UN NETWORKS
ಮಂಗಳೂರು: ಸರಕಾರಿ ಕಾಲೇಜುಗಳು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂಸ್ಥೆಯಾಗಿದ್ದು, ಕಷ್ಟದಲ್ಲಿ ಕಲಿಯುವಾಗ ನಮಗೆ ಜೀವನದ ಪಾಠ ಕಲಿಯಲು ಸಹಕಾರಿಯಾಗಿದ್ದು, ಅಂತಹ ವಿದ್ಯಾರ್ಥಿಗಳು ಸಾಧನೆ ಮಾಡಿ ದೊಡ್ಡ ಸ್ಥಾನಕ್ಕೆ ತಲುಪಲು ಸಾದ್ಯವಾಗುತ್ತದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಜೆ.ಆರ್.ಲೋಬೋ ಅಭಿಪ್ರಾಯಪಟ್ಟರು.
ಮಂಗಳೂರು ರಥಬೀದಿಯ ಡಾ| ಪಿ.ದಯಾನಂದ ಪೈ, ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶಿಕ್ಷಕ – ರಕ್ಷಕ ಸಂಘದ ವಾರ್ಷಿಕೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.ಬಡತನ ಎಂಬುದು ಶಾಪವಲ್ಲ ಅದೊಂದು ವರ. ನಾನೂ ಕೂಡಾ ಬಡತನದ ಕುಟುಂಬದಿಂದ ಬಂದಿದ್ದು ಅದು ನನಗೆ ವರವಾಗಿ ಪರಿಣಮಿಸಿದೆ.
ಈ ನಿಟ್ಟಿನಲ್ಲಿ ಇಂತಹ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾಲೇಜಿನೊಂದಿಗೆ ಅವಿನಾಭಾವ ಸಂಬಂಧ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತೆ. ಹೆತ್ತವರಿಗೆ ತಮ್ಮ ಮಕ್ಕಳು ಈ ಕಾಲೇಜಿನಲ್ಲಿ ಯಾವ ರೀತಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಯಾವ ರೀತಿಯ ಮೌಲ್ಯಗಳನ್ನು ಕಲಿಸಲಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಬಾರ್ ಸಿ. ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿ ಕಾಲೇಜು ಹೆತ್ತವರಿಗೆ ಋಣಿಯಾಗಿದ್ದು ಹೆತ್ತವರು ಮತ್ತು ಶಿಕ್ಷಕರು ಜಂಟಿಯಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಕ್ರಮ ಕೈಗೊಂಡು ಯುವ ಜನಾಂಗಕ್ಕೆ ಆಗುವ ಅನಾಹುತವನ್ನು ತಪ್ಪಿಸಬಹುದು ಇದರಿಂದ ಸಂಸ್ಥೆಗೂ, ಹೆತ್ತವರಿಗೂ, ಸಮಾಜಕ್ಕೂ ಪ್ರಯೋಜನವಾಗಲಿದೆ ಎಂದು ಹೇಳಿದರು.
ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಪಾಂಡುರಂಗ ನಾಯಕ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರವಿ ಕುಮಾರ್, ಶೈಕ್ಷಣಿಕ ಸಲಹೆಗಾರ ಡಾ| ಶಿವರಾಮ್, ರಾಜಕೀಯ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ನಾಗಪ್ಪ ಗೌಡ, ವಿದ್ಯಾರ್ಥಿ ಸಂಘದ ನಾಯಕರಾದ ಅಕ್ಷತಾ, ಶಿವಪ್ರಸಾದ್, ಸುರೇಶ್, ಶಕಿಲಾ, ರಾಜಲಕ್ಷ್ಮಿ ಉಪಸ್ಥಿತರಿದ್ದರು.

ಶಿಕ್ಷಕ-ರಕ್ಷಕ ಸಂಘದ ನಿರ್ದೇಶಕರಾದ ಡಾ| ಪ್ರಕಾಶಚಂದ್ರ ಶಿಶಿಲ ಸ್ವಾಗತಿಸಿದರು. ಕಾರ್ಯಕ್ರಮವನ್ನು ಲಾವಣ್ಯ ನಿರ್ವಹಿಸಿದರು.


