುಪಡಿಸಿ ಬೇರೆ ಎಲ್ಲಿಯೂ ಹಾಡಲು ಅವಕಾಶ ಸಿಗದ ವಿದ್ಯಾರ್ಥಿಗಳೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕರೋಕೆ ಆಧರಿಸಿ ಹಾಡು ಹಾಡಿದ ಏಳು ಮಂದಿ ವಿದ್ಯಾರ್ಥಿಗಳಲ್ಲಿ ಇಬ್ಬರು ಹೆತ್ತವರಿಲ್ಲದೆ ಆಶ್ರಮದಲ್ಲಿ ನೆಲೆಸಿದವರಾಗಿದ್ದಾರೆ. ಉಳಿದ ವಿದ್ಯಾರ್ಥಿಗಳೂ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವರು. ಒಬ್ಬರಿಗಿಂತ ಇನ್ನೊಬ್ಬರು ಹಾಡುವುದರಲ್ಲಿ ನಿಸ್ಸೀಮರಾಗಿ ತೀರ್ಪುಗಾರರಿಗೆ ತೀರ್ಪು ಪ್ರಕಟಿಸಲು ಕಷ್ಟದಾಯಕವಾಗಿತ್ತು. ಈ ನಡುವೆ ಸಂಘಟಕರು ಪ್ರೇಕ್ಷಕರಿಂದಲೂ ಮತ ಸಂಗ್ರಹಿಸಿ ಪ್ರತಿಭೆಗಳನ್ನು ಗುರುತಿಸಿದರು.
ಏಳು ಮಂದಿಯ ಪೈಕಿ ಸೋಮೇಶ್ವರ ಆನಂದಾಶ್ರಮ ಪ್ರೌಢಶಾಲೆಯ ವಿದ್ಯಾರ್ಥಿನಿ ಚೈತ್ರಾ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ರೂ. 10,000 ನಗದು ಪುರಸ್ಕಾರ ಪಡೆದುಕೊಂಡಳು. ದ್ವಿತೀಯ ಕುಂಪಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೇತ್ರಾ ರೂ.6,000, ತೃತೀಯ ಕೊಲ್ಯ ಶ್ರೀ ರಮಾನಂದಾಶ್ರಮ ಅನುದಾನಿತ ಶಾಲೆಯ ಶ್ರೇಯಾ ಶೆಣೈ ರೂ.5,000, ಉಳ್ಳಾಲ ಭಾರತ್ ಪ್ರೌಢಶಾಲೆಯ ಮಹಮ್ಮದ್ ರಾಝೀಕ್ ರೂ.4,000, ಗೋರಿಗುಡ್ಡೆ ಕಿಟೆಲ್ ಮೆಮೋರಿಯಲ್ ಪ್ರೌಢಶಾಲೆಯ ನಿರಾಲಿ ರೂ.3,000, ಅದೇ ಶಾಲೆಯ ಶ್ರಾವ್ಯ ರೂ.2,500 ಹಾಗೂ ಕುತ್ತಾರು ಆಶ್ರಮ ವಾಸಿ, ಬಬ್ಬುಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷತಾ ರೂ.2,000 ನಗದು ಪುರಸ್ಕಾರ ಪಡೆದುಕೊಂಡರು.
ಇದೇ ಸಂದರ್ಭ ವಿಜೇತ ವಿದ್ಯಾರ್ಥಿನಿ ಶಾಸ್ತ್ರೀಯ ಸಂಗೀತ ಕಲಿಯಲು, ಪರೀಕ್ಷೆ ಬರೆಯಲು ಹಾಗೂ ಟಿ.ವಿ.ಷೋಗಳಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ ಅದರ ಸಂಪೂರ್ಣ ವೆಚ್ಛವನ್ನು ತಾವೇ ಭರಿಸುವುದಾಗಿ ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್ ಭರವಸೆ ನೀಡಿದರು.
ಸಾಮಗಾನ ಸಾಂಸ್ಕøತಿಕ ಕಲಾಕೇಂದ್ರದ ಸಂಗೀತ ಗುರು ಗಣರಾಜ್ ಭಟ್, ಸಿಂಚನಾ ಆರ್ಕೆಸ್ಟ್ರಾ ತಂಡದ ಶೋಭಾ ಭಾಸ್ಕರನ್, ಅತ್ತಾವರ ಮಧುಸೂದನ ಕುಶೆ ಪ.ಪೂ ಕಾಲೇಜು ಉಪನ್ಯಾಸಕಿ ದುರ್ಗಾಪ್ರಸನ್ನ , , ಉಳ್ಳಾಲ ಭಾರತ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕಸ್ತೂರಿ ಯಸ್.ಸುವರ್ಣ , ಮಂಗಳೂರು ನಾಗಬ್ರಹ್ಮ ಆರ್ಕೆಸ್ಟ್ರಾ ತಂಡದ ಸಂಗೀತ ಭಟ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್, ಮಂಗಳೂರು ರಥಬೀದಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಡಾ| ನವೀನ್ ಎನ್ ಕೊಣಾಜೆ, ಅತ್ತಾವರದ ಮಧುಸೂದನ ಕುಶೆ ಕಾಲೇಜಿನ ಉಪನ್ಯಾಸಕಿ ಸ್ವಾತಿ , ಉದ್ಯಮಿ ವೆಂಕಟೇಶ್ ನ್ಯೂಸ್ಪಾಯಿಂಟ್ ಮುಡಿಪು, ಉದಯವಾಣಿ ವರದಿಗಾರರು ವಸಂತ್ ಎನ್ ಕೊಣಾಜೆ, ವಿ4 ಚಾನೆಲ್ ವರದಿಗಾರರು ಆರೀಫ್ ಕಲ್ಕಟ್ಟ, ಕೊಲ್ಯ ದ್ವಾರಕಾನಗರ ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ನಾಗೇಶ್ ಗಟ್ಟಿ, ಶ್ರೀ ಗುಳಿಗ ಕೊರಗಜ್ಜ ಸೇವಾ ಸಮಿತಿಯ ಯತೀಶ್ ಕೊಲ್ಯ ಮುಖ್ಯ ಅತಿಥಿಗಳಾಗಿದ್ದರು.
ಕಿಟೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಠಲ್ ಅಬೂರ ಸ್ವಾಗತಿಸಿದರು. ಜಿತೇಶ್ ಪೊಳಲಿ ಕಾರ್ಯಕ್ರಮ ನಿರೂಪಿಸಿದರು.


